ಭಾರತ vs ದ. ಆಫ್ರಿಕಾ: ನಿರ್ಣಾಯಕ 3ನೇ ಟೆಸ್ಟ್ ಪಂದ್ಯದ ಆರಂಭ ಯಾವಾಗ? ಸಂಭಾವ್ಯ ತಂಡ ಹಾಗೂ ದಾಖಲೆಗಳು

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಎರಡು ಪಮದ್ಯಗಳು ಮುಕ್ತಾಯವಾಗಿದ್ದು ಎರಡು ತಂಡಗಳು ಕೂಡ ತಲಾ ಒಂದೊಂದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಸರಣಿ ಸಮಬಲಗೊಂಡಿದೆ. ಹೀಗಾಗಿ ಈ ಟೆಸ್ಟ್ ಸರಣಿಯ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೇಲೆ ಎಲ್ಲಾ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ.
ಸೆಂಚುರಿಯನ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಟೆಸ್ಟ್ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಅದ್ಭುತ ರೀತಿಯಲ್ಲಿ ತಿರುಗಿಬಿದ್ದಿದ್ದು ಭಾರತ ತಂಡಕ್ಕೆ ಸೋಲಿನ ರುಚಿ ತೋರಿಸಿದೆ. ಜೊಹನ್ಸ್‌ವರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತ ಈವರೆಗೆ ಸೋಲಿಲ್ಲದ ಸರದಾರನಾಗಿ ಗುರುತಿಸಿಕೊಂಡಿತ್ತು. ಆದರೆ ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧ ಮೇಲುಗೈ ಸಾಧಿಸಿದ್ದು 7 ವಿಕೆಟ್‌ಗಳ ಅಂತರದ ಜಯ ದಾಖಲಿಸಿಕೊಂಡಿದೆ.
ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಈವರೆಗೆ ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಭಾರತ ಆರಂಭಿಕ ಪಂದ್ಯದಲ್ಲಿಯೇ ಗೆಲುವು ಸಾಧಿಸಿದ್ದ ಕಾರಣದಿಂದಾಗಿ ಈ ಬಾರಿ ಸರಣಿ ಗೆಲ್ಲುವ ಆತ್ಮ ವಿಶ್ವಾಸ ಹೆಚ್ಚಾಗಿದೆ. ಎರಡನೇ ಪಂದ್ಯದಲ್ಲಿ ಸೋಲು ಕಂಡಿದ್ದರೂ ಕೇಪ್‌ಟೌನ್‌ನಲ್ಲಿ ನಡೆಯಲಿರುವ ಸರಣಿಯ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲ್ಲುವ ಅವಕಾಶವನ್ನು ಹೊಂದಿದೆ. ಅಲ್ಲದೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮರಳುವ ಕಾರಣ ತಂಡದ ಆತ್ಮ ವಿಶ್ವಾಸ ಹೆಚ್ಚಲಿದೆ.
ಹಾಗಾದರೆ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದ ಆರಂಭ ಯಾವಾಗ? ಸಂಭಾವ್ಯ ಆಡುವ ಬಳಗ ಹೇಗಿದೆ? ಹಾಗೂ ನೇರಪ್ರಸಾರದ ಮಾಹಿತಿಯನ್ನು ಈ ವರದಿಯಲ್ಲಿ ನೋಡೋಣ.. ಮುಂದೆ ಓದಿ..

ಪಂದ್ಯದ ದಿನಾಂಕ ಹಾಗೂ ಸಮಯ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜನವರಿ 11ರಿಂದ ಆರಂಭವಾಗಲಿದೆ. ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದೆ.

ನೇರಪ್ರಸಾರದ ಮಾಹಿತಿ
ಭಾರತದಲ್ಲಿ ಈ ಪಂದ್ಯದ ನೇರ ಪ್ರಸಾರದ ಹಕ್ಕು ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್ ಹೊಂದಿದ್ದು ಸ್ಟಾರ್‌ಸ್ಪೋರ್ಟ್ಸ್ ವಾಹಿನಿಯಲ್ಲಿ ಪಂದ್ಯ ನೇರಪ್ರಸಾರವಾಗಲಿದೆ. ಅಲ್ಲದೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರು ಈ ವೇದಿಕೆಯಲ್ಲಿ ಕೂಡ ಪಂದ್ಯವನ್ನು ವೀಕ್ಷಿಸುವ ಅವಕಾಶವನ್ನು ನೀಡಲಾಗಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾದ ಸಂಭಾವ್ಯ ತಂಡಗಳು
ಭಾರತದ ಸಂಭಾವ್ಯ ತಂಡ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಬ್ ಪಂತ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ / ಇಶಾಂತ್ ಶರ್ಮಾ.
ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ, ಕೈಲ್ ವೆರ್ರೆನ್ (ವಿಕಟ್ ಕೀಪರ್), ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ, ಲುಂಗಿ ಎನ್ಗಿಡಿ, ಡುವಾನ್ನೆ ಒಲಿವಿಯರ್.

ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಭಾರತದ ದಾಖಲೆ
ಕೇಪ್‌ಟೌನ್ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಭಾರತ ಅತ್ಯಂತ ಕಳಪೆ ದಾಖಲೆಯನ್ನು ಹೊಂದಿದೆ. ಭಾರತ ಈವರೆಗೆ ಈ ಪಂದ್ಯದಲ್ಲಿ ಐದು ಪಂದ್ಯಗಳನ್ನು ಆಡಿದ್ದು ಒಂದರಲ್ಲಿಯೂ ಗೆಲುವು ಸಾಧಿಸಿಲ್ಲ. ಮೂರು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆದ್ದಿದ್ದರೆ ಎರಡು ಪಂದ್ಯಗಳು ಡ್ರಾ ಫಲಿತಾಂಶವನ್ನು ಪಡೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications