Ind vs SA: ಐಪಿಎಲ್ ಮುಗಿದ ಬೆನ್ನಲ್ಲೇ ನಡೆಯಲಿದೆ ಭಾರತ vs ದ.ಆಫ್ರಿಕಾ ಸರಣಿ: ಪ್ರಾರಂಭ ಯಾವಾಗ? ಇಲ್ಲಿದೆ ವೇಳಾಪಟ್ಟಿ

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಅರ್ಧದಷ್ಟು ಮುಕ್ತಾಯಗೊಂಡಿವೆ. ಇಷ್ಟು ವರ್ಷಗಳ ಐಪಿಎಲ್ ಆವೃತ್ತಿಯಲ್ಲಿ ಹೆಚ್ಚು ಟ್ರೋಫಿಗಳನ್ನು ಗೆದ್ದು ಯಶಸ್ವಿ ಪ್ರದರ್ಶನಗಳನ್ನು ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸಾಲುಸಾಲು ಪಂದ್ಯಗಳಲ್ಲಿ ಸೋತು ನೆಲ ಕಚ್ಚಿವೆ.
ಇನ್ನು ಟೂರ್ನಿಯ ಲೀಗ್ ಹಂತದ ಪಂದ್ಯಗಳು ಅರ್ಧದಷ್ಟು ಮುಗಿಯುವ ವೇಳೆಗೆ ಗುಜರಾತ್ ಟೈಟನ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದು ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನಗಳನ್ನು ಪಡೆದುಕೊಂಡಿವೆ. ಹೀಗೆ ಈ ಬಾರಿಯ ಐಪಿಎಲ್ ಟೂರ್ನಿ ಅರ್ಧದಷ್ಟು ಮುಕ್ತಾಯಗೊಂಡ ಸಮಯಕ್ಕೆ ಭಾರತ ಅಂತರರಾಷ್ಟ್ರೀಯ ಪಂದ್ಯಾವಳಿಯ ಕುರಿತು ಹೊಸದೊಂದು ಸುದ್ದಿ ಹೊರಬಿದ್ದಿದ್ದು, ಐಪಿಎಲ್ ನಡುವೆಯೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ಈಗಿನಿಂದಲೇ ನಿರೀಕ್ಷೆಯನ್ನು ಹುಟ್ಟು ಹಾಕಲು ಆರಂಭಿಸಿದೆ.
ಹೌದು, ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯಗೊಂಡ ಬೆನ್ನಲ್ಲೇ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಟಿ ಟ್ವೆಂಟಿ ಸರಣಿಯನ್ನು ಆಡಲಿದೆ. ಈ ವಿಷಯವನ್ನು ಸ್ವತಃ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಸಿಇಒ ಖಚಿತಪಡಿಸಿದ್ದು, ಭಾರತ ವಿರುದ್ಧ ನಡೆಯಲಿರುವ ಟಿ ಟ್ವೆಂಟಿ ಸರಣಿ ಅತ್ಯಮೂಲ್ಯವಾದ ಸರಣಿಯಾಗಿದ್ದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಸಹಾಯವಾಗಲಿದೆ ಎಂದಿದ್ದಾರೆ. ಈ ಸರಣಿ ಕುರಿತಾದ ಮತ್ತಷ್ಟು ಮಾಹಿತಿ ಹಾಗೂ ವೇಳಾ ಪಟ್ಟಿ ಈ ಕೆಳಕಂಡಂತಿದೆ ಓದಿ.

ಸರಣಿಯಲ್ಲಿ ಎಷ್ಟು ಪಂದ್ಯಗಳು? ಆರಂಭವಾಗುವುದು ಯಾವಾಗ?
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸಲಿದೆ. ಟೂರ್ನಿಯ ಮೊದಲ ಪಂದ್ಯ ಜೂನ್ 9ರಂದು ಆರಂಭವಾಗಲಿದ್ದು, ಅಂತಿಮ ಪಂದ್ಯ ಜೂನ್ 19ರಂದು ನಡೆಯಲಿದೆ.

ಸಂಪೂರ್ಣ ವೇಳಾಪಟ್ಟಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಐಪಿಎಲ್ ಮುಕ್ತಾಯವಾದ ನಂತರ ನಡೆಯಲಿರುವ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಸಂಪೂರ್ಣ ವೇಳಾ ಪಟ್ಟಿ ಈ ಕೆಳಕಂಡಂತಿದೆ
ಪ್ರಥಮ ಟಿ ಟ್ವೆಂಟಿ ಪಂದ್ಯ: ಜೂನ್ 9, ನವದೆಹಲಿ
ದ್ವಿತೀಯ ಟಿ ಟ್ವೆಂಟಿ ಪಂದ್ಯ: ಜೂನ್ 12, ಕಟಕ್
ತೃತೀಯ ಟಿ ಟ್ವೆಂಟಿ ಪಂದ್ಯ: ಜೂನ್ 14, ವಿಶಾಖಪಟ್ಟಣ
ನಾಲ್ಕನೇ ಟಿ ಟ್ವೆಂಟಿ ಪಂದ್ಯ: ಜೂನ್ 17, ರಾಜ್ ಕೋಟ್
ಐದನೇ ಟಿ ಟ್ವೆಂಟಿ ಪಂದ್ಯ: ಜೂನ್ 19, ಬೆಂಗಳೂರು

ಭಾರತ vs ದಕ್ಷಿಣ ಆಫ್ರಿಕಾ ಟಿ ಟ್ವೆಂಟಿ ಮುಖಾಮುಖಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೂ ಒಟ್ಟು 15 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 9 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದ್ದರೆ, ದಕ್ಷಿಣ ಆಫ್ರಿಕಾ ಉಳಿದ 6 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಟೀಮ್ ಇಂಡಿಯಾ ಈ ವರ್ಷ ಆಡಲಿರುವ ಮೂರನೇ ಟಿ ಟ್ವೆಂಟಿ ಸರಣಿ ಇದಾಗಿದ್ದು, ಇದಕ್ಕೂ ಮುನ್ನ ನಡೆದ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಗಳಲ್ಲಿ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದು ಎದುರಾಳಿಗಳನ್ನು ವೈಟ್ ವಾಷ್ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications