ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯ ಗುವಾಹಟಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಂದುಕೊಂಡಂತೆ ಏನು ಆಗುತ್ತಿಲ್ಲ. ಟಾಸ್ ಪ್ರವಾಸಿ ತಂಡದ ಪಾಲಾದರೆ, ಬೌಲರ್‌ಗಳು ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್ ಪಡೆಯಲು ಪರದಾಟ ನಡೆಸಿದ್ದಾರೆ. ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಸುಸ್ಥಿತಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಸೆನುರನ್ ಮುತ್ತುಸಾಮಿ. 2ನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳನ್ನು ದಂಡಿಸಿದ ಈ ಬ್ಯಾಟರ್ ಮೂರಂಕಿ ಮುಟ್ಟಿದರು.
31 ವರ್ಷದ ಸೆನುರನ್ ಮುತ್ತುಸಾಮಿ ಆಡಿದ ಧಾಟಿ ಅಭಿಮಾನಿಗಳನ್ನು ರಂಜಿಸಿತು. ಆದರೆ ವಿಕೆಟ್ ಹಿಂದೆ ನಿಂತಿದ್ದ ಪಂತ್ ಮುಖದಲ್ಲಿ ಚಿಂತೆಯ ಗೆರೆ ಮೂಡಿಸಿತು. ಇದೇ ಮೊದಲ ಬಾರಿಗೆ ಭಾರತದ ಪ್ರವಾಸವನ್ನು ಮಾಡಿರುವ ಎಡಗೈ ಬ್ಯಾಟರ್ ಅಬ್ಬರಿಸಿದರು. ಅಲ್ಲದೆ ಈ ಟೂರ್‌ನ್ನು ಸ್ಮರಣೀಯವಾಗಿಸಿಕೊಂಡರು. ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ 7 ಪಂದ್ಯಗಳನ್ನು ಆಡಿರುವ ಸೆನುರನ್ ಮುತ್ತುಸಾಮಿ ಶತಕವನ್ನು ಬಾರಿಸಿರಲಿಲ್ಲ. ಆದರೆ ಗುವಾಹಟಿ ಅಂಗಳದಲ್ಲಿ ಶತಕ ಬಾರಿಸಿ ಮಿಂಚಿದರು.

ದಕ್ಷಿಣ ಆಫ್ರಿಕಾ ಎರಡನೇ ದಿನಾದಟದಲ್ಲಿ 6 ವಿಕೆಟ್‌ಗೆ 247 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರೆಸಿತು. ಈ ವೇಳೆ ಅಜೇಯ 25 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದ ಸೆನುರನ್ ಮುತ್ತುಸಾಮಿ, ಭಾರತೀಯ ಬೌಲರ್‌ಗಳು ಕೇಳಿದ ಪ್ರಶ್ನೆ ಉತ್ತಮವಾಗಿ ಉತ್ತರ ನೀಡಿದರು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದ ಮುತ್ತುಸಾಮಿ ಅಮೋಘ ಬ್ಯಾಟಿಂಗ್ ನಡೆಸಿ ದಾಖಲೆ ಬರೆದರು. ಪ್ರಸಕ್ತ ಸರಣಿಯಲ್ಲಿ ಮೊದಲ ಶತಕ ಬಾರಿಸಿದ ಹೆಗ್ಗಳಿಕೆ ಸಹ ಇವರದ್ದಾಯಿತು. ಅಲ್ಲದೆ ಭಾರತದ ವಿರುದ್ಧ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಶತಕ ಸಿಡಿಸಿದರು.
ಸೆನುರನ್ ಮುತ್ತುಸಾಮಿ 206 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ನೆರವಿನಿಂದ 109 ರನ್ ಬಾರಿಸಿ ಮಿಂಚಿದರು. ಇವರ ಆಟಕ್ಕೆ ಬ್ರೇಕ್ ಹಾಕಲು ಭಾರತದ ಬೌಲರ್‌ಗಳ ಹೆಣಗಾಟ ನಡೆಸಿದರು. ಆದರೆ ಮೊಹಮ್ಮದ್ ಸಿರಾಜ್ ಅವರ ಬೌನ್ಸರ್ ಎಸೆತವನ್ನು ತಪ್ಪಾಗಿ ಗ್ರಹಿಸಿ ಯಶಸ್ವಿ ಜೈಸ್ವಾಲ್‌ಗೆ ಕ್ಯಾಚ್ ನೀಡಿದರು. ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಶತಕ ಬಾರಿಸಿದ ಲೆಕ್ಕಾರಾದಲ್ಲಿ ಲ್ಯಾನ್ಸ್ ಕ್ಲೂಸ್ನರ್ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು 1997 ರಲ್ಲಿ ಕೇಪ್‌ಟೌನ್‌ನಲ್ಲಿ ಈ ಸಾಧನೆ ಮಾಡಿದ್ದರು. 2019ರಲ್ಲಿ ಕ್ವಿಂಟನ್ ಡಿಕಾಕ್ ಸಹ ಇಂತಹದ್ದೇ ಸಾಧನೆ ಮಾಡಿದ್ದರು. ಈಗ ಸೆನುರನ್ ಮುತ್ತುಸಾಮಿ ಈ ಸಾಧನೆ ಮಾಡಿದ್ದಾರೆ.
ಸೆನುರನ್ ಮುತ್ತುಸಾಮಿ ಅವರು ಮತ್ತೊಂದು ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿಕೊಂಡರು. ಭಾರತ, ಪಾಕ್, ಬಾಂಗ್ಲಾ ವಿರುದ್ಧ 50 ಅಥವಾ ಅದಕ್ಕಿಂತ ದೊಡ್ಡ ಇನಿಂಗ್ಸ್ ಕಟ್ಟಿದ ದಕ್ಷಿಣ ಆಫ್ರಿಕಾದ ನಾಲ್ಕನೇ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್, ಮಾರ್ಕ್ ಬೌಚರ್ ಮತ್ತು ಟೆಂಬಾ ಬವುಮಾ ಈ ಸಾಧನೆ ಮಾಡಿದ್ದರು.