
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಅಂತಿಮ ದಿನದಾಟ ಮಾತ್ರವೇ ಬಾಕಿಯಿದೆ. ವಿರಾಟ್ ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಮುನ್ನಡೆ ಸಾಧಿಸಲು ಕಾತರಿಸುತ್ತಿದೆ. ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಈಗಾಗಲೇ ನಾಲ್ಕು ವಿಕೆಟ್ ಕಳೆದುಕೊಂಡಿದ್ದು ಉಳಿದ ಆರು ವಿಕೆಟ್ ಕಬಳಿಸಿದರೆ ಭಾರತ ಮೊದಲ ಪಂದ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ. ಪಂದ್ಯದ ಎರಡನೇ ದಿನ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿದ್ದು ಅಂತಿಮ ದಿನವೂ ಕೂಡ ಮಳೆಯಾಗಲಿರುವ ಮುನ್ಸೂಚನೆಯನ್ನು ನೀಡಲಾಗಿತ್ತು. ಹೀಗಾಗಿ ಗೆಲುವಿನ ಹೊಸ್ತಿಲಿನಲ್ಲಿ ನಿಂತಿರುವ ಟೀಮ್ ಇಂಡಿಯಾದ ಕನಸಿಗೆ ಮಳೆ ತಣ್ಣೀರೆರಚುತ್ತಾ ಎಂಬ ಆತಂಕ ಮೂಡಿಸಿದೆ.
ಇನ್ನು ಹವಾಮಾನ ವರದಿಯನ್ನು ಗಮನಿಸಿದರೆ 'ಅಕ್ಯುವೆದರ್' ಪ್ರಕಾರ ಭಾರತ ಹಾಘೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದ ಐದನೇ ದಿನ ಮಧ್ಯಾಹ್ನದ ವೇಳೆ ಮಳೆಯಾಗುವ ಸಾಧ್ಯತೆ 65% ಇದ್ದು ಸುಮಾರು ಎರಡು ಗಂಟೆಗಳ ಕಾಲ ಮಳೆ ಸುರಿಯುವ ಸಂಭವವಿದೆ. ಅಲ್ಲದೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ 39% ಇದೆ ಎಂದು ತಿಳಿಸುತ್ತಿದೆ.
ಈ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿದ್ದರೂ ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣವಾದ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಆರಂಭಿಕರಿಬ್ಬರು ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಭಾರತ 324 ರನ್‌ಗಳನ್ನು ಗಳಿಸಿತ್ತು. ಅದಾದ ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ಆತಿಥೇಯ ತಂಡವನ್ನು ಭಾರತ 194 ರನ್‌ಗಳಿಗೆ ಆಲೌಟ್ ಂಆಡುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ 130 ರನ್‌ಗಳ ಮಹತ್ವದ ಮುನ್ನಡೆಯನ್ನು ಪಡೆಯುವಲ್ಲಿ ಭಾರತೀಯ ತಂಡ ಯಶಸ್ವಿಯಾಗಿತ್ತು.
ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತೀಯ ತಂಡವನ್ನು ಹರಿಣಗಳು 174 ರನ್‌ಗಳಿಗೆ ಆಲೌಟ್ ಮಾಡಲು ಯಶಸ್ವಿಯಾಗಿತ್ತು. ಆದರೆ ದೊಡ್ಡ ಮುನ್ನಡೆಯನ್ನು ಪಡೆದುಕೊಮಡಿದ್ದ ಕಾರಣ ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಗೆಲುವಿಗೆ ಭಾರತ ತಂಡ 305 ರನ್‌ಗಳ ಗುರಿಯನ್ನು ನೀಡಿದೆ. ನಂತರ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ನಾಲ್ಕನೇ ದಿನದಾಟ ಅಂತ್ಯವಾಗುವ ವೇಳೆಗೆ 94 ರನ್‌ಗಳಿಸಿದ್ದು 4 ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಆತಿಥೇಯ ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಹಿನ್ನಡೆಯನ್ನು ಅನುಭವಿಸಿದೆ.
ಪಂದ್ಯಕ್ಕೆ ಮಧ್ಯಾಹ್ನದ ಬಳಿಕ ಮಳೆ ಅಡ್ಡಿಯಾಗುವ ಆತಂಕವಿರುವ ಕಾರಣ ಭಾರತದ ಬೌಲರ್‌ಗಳು ಅದ್ಭುತವಾದ ಬೌಲಿಂಗ್ ದಾಳಿ ನಡೆಸಿ ಮೊದಲ ಸೆಶನ್‌ನಲ್ಲಿಯೇ ಪಂದ್ಯವನ್ನು ಅಂತ್ಯಗೊಳಿಸುವ ಪ್ರಯತ್ನವನ್ನು ನಡೆಸಲಿದ್ದಾರೆ. ಮತ್ತೊಂದೆಡೆ ದಕ್ಷಿಣ ಆಪ್ರಿಕಾ ತಂಡದ ಪರವಾಗಿ ನಾಯಕ ಡೀನ್ ಎಲ್ಗರ್ ಇನ್ನೂ ಕೂಡ ಕ್ರೀಸ್‌ನಲ್ಲಿ ಉಳಿದುಕೊಂಡಿರುವುದು ತಂಡಕ್ಕೆ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಭಾರತೀಯ ಬೌಲರ್‌ಗಳ ದಾಳಿಯನ್ನು ದಿಟ್ಟವಾಗಿ ಎದುರಿಸುವ ಪ್ರಯತ್ನವನ್ನು ಹರಿಣಗಳ ಪಡೆ ನಡೆಸಲಿದೆ. ಡೀನ್ ಎಲ್ಗರ್ 52 ರನ್‌ಗಳಿಸಿದ್ದು ಐದನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಪಂದ್ಯ ಮಧ್ಯಾಹ್ನದವರೆಗೂ ಮುಂದುವರಿದು ಬಳಿಕ ಮಳೆ ಸುರಿಯಲು ಆರಂಭವಾದರೆ ಭಾರತೀಯ ತಂಡಕ್ಕೆ ಹಿನ್ನಡೆಯಾಗುವುದು ಬಹುತೇಕ ನಿಶ್ಚಿತ. ಹೀಗಾದಲ್ಲಿ ಪಂದ್ಯ ಅನಿವಾರ್ಯವಾಗಿ ಡ್ರಾದಲ್ಲಿ ಅಂತ್ಯವಾಗುವ ಸಾಧ್ಯತೆ ದಟ್ಟವಾಗಿದೆ.
ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಜಯಂತ್ ಯಾದವ್, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಪ್ರಿಯಾಂಕ್ ಪಾಂಚಾಲ್, ಇಶಾಂತ್ ಶರ್ಮಾ
ದಕ್ಷಿಣ ಆಫ್ರಿಲಾ ಆಡುವ ಬಳಗ: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಟೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ
ಬೆಂಚ್: ಡುವಾನ್ ಒಲಿವಿಯರ್, ಬ್ಯೂರಾನ್ ಹೆಂಡ್ರಿಕ್ಸ್, ಸಿಸಂಡಾ ಮಗಾಲಾ, ಜಾರ್ಜ್ ಲಿಂಡೆ, ಪ್ರೆನೆಲನ್ ಸುಬ್ರಾಯೆನ್, ಕೈಲ್ ವೆರ್ರೆನ್, ಸರೆಲ್ ಎರ್ವೀ, ರಿಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್