
ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಮತ್ತು 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟ ನಡೆಸಲಿದೆ. ಇನ್ನು ಟೀಮ್ ಇಂಡಿಯಾ ತವರು ನೆಲದಲ್ಲಿ ಇತ್ತೀಚೆಗಷ್ಟೇ ನಡೆದ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಗಳನ್ನಾಡಿ ಎರಡೂ ಸರಣಿಗಳಲ್ಲಿಯೂ ಜಯ ಸಾಧಿಸಿತ್ತು. ಹೀಗೆ ನ್ಯೂಜಿಲೆಂಡ್ ವಿರುದ್ಧ ಗೆದ್ದು ಜಯದ ಅಲೆಯಲ್ಲಿ ತೇಲುತ್ತಿರುವ ಟೀಮ್ ಇಂಡಿಯಾ ಇದೀಗ ಹರಿಣಗಳ ನೆಲದಲ್ಲಿಯೂ ಕೂಡ ಜಯದ ಬಾವುಟವನ್ನು ಹಾರಿಸುವ ಯೋಜನೆಯಲ್ಲಿದೆ.
ಇನ್ನು ಎಲ್ಲಾ ಯೋಜನೆಯ ಪ್ರಕಾರವೇ ನಡೆದಿದ್ದರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಪ್ರಥಮ ಪಂದ್ಯ ಡಿಸೆಂಬರ್ 17ರಿಂದ ಆರಂಭವಾಗಬೇಕಿತ್ತು. ಅದರೆ ಒಮಿಕ್ರಾನ್ ವೈರಸ್ ಕಾರಣದಿಂದಾಗಿ 9 ದಿನಗಳು ತಡವಾಗಿ ಇತ್ತಂಡಗಳ ನಡುವಿನ ಟೆಸ್ಟ್ ಸರಣಿ ಆರಂಭವಾಗುತ್ತಿದ್ದು ಡಿಸೆಂಬರ್ 26ರಂದು ಪ್ರಥಮ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಕಠಿಣ ಅಭ್ಯಾಸವನ್ನು ಟೀಮ್ ಇಂಡಿಯಾ ಆಟಗಾರರು ಮಾಡುತ್ತಿದ್ದು, ಅಜಿಂಕ್ಯ ರಹಾನೆ ಕಳಪೆ ಫಾರ್ಮ್ ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಇನ್ನು ಭಾರತ ಟೆಸ್ಟ್ ತಂಡದಲ್ಲಿ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರಾಗೆ ಸಿಕ್ಕಷ್ಟು ಸಾಲು ಸಾಲು ಅವಕಾಶಗಳು ಇತರೆ ಯಾವುದೇ ಆಟಗಾರರಿಗೂ ಕೂಡ ಸಿಕ್ಕಿಲ್ಲ ಎಂದೇ ಹೇಳಬಹುದು. ಹೌದು, ಈ ಇಬ್ಬರೂ ಸಹ ಭಾರತ ತಂಡದ ಪರ ದೊಡ್ಡ ಇನ್ನಿಂಗ್ಸ್ ಆಡಿ ತಿಂಗಳುಗಳೇ ಕಳೆದಿವೆ. ಆದರೂ ಸಹ ಉತ್ತಮ ಪ್ರದರ್ಶನ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಸಾಲು ಸಾಲು ಅವಕಾಶಗಳು ನೀಡುತ್ತಾ ಬರಲಾಗಿದ್ದು 2 ವರ್ಷಗಳು ಕಳೆದರೂ ಅಂತಹ ಹೇಳಿಕೊಳ್ಳುವ ಪ್ರದರ್ಶನವನ್ನು ನೀಡುವಲ್ಲಿ ಇಬ್ಬರೂ ಸಹ ಸಫಲರಾಗಿಲ್ಲ.
ಅದರಲ್ಲಿಯೂ ವಿಶೇಷವಾಗಿ ಅಜಿಂಕ್ಯ ರಹಾನೆ ತೀರಾ ಕಳಪೆಯಾಗಿ ಕೆಟ್ಟ ಪ್ರದರ್ಶನ ನೀಡುತ್ತಾ ಬಂದಿದ್ದು, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸಕ್ಕೆ ಪ್ರಕಟವಾಗಿರುವ ಭಾರತ ಟೆಸ್ಟ್ ತಂಡದಲ್ಲಿ ತಮ್ಮ ಉಪನಾಯಕನ ಸ್ಥಾನವನ್ನು ಕೂಡ ಕಳೆದುಕೊಂಡಿದ್ದಾರೆ. ಹೌದು, ಟೀಮ್ ಇಂಡಿಯಾದ ಕಳೆದ ಟೆಸ್ಟ್ ಸರಣಿಯವರೆಗೂ ಭಾರತ ತಂಡದ ಉಪ ನಾಯಕನಾಗಿದ್ದ ಅಜಿಂಕ್ಯ ರಹಾನೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತನ್ನ ಉಪನಾಯಕನ ಸ್ಥಾನವನ್ನು ಕಳೆದುಕೊಂಡಿದ್ದು ಕೇವಲ ಓರ್ವ ಆಟಗಾರನಾಗಿ ಮಾತ್ರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಕೂಡಾ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗದ ಅಜಿಂಕ್ಯ ರಹಾನೆಗೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡು ಇಲ್ಲವೇ ಮಡಿ ಸರಣಿ ಎಂದೇ ಹೇಳಬಹುದು. ಈಗಾಗಲೇ ಹಲವಾರು ಹಿರಿಯ ಕ್ರಿಕೆಟಿಗರು ಅಜಿಂಕ್ಯ ರಹಾನೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದು ಅಜಿಂಕ್ಯ ರಹಾನೆ ಕೂಡ ಮೈದಾನಕ್ಕಿಳಿದು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ನೆಟ್ ಅಭ್ಯಾಸದ ವೇಳೆ ಟೀಮ್ ಇಂಡಿಯಾದ ಯುವ ಬೌಲರ್ ದೀಪಕ್ ಚಹರ್ ಎಸೆದ ಎಸೆತಗಳನ್ನು ಸಮರ್ಥವಾಗಿ ಎದುರಿಸಲಾಗದೇ ಅಜಿಂಕ್ಯ ರಹಾನೆ ಪರದಾಡಿದ್ದಾರೆ.
ದೀಪಕ್ ಚಹರ್ ನೆಟ್ ಅಭ್ಯಾಸದಲ್ಲಿ ತಾವು ಬೌಲಿಂಗ್ ಮಾಡಿರುವ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಈ ವಿಡಿಯೋದಲ್ಲಿ ಅಜಿಂಕ್ಯ ರಹಾನೆ ದೀಪಕ್ ಚಾಹರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಈ ವಿಡಿಯೋ ನೋಡಿದ ಕ್ರಿಕೆಟ್ ಅಭಿಮಾನಿಗಳು ಅಜಿಂಕ್ಯ ರಹಾನೆ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಫಾರ್ಮ್ ಕಂಡುಕೊಳ್ಳುವುದರಲಿ, ಆಡುವ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವುದು ಕೂಡ ಕಷ್ಟ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.