
ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ಚೇತೇಶ್ವರ್ ಪುಜಾರ ಹಾಗೂ ಅಜಿಂಕ್ಯಾ ರಹಾನೆ ಮತ್ತೊಮ್ಮೆ ವೈಫಲ್ಯವನ್ನು ಅನುಭವಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿಯೂ ಈ ಇಬ್ಬರು ಅನುಭವಿ ಆಟಗಾರರಿಂದ ಟೀಮ್ ಇಂಡಿಯಾಗೆ ಸೂಕ್ತ ಬೆಂಬಲ ದೊರೆಯಲಿಲ್ಲ. ಈ ಇಬ್ಬರು ಆಟಗಾರರ ಕಳಪೆ ಫಾರ್ಮ್‌ನ ಹೊರತಾಗಿಯೂ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಈ ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ. ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಈ ಇಬ್ಬರು ಆಟಗಾರರು ಕೂಡ ಎಲ್ಲಾ ಪ್ರಯತ್ನವನ್ನು ಕುಡ ನಡೆಸುತ್ತಿದ್ದಾರೆ ಎಂದು ರಾಥೋರ್ ಹೇಳಿಕೆ ನೀಡಿದ್ದಾರೆ.
ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಇಬ್ಬರು ಕೂಡ 2021ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಈ ಕ್ಯಾಲೆಂಡರ್ ವರ್ಷದಲ್ಲಿ ಈ ಇಬ್ಬರು ಆಟಗಾರರಿಂದಲೂ ಒಂದೇ ಒಂದು ಶತಕ ದಾಖಲಾಗಿಲ್ಲ. 2021ರಲ್ಲಿ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಸರಾಸರಿ 30ಕ್ಕಿಂತಲೂ ಕೆಳಕ್ಕಿಳಿದಿದೆ. ಇನ್ನು ಅಜಿಂಕ್ಯಾ ರಹಾನೆಯ ಈ ವರ್ಷದ ಬ್ಯಾಟಿಂಗ್ ಸರಾಸರಿ 20ರ ಅಸುಪಾಸಿನಲ್ಲಿದೆ. ಇದು ಇಬ್ಬರು ಭಾರತದ ಪ್ರಮುಖ ಬ್ಯಾಟರ್‌ಗಳ ಹೀನಾಯ ಪ್ರದರ್ಶನ.
ಸದ್ಯ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯಾ ರಹಾನೆ 48 ರನ್‌ಗಳಿಸಿ ಅರ್ಧ ಶತಕದ ಅಂಚಿನಲ್ಲಿ ಎಡವಿದ್ದರು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 20 ರನ್‌ಗಳಿಗೆ ಔಟ್ ಆಗಿದ್ದಾರೆ. ಇನ್ನು ಚೇತೇಶ್ವರ್ ಪುಜಾರ ಮೊದಲ ಇನ್ನಿಂಗ್ಸ್‌ನಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾದರೆ ಎರಡನೇ ಇನ್ನಿಂಗ್ಸ್‌ನಲ್ಲಿ 16 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದ್ದರು. ಈ ಇಬ್ಬರು ಅನುಭವಿ ಆಟಗಾರರು ಕೂಡ ಭಾರತೀಯ ತಂಡವನ್ನು ಟೆಸ್ಟ್ ಮಾದರಿಯಲ್ಲಿ ಮಾತ್ರವೇ ಪ್ರತಿನಿಧಿಸುತ್ತಿದ್ದು ಇಬ್ಬರ ಮೇಲೆಯೂ ಬ್ಯಾಟಿಂಗ್ ವಿಭಾಗದ ಹೊಣೆಗಾರಿಕೆಯಿದೆ. ಆದರೆ ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಿರುವುದು ಇತರ ಆಟಗಾರರ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿದೆ.
ಇನ್ನು ಟೀಮ್ ಇಂಡಿಯಾದಲ್ಲಿ ಅನೇಕ ಪ್ರತಿಭಾನ್ವಿತ ಆಟಗಾರರು ಅವಕಾಶಕ್ಕಾಗಿ ಬೆಂಚ್ ಕಾಯುತ್ತಿದ್ದಾರೆ. ಆಡಿದ ಮೊದಲ ಪಂದ್ಯದಲ್ಲಿಯೇ ಶತಕ ಹಾಗೂ ಅರ್ಧ ಶತಕ ಸಿಡಿಸಿ ಮಿಂಚಿದ್ದ ಶ್ರೇಯಸ್ ಐಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಕಾಯುತ್ತಿದ್ದಾರೆ. ಇನ್ನು ಇತ್ತೀಚೆಗೆ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಭಾರತ ಎ ತಂಡದ ಪರವಾಗಿ ಆಡಿ ಅದ್ಭುತ ಪ್ರದರ್ಶನ ನೀಡಿದ್ದ ಹನುಮ ವಿಹಾರಿ ಕೂಡ ಅವಕಾಶಕ್ಕಾಗಿ ಕಾತರಿಸುತ್ತಿದ್ದಾರೆ. ಆದರೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಇಬ್ಬರು ಅನುಭವಿಗಳ ಮೇಲೆ ನಂಬಿಕೆಯಿಟ್ಟು ಅವಕಾಶದ ಮೇಲೆ ಅವಕಾಶವನ್ನು ನೀಡುತ್ತಲೇ ಇದೆ.
"ಚೇತೇಶ್ವರ್ ಪುಜಾರ ಹಾಗೂ ಅಜಿಂಕ್ಯಾ ರಹಾನೆ ಇಬ್ಬರು ಆಟಗಾರರು ಕೂಡ ತಮ್ಮ ಕೈಲಾದ ಪ್ರಯತ್ನ ನಡೆಸುತ್ತಿದ್ದು ಸಾಧ್ಯವಾದಷ್ಟು ಕೊಡುಗೆ ನೀಡುವ ಪ್ರಯತ್ನ ನಡೆಸುತ್ತಿದ್ದಾರೆ. ರಹಾನೆ ನಿಜಕ್ಕೂ ಉತ್ತಮ ಲಯದಲ್ಲಿದ್ದರು ಆದರೆ ದುರಾದೃಷ್ಟವಶಾತ್ ವಿಕೆಟ್ ಕಳೆದುಕೊಳ್ಳಬೇಕಾಯಿತು. ಪೂಜಾರ ಕೂಡ ಉತ್ತಮ ಪ್ರದರ್ಶನ ನಿಡುವ ಪ್ರಯತ್ನ ನಡೆಸುತ್ತಿದ್ದಾರೆ. ಪೂಜಾರ ಈ ಹಿಂದೆಯೂ ಸಾಕಷ್ಟು ಪ್ರಮುಖ ಇನ್ನಿಂಗ್ಸ್‌ಗಳನ್ನು ಭಾರತಕ್ಕೆ ನೀಡಿದ್ದಾರೆ. ಇದು ಬಹಳಷ್ಟು ಸವಾಲಿನ ಕಂಡೀಶನ್ ಆಗಿದೆ. ಬಹಳಷ್ಟು ಜನರು ಇಲ್ಲಿ ಹೆಚ್ಚಿನ ರನ್‌ಗಳಿಸಲು ಸಾಧ್ಯವಾಗಿಲ್ಲ. ಅವರಿಂದ ಅತ್ಯುತ್ತಮ ಪ್ರದರ್ಶನ ಬರುವವರೆಗೆ ನಾವು ತಾಳ್ಮೆಯಿಂದ ಕಾಯುವ ಅಗತ್ಯವಿದೆ. ಅವರ ಅತ್ಯುತ್ತಮ ಪ್ರದರ್ಶನ ನೀಡುವವರೆಗೆ ಕೋಚಿಂಗ್ ಯೂನಿಟ್ ಬೆಂಬಲವಾಗಿ ನಿಲ್ಲುತ್ತದೆ. ಇಂತಾ ಸಂದರ್ಭದಲ್ಲಿ ನಾವು ತಾಳ್ಮೆಯನ್ನು ಕಳೆದುಕೊಳ್ಳಬೇಕಾ? ಈ ಹಂತದಲ್ಲಿ ಅದರ ಅಗತ್ಯವಿಲ್ಲ ಎನಿಸುತ್ತದೆ" ಎಂದು ವಿಕ್ರಂ ರಾಥೋರ್ ಹೇಳಿದ್ದಾರೆ.