IND vs SA 2nd Test: ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಗೆಲುವು; ಸರಣಿ ಸೋಲಿನಿಂದ ಪಾರು
ಗುರುವಾರ, ಜನವರಿ 4ರಂದು ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಎರಡನೇ ದಿನಕ್ಕೆ ಮುಕ್ತಾಯಗೊಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಪ್ರವಾಸಿ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಈ ಮೂಲಕ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಚೊಚ್ಚಲ ಗೆಲುವು ಸಾಧಿಸಿದ ಭಾರತ, 2011ರ ನಂತರ ಮೊದಲ ಬಾರಿಗೆ ಸರಣಿ ಸೋಲದೆ, ಸಮಬಲಗೊಳಿಸಿತು. ಎರಡು ಪಂದ್ಯಗಳ ಸರಣಿಯು ಉಭಯ ತಂಡಗಳು 1-1 ಅಂತರದಲ್ಲಿ ಡ್ರಾಗೊಳಿಸಿದವು.

ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 79 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡವು 12 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು.
ಭಾರತ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 44 ರನ್‌ಗಳ ಜೊತೆಯಾಟ ನಿರ್ಮಿಸಿದರು. ಈ ವೇಳೆ ಆಕ್ರಮಣಕಾರಿಯಾಗಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್ 23 ಎಸೆತಗಳಲ್ಲಿ 6 ಬೌಂಡರಿ ಸಮೇತ 28 ರನ್ ಗಳಿಸಿ ಔಟಾದರು.
ನಂತರ ಬಂದ ಶುಭ್ಮನ್ ಗಿಲ್ ಕೂಡ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ 12 ರನ್ ಗಳಿಸಿ ಔಟಾದರು. ಅಂತಿಮವಾಗಿ ರೋಹಿತ್ ಶರ್ಮಾ ಅಜೇಯ 17 ರನ್ ಮತ್ತು ಗೆಲುವಿನ ಬೌಂಡರಿ ಬಾರಿಸಿದ ಶ್ರೇಯಸ್ ಅಯ್ಯರ್ ಅಜೇಯ 4 ರನ್ ಗಳಿಸಿ ಭಾರತ ತಂಡವನ್ನು ಗೆಲ್ಲಿಸಿದರು.
ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ವೇಗಿಗಳಾದ ಕಗಿಸೊ ರಬಾಡ, ನಾಂದ್ರೆ ಬರ್ಗರ್ ಮತ್ತು ಮಾರ್ಕೊ ಜಾನ್ಸೆನ್ ತಲಾ ಒಂದೊಂದು ವಿಕೆಟ್ ಪಡೆದರು.

ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡವು ತನ್ನ ಐದನೇ ಗೆಲುವು ಸಾಧಿಸಿತು ಮತ್ತು ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಮೊದಲ ಏಷ್ಯಾದ ತಂಡವೆನಿಸಿತು.
ಇದಕ್ಕೂ ಮುನ್ನ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲ ದಿನದಾಟದಂತ್ಯಕ್ಕೆ 62 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ, ಎರಡನೇ ದಿನದಂದು ಬ್ಯಾಟಿಂಗ್ ಆರಂಭಿಸಿತು. ನಂತರ 4 ರನ್ ಸೇರಿಸುವಷ್ಟರಲ್ಲಿ ಡೇವಿಡ್ ಬೆಡಿಂಗ್ಹ್ಯಾಮ್ (11) ಅವರ ವಿಕೆಟ್ ಕಳೆದುಕೊಂಡಿತು.
ಬಳಿಕ ಕ್ರೀಸ್‌ಗೆ ಬಂದ ಕೈಲ್ ವರೆನ್ನೆ ಅವರೊಂದಿಗೆ ಏಡೆನ್ ಮಾರ್ಕ್ರಾಮ್ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ತಂಡದ ಮೊತ್ತ 85 ರನ್‌ಗಳಾಗಿದ್ದಾಗ ಕೈಲ್ ವರೆನ್ನೆ (9) ಔಟಾದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ, ಮತ್ತೊಂದೆಡೆ ನೆಲಕಚ್ಚಿ ಆಡಿದ ಏಡೆನ್ ಮಾರ್ಕ್ರಾಮ್ ಏಕಾಂಗಿಯಾಗಿ ಹೋರಾಡಿ ಶತಕ ಗಳಿಸಿದರು.

ಆರಂಭಿಕ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಅವರು 103 ಎಸೆತಗಳಲ್ಲಿ 17 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 106 ರನ್ ಬಾರಿಸಿದರು. ನಂತರ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಉಳಿದಂತೆ ಮಾರ್ಕೊ ಜಾನ್ಸೆನ್ 11 ರನ್, ಕೇಶವ್ ಮಹಾರಾಜ್ 3 ರನ್, ಕಗಿಸೊ ರಬಾಡ 2, ನಾಂದ್ರೆ ಬರ್ಗರ್ 6 ರನ್, ಲುಂಗಿ ಎನ್‌ಗಿಡಿ 8 ರನ್ ಗಳಿಸಿ ತಂಡದ ಮೊತ್ತ 180ರ ಗಡಿ ಸಮೀಪಿಸಲು ನೆರವಾದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ ಬಿಗಿ ಬೌಲಿಂಗ್ ದಾಳಿ ನಡೆಸಿದರು. 13.5 ಓವರ್‌ಗಳಲ್ಲಿ 61 ರನ್ ನೀಡಿ 6 ವಿಕೆಟ್ ಕಬಳಿಸಿದರು. ಉಳಿದಂತೆ ಮುಖೇಶ್ ಕುಮಾರ್ 2 ವಿಕೆಟ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಆಗಿತ್ತು. ಈ ವೇಳೆ ಭಾರತದ ಮೊಹಮ್ಮದ್ ಸಿರಾಜ್ 6 ವಿಕೆಟ್ ಪಡೆದು ಮಿಂಚಿದ್ದರು. ನಂತರ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 153 ರನ್ ಗಳಿಸಿ 98 ರನ್‌ಗಳ ಮುನ್ನಡೆ ಸಾಧಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications