
ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದೆ. ಈ ಸೋಲಿನ ಬಗ್ಗೆ ಸಾಕಷ್ಟು ವಿಮರ್ಶೆಗಳು ನಡೆಯುತ್ತಿದೆ. ಸರಣಿಯಲ್ಲಿ ಇನ್ನೂ ಐದು ಪಂದ್ಯಗಳು ಬಾಕಿಯಿರುವ ಕಾರಣ ಯಾವ ವಿಭಾಗದಲ್ಲಿ ಭಾರತ ತಂಡ ಸುಧಾರಿಸಿಕೊಳ್ಳಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಮೊದಲ ಬಾರಿಗೆ ತಂಡದ ನಾಯಕತ್ವ ವಹಿಸಿಕೊಂಡ ರಿಷಭ್ ಪಂತ್ ಅವರ ನಿರ್ಧಾರಗಳ ಬಗ್ಗೆ ಕೂಡ ಪ್ರಶ್ನೆಗಳು ಎದ್ದಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ನಾಯಕ ರಿಷಭ್ ಪಂತ್ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರನ್ನು ಬಳಸಿಕೊಂಡ ರೀತಿಯ ಬಗ್ಗೆ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಪ್ರಶ್ನೆ ಮಾಡಿದ್ದಾರೆ. ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಪಡೆದುಕೊಂಡ ಸ್ಪಿನ್ನರ್‌ಗೆ ಕೇವಲ ಎರಡು ಓವರ್ ನೀಡಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ ಆಶಿಶ್ ನೆಹ್ರಾ.
ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಧರಿಸಿದ ಯುಜುವೇಂದ್ರ ಚಾಹಲ್ ದಕ್ಷಿಣ ಆಫ್ರಿಕಾ ವಿರುದ್ಧಧ ಮೊದಲ ಪಂದ್ಯದಲ್ಲಿ ಕೇವಲ 13 ಎಸೆತಗಳನ್ನು ಮಾತ್ರವೇ ಎಸೆದಿದ್ದರು. ಇದರಲ್ಲಿ ಅವರು 26 ರನ್‌ಗಳನ್ನು ಬಿಟ್ಟುಕೊಟ್ಟರು. ಆದರೆ ಡೇವಿಡ್ ಮಿಲ್ಲರ್ ಹಾಗೂ ವಾನ್ ಡರ್ ಡುಸೆನ್ ಅವರು ಕ್ರೀಸ್‌ನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಚಾಹಲ್ ಅವರನ್ನು ದಾಳಿಗಿಳಿಸಬಹುದಾಗಿತ್ತು ಎಂದಿದ್ದಾರೆ.
"ರಿಷಬ್ ಪಂತ್ ಓರ್ವ ಯುವ ನಾಯಕ. ಆತ ಕಲಿಯುತ್ತಿದ್ದು ಮುಂದಿನ ದಿನಗಳಲ್ಲಿ ಹಲವು ವಿಚಾರಗಳನ್ನು ಅರ್ಥ ಮಾಡಿಕೊಳ್ಳಲಿದ್ದಾರೆ. ಕೋಚ್ ದ್ರಾವಿಡ್‌ಗೆ ಚಾಹಲ್ ಒಂದು ಓವರ್‌ಗಳನ್ನು ಎಸೆಯಬಹುದು ಎನಿಸಿದಲ್ಲಿ ಅವರು ಖಂಡಿತಾ ಸಂದೇಶವನ್ನು ರವಾನಿಸಲಿದ್ದಾರೆ. ಅವರಿಬ್ಬರು ಇಂತಾ ವಿಚಾರಗಳಲ್ಲಿ ಸರಳವಾಗಿದ್ದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು" ಎಂದಿದ್ದಾರೆ ಆಶಿಶ್ ನೆಹ್ರಾ.
"ಯುಜುವೇಂದ್ರ ಚಾಹಲ್ ಅವರಂತಾ ಬೌಲರ್ ಇಂದು ಕೇವಲ ಎರಡು ಓವರ್‌ಗಳನ್ನು ಎಸೆದಿದ್ದು ನನಗೆ ಬಹಳ ಅಚ್ಚರಿಯಾಯಿತು. ಅವರು ಮಿಲ್ಲರ್, ವಾನ್‌ಡರ್ ಡುಸೆನ್ ಜೋಡಿಗೆ ಬೌಲಿಂಗ್ ಮಾಡಬೇಕಾಗಿತ್ತು. ಅದರಲ್ಲೂ ದಕ್ಷಿಣ ಆಫ್ರಿಕಾ ಬೆನ್ನಟ್ಟುದ ರೇಸ್‌ನಲ್ಲಿ ಹಿಂದಿದ್ದಾಗ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು. ಅಲ್ಲಿ ರಿಷಬ್ ಪಂತ್ ಖಂಡಿತವಾಗಿಯೂ ತಪ್ಪೆಸಗಿದ್ದಾರೆ. ಪವರ್‌ಪ್ಲೇನಲ್ಲಿಯೂ ಅವರು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಆರಿ ಓವರ್‌ಗಳಲ್ಲಿ ಐವರು ಬೌಲರ್‌ಗಳನ್ನು ಬಳಸಿಕೊಂಡರು" ಎಂದಿದ್ದಾರೆ ಆಶಿಶ್ ನೆಹ್ರಾ.