ಬುಧವಾರ, ಜನವರಿ 3ರಿಂದ ಕೇಪ್ ಟೌನ್‌ನಲ್ಲಿ ಆರಂಭವಾಗಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಂದು ಪ್ರವಾಸಿ ಭಾರತ ತಂಡವು ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 23.2 ಓವರ್‌ಗಳಲ್ಲಿ 55 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಭಾರತೀಯ ವೇಗಿ ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ದಾಳಿ ನಡೆಸಿ 9 ಓವರ್‌ಗಳಲ್ಲಿ 15 ರನ್ ನೀಡಿ 6 ವಿಕೆಟ್‌ಗಳನ್ನು ಪಡೆದರು.

ದಕ್ಷಿಣ ಆಫ್ರಿಕಾ ಪರ ಕೈಲ್ ವೆರ್ರೆನ್ 15 ರನ್ ಗಳಿಸಿದರೆ, ಡೇವಿಡ್ ಬೆಡಿಂಗ್ ಹ್ಯಾಮ್ 12 ರನ್ ಗಳಿಸಿದರು. ಈ ಇಬ್ಬರು ಬ್ಯಾಟರ್‌ಗಳು ಮಾತ್ರ ಎರಡಂಕಿ ಮೊತ್ತ ದಾಟಿದರು.
ಇನ್ನು ಮೊಹಮ್ಮದ್ ಸಿರಾಜ್ ತಮ್ಮ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಬಾರಿಗೆ ಐದು ವಿಕೆಟ್‌ಗಳ ಸಾಧನೆ ಮಾಡಿದರು. ಮೊಹಮ್ಮದ್ ಸಿರಾಜ್ ಹೊರತುಪಡಿಸಿ, ಜಸ್ಪ್ರೀತ್ ಬುಮ್ರಾ ಮತ್ತು ಮುಖೇಶ್ ಕುಮಾರ್ ತಲಾ ಎರಡು ವಿಕೆಟ್ ಪಡೆದರು.
ಪ್ರವಾಸಿ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಹಂಗಾಮಿ ನಾಯಕ ಡೀನ್ ಎಲ್ಗರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಅವರ ನಿರ್ಧಾರ ಕೆಲವೇ ಗಂಟೆಗಳಲ್ಲಿ ತಲೆಕೆಳಗಾಯಿತು. ಭಾರತದ ಬೌಲಿಂಗ್ ದಾಳಿಗೆ ಪ್ರತಿರೋಧ ನೀಡಲು ಆತಿಥೇಯ ತಂಡದ ಬ್ಯಾಟರ್‌ಗಳು ವಿಫಲರಾದರು.
ಇನ್ನು ಭಾರತ ತಂಡ ತನ್ನ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆ ಮಾಡಿದೆ. ರವಿಚಂದ್ರನ್ ಅಶ್ವಿನ್ ಅವರ ಬದಲಾಗಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಆಡಿಸಿದರೆ, ಮತ್ತೊಬ್ಬ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಹೊರಗಿಟ್ಟು ಮುಖೇಶ್ ಕುಮಾರ್‌ಗೆ ಅವಕಾಶ ನೀಡಲಾಯಿತು.
ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆತಿಥೇಯ ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು. ಸರಣಿ ಸಮಬಲಗೊಳಿಸಲು ಭಾರತಕ್ಕೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿದೆ.