IND vs SA 3ನೇ ಟಿ20: ಈ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟಿದ್ದಾರೆ ಪಂತ್, ಇಶಾನ್ ಕಿಶನ್ ಮತ್ತು ದಿನೇಶ್ ಕಾರ್ತಿಕ್

ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಭಾರತ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಡಲು ಕಣಕ್ಕಿಳಿದಿರುವ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಇತ್ತಂಡಗಳ ನಡುವಿನ 5 ಪಂದ್ಯಗಳ ಈ ಟಿ ಟ್ವೆಂಟಿ ಸರಣಿಯಲ್ಲಿ ಮೊದಲೆರಡು ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು ಈ ಎರಡೂ ಪಂದ್ಯಗಳಲ್ಲಿಯೂ ಸೋತಿರುವ ಟೀಮ್ ಇಂಡಿಯಾ ಸರಣಿ ಸೋಲಿನ ಭೀತಿಯಲ್ಲಿದೆ.
ಟೀಮ್ ಇಂಡಿಯಾ ತವರಿನಲ್ಲಿ ನಡೆಯುತ್ತಿರುವ ಈ ಸರಣಿಯನ್ನು ಗೆದ್ದು ಭಾರೀ ಮುಖಭಂಗ ತಪ್ಪಿಸಿಕೊಳ್ಳಬೇಕೆಂದರೆ ಉಳಿದಿರುವ ಎಲ್ಲಾ 3 ಪಂದ್ಯಗಳಲ್ಲಿಯೂ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದ್ದು, ಅತ್ತ ಭಾರತ ತಂಡಕ್ಕೆ ತವರಿನಲ್ಲಿಯೇ ಮಣ್ಣು ಮುಕ್ಕಿಸಿರುವ ದಕ್ಷಿಣ ಆಫ್ರಿಕಾ ಸರಣಿ ಗೆಲ್ಲುವ ಫೇವರಿಟ್ ತಂಡವಾಗಿ ನಿಂತಿದೆ. ಇತ್ತಂಡಗಳ ನಡುವಿನ ತೃತೀಯ ಟಿ ಟ್ವೆಂಟಿ ಪಂದ್ಯ ಇಂದು ( ಜೂನ್ 14 ) ವಿಶಾಖಪಟ್ಟಣದ ಡಾ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಟೀಮ್ ಇಂಡಿಯಾಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದರೆ ಮಾತ್ರ ಟೀಮ್ ಇಂಡಿಯಾಗೆ ಸರಣಿ ವಶಪಡಿಸಿಕೊಳ್ಳುವ ಆಸೆ ಜೀವಂತವಾಗಿ ಉಳಿದುಕೊಳ್ಳಲಿದ್ದು, ರಿಷಭ್ ಪಂತ್ ಪಡೆ ಈ ಪಂದ್ಯದಲ್ಲಿ ಗೆದ್ದು ಕಮ್ ಬ್ಯಾಕ್ ಮಾಡುತ್ತಾ ಅಥವಾ ದಕ್ಷಿಣ ಆಫ್ರಿಕಾ ತಂಡವೇ ಈ ಪಂದ್ಯದಲ್ಲಿಯೂ ಗೆದ್ದು ಸರಣಿಯನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುತ್ತಾ ಎಂಬ ಕುತೂಹಲ ಉಂಟಾಗಿದೆ. ಇನ್ನು ಇದರ ಜತೆಗೆ ಈ ಮಹತ್ವದ ಹಣಾಹಣಿಯಲ್ಲಿ ಇತ್ತಂಡಗಳ ಕೆಲವು ಆಟಗಾರರು ತಮ್ಮದೇ ಆದ ವೈಯಕ್ತಿಕ ಮೈಲಿಗಲ್ಲುಗಳು ಮತ್ತು ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆಗಳಿದ್ದು, ಅಂತಹ ಆಟಗಾರರ ಪಟ್ಟಿ ಕೆಳಕಂಡಂತಿದೆ.

ಈ ಮೈಲಿಗಲ್ಲುಗಳತ್ತ ರಿಷಭ್ ಪಂತ್ ಚಿತ್ತ
ಈ ಸರಣಿಗೂ ಮುನ್ನ ನಾಯಕನಾಗಿ ನೇಮಕಗೊಂಡಿದ್ದ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ ಹೊರಬಿದ್ದ ನಂತರ ತಂಡದ ನಾಯಕತ್ವವನ್ನು ವಹಿಸಿಕೊಂಡಿರುವ ರಿಷಭ್ ಪಂತ್ ನಾಯಕನಾಗಿ ಅಕ್ಷರಶಃ ವಿಫಲರಾಗಿದ್ದಾರೆ. ಪಂತ್ ಇಂದಿನ ಪಂದ್ಯದಲ್ಲಿ ಈ ಕೆಳಕಂಡ ಮೈಲಿಗಲ್ಲುಗಳನ್ನು ಮುಟ್ಟುವ ಸಾಧ್ಯತೆಗಳಿವೆ.
• ರಿಷಭ್ ಪಂತ್ ಇಲ್ಲಿಯವರೆಗೂ ಒಟ್ಟು 99 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು ಇಂದಿನ ಪಂದ್ಯದ ಮೂಲಕ 100 ಅಂತರರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ರಿಷಭ್ ಪಂತ್ ಎಲ್ಲಾ ಮಾದರಿಯ ಕ್ರಿಕೆಟ್ ಸೇರಿದಂತೆ ಇಲ್ಲಿಯವರೆಗೂ ಒಟ್ಟು 99 ಸಿಕ್ಸರ್ ಬಾರಿಸಿದ್ದು, ಇಂದಿನ ಪಂದ್ಯದಲ್ಲಿ ಒಂದು ಸಿಕ್ಸರ್ ಬಾರಿಸಿದರೆ 100 ಸಿಕ್ಸರ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಉಳಿದ ಆಟಗಾರರು ನಿರ್ಮಿಸಬಹುದಾದ ಮೈಲಿಗಲ್ಲುಗಳು
• ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 47 ಫೋರ್ ಬಾರಿಸಿರುವ ಇಶಾನ್ ಕಿಶನ್ ಈ ಪಂದ್ಯದಲ್ಲಿ 3 ಫೋರ್ ಬಾರಿಸಿದರೆ 50 ಫೋರ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ದಿನೇಶ್ ಕಾರ್ತಿಕ್ ಕೂಡ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 50 ಫೋರ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟುವ ಸನಿಹದಲ್ಲಿದ್ದು, ಇಂದಿನ ಪಂದ್ಯದಲ್ಲಿ 6 ಫೋರ್ ಬಾರಿಸಬೇಕಾದ ಅಗತ್ಯವಿದೆ.

ಈ ಮೈಲಿಗಲ್ಲುಗಳ ಮೇಲೆ ಡಿ ಕಾಕ್ ಕಣ್ಣು
• ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್, ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಈ ಪಂದ್ಯದಲ್ಲಿ ಒಂದೇ ಒಂದು ಕ್ಯಾಚ್ ಪಡೆದರೂ 50 ಅಂತರಾರಾಷ್ಟ್ರೀಯ ಟಿ ಟ್ವೆಂಟಿ ಕ್ಯಾಚ್ ಪಡೆದ ಆಟಗಾರ ಎಂಬ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 192 ಬೌಂಡರಿಗಳನ್ನು ಬಾರಿಸಿರುವ ಡಿ ಕಾಕ್ ಈ ಪಂದ್ಯದಲ್ಲಿ 8 ಬೌಂಡರಿ ಬಾರಿಸಿದರೆ 200 ಅಂತರರಾಷ್ಟ್ರೀಯ ಟಿ ಟ್ವೆಂಟಿ ಬೌಂಡರಿ ಬಾರಿಸಿದ ಆಟಗಾರ ಎಂಬ ಮೈಲಿಗಲ್ಲನ್ನು ತಲುಪಲಿದ್ದಾರೆ.
• ಕ್ವಿಂಟನ್ ಡಿಕಾಕ್ ಇಲ್ಲಿಯವರೆಗೂ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 1849 ರನ್ ಕಲೆಹಾಕಿದ್ದು, ದಕ್ಷಿಣ ಆಫ್ರಿಕಾ ಪರ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಜೆಪಿ ಡ್ಯುಮಿನಿ ( 1934 ರನ್ ) ದಾಖಲೆ ಮುರಿಯಲು 86 ರನ್ ಬಾರಿಸಬೇಕಾದ ಅಗತ್ಯವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications