ಭಾರತ vs ದ.ಆಫ್ರಿಕಾ: ಕೊರೊನಾ ಹೆಚ್ಚಾದರೆ ಪಂದ್ಯಗಳ ಗತಿಯೇನು? ಆಟಗಾರರ ಪರಿಸ್ಥಿತಿಯೇನು?

ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳನ್ನು ಆಡಲು ಈಗಾಗಲೇ ಹರಿಣಗಳ ನೆಲಕ್ಕೆ ಬಂದಿಳಿದಿರುವ ಟೀಮ್ ಇಂಡಿಯಾ ಪ್ರಿಟೋರಿಯಾದ ಪಂಚತಾರಾ ಹೋಟೆಲ್ ಆದ ಐರೀನ್ ಕಂಟ್ರಿ ಲಾಡ್ಜ್ ಎಂಬಲ್ಲಿ ವಾಸ್ತವ್ಯವನ್ನು ಹೂಡಿದೆ.
ಎಲ್ಲಾ ಯೋಜನೆಯ ಪ್ರಕಾರವೇ ನಡೆದಿದ್ದರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಪ್ರಥಮ ಪಂದ್ಯ ಡಿಸೆಂಬರ್ 17ರಿಂದ ಆರಂಭವಾಗಬೇಕಿತ್ತು. ಅದರೆ ಒಮಿಕ್ರಾನ್ ವೈರಸ್ ಕಾರಣದಿಂದಾಗಿ 9 ದಿನಗಳು ತಡವಾಗಿ ಇತ್ತಂಡಗಳ ನಡುವಿನ ಟೆಸ್ಟ್ ಸರಣಿ ಆರಂಭವಾಗುತ್ತಿದ್ದು ಡಿಸೆಂಬರ್ 26ರಂದು ಪ್ರಥಮ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಹೀಗೆ ವೈರಸ್ ಭೀತಿ ಪಂದ್ಯ ತಡವಾಗಿ ಆರಂಭವಾಗುವುದಕ್ಕೆ ಕಾರಣವಾಗಿದ್ದು ಮಾತ್ರವಲ್ಲದೇ ಇತ್ತಂಡಗಳ ನಡುವೆ ನಡೆಯಬೇಕಿದ್ದ ಟಿ ಟ್ವೆಂಟಿ ಸರಣಿ ರದ್ದಾಗುವುದರಲ್ಲಿಯೂ ಕೂಡ ಪ್ರಭಾವ ಬೀರಿತ್ತು. ಹೀಗೆ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾವೈರಸ್ ಮತ್ತು ಒಮಿಕ್ರಾನ್ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬಯೋ ಬಬಲ್ ವ್ಯವಸ್ಥೆ ಇದ್ದರೂ ಸಹ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿರತರಾಗಿರುವ ಟೀಮ್ ಇಂಡಿಯಾ ಆಟಗಾರರ ಸುರಕ್ಷತೆಯ ಕುರಿತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮತ್ತು ಬಿಸಿಸಿಐ ಹೆಚ್ಚಿನ ನಿಗಾವಹಿಸಿವೆ.
ದಕ್ಷಿಣ ಆಫ್ರಿಕಾ ತಲುಪಿದ ಟೀಮ್ ಇಂಡಿಯಾ ಆಟಗಾರರನ್ನು ಕೂಡಲೇ ಪರೀಕ್ಷೆಗೆ ಒಳಪಡಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಎಲ್ಲ ಆಟಗಾರರ ಕೊರೋನಾವೈರಸ್ ವರದಿ ನೆಗೆಟಿವ್ ಬಂದ ನಂತರ ಮೈದಾನಕ್ಕೆ ತೆರಳಲು ಅನುಮತಿಯನ್ನು ನೀಡಿದೆ. ಹೀಗೆ ಟೀಮ್ ಇಂಡಿಯಾ ಆಟಗಾರರು ತಂಗಿರುವ ಹೋಟೆಲ್‌ನಲ್ಲಿ ಬೇರೆ ಯಾವ ಜನಸಾಮಾನ್ಯರಿಗೂ ಕೂಡ ಉಳಿದುಕೊಳ್ಳುವ ಅನುಮತಿಯನ್ನು ನೀಡಿಲ್ಲ. ಹಾಗೂ ಇತ್ತೀಚಿಗಷ್ಟೆ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುವ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿತ್ತು. ಹೀಗೆ ಕೊರೊನಾ ಸೋಂಕು ಹರಡಬಹುದಾದ ಬಹುತೇಕ ಎಲ್ಲಾ ಕೊಂಡಿಗಳನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕಡಿದು ಹಾಕಿದೆ. ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಒಂದುವೇಳೆ ದಕ್ಷಿಣ ಆಫ್ರಿಕಾದಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ಪಂದ್ಯಗಳ ಮತ್ತು ಟೀಮ್ ಇಂಡಿಯಾ ಆಟಗಾರರ ಗತಿಯೇನು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಈ ಪ್ರಶ್ನೆಗಳಿಗೆ ಉತ್ತರ ಇದೀಗ ಬಹಿರಂಗವಾಗಿದ್ದು ಈ ಕೆಳಕಂಡಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.

ಸೋಂಕಿತರ ಸಂಖ್ಯೆ ಹೆಚ್ಚಾದರೆ ತಕ್ಷಣವೇ ಪಂದ್ಯಗಳ ರದ್ದು, ಟೀಮ್ ಇಂಡಿಯಾ ಆಟಗಾರರು ಮರಳಿ ಸ್ವದೇಶಕ್ಕೆ
ಹೀಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಸಹ ಒಂದುವೇಳೆ ಮೈದಾನದಿಂದಾಚೆಗೆ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡರೆ ತಕ್ಷಣವೇ ಪಂದ್ಯಗಳನ್ನು ಸ್ಥಗಿತಗೊಳಿಸಲಿದ್ದು, ಟೀಮ್ ಇಂಡಿಯಾ ಆಟಗಾರರು ಯಾವ ಕ್ಷಣದಲ್ಲಿ ಬೇಕಾದರೂ ಕೂಡ ಸ್ವದೇಶಕ್ಕೆ ತೆರಳಲು ಅನುಮತಿಯಿದೆ ಎಂದು ಬಿಸಿಸಿಐಗೆ ಸೌತ್ಆಫ್ರಿಕಾ ಕ್ರಿಕೆಟ್ ಮಂಡಳಿ ಭರವಸೆಯನ್ನು ನೀಡಿದೆ.

ಟೀಮ್ ಇಂಡಿಯಾ ಆಟಗಾರರು ಅಸ್ವಸ್ಥರಾದರೆ ಬೆಡ್ ಸೌಕರ್ಯವಿದೆ
ಇನ್ನು ಟೀಮ್ ಇಂಡಿಯಾ ಆಟಗಾರರಿಗೆ ಚಿಕಿತ್ಸೆಯ ಅಗತ್ಯವಿದ್ದರೆ ಅಥವಾ ಆಸ್ಪತ್ರೆಗೆ ಹೋಗಲೇಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಪ್ರತ್ಯೇಕ ಸುರಕ್ಷಿತ ಬೆಡ್ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಇರುವುದರಿಂದ ಆಸ್ಪತ್ರೆಗಳಲ್ಲಿ ಬೆಡ್ ಸೌಕರ್ಯ ಸಿಗುವುದು ಕಡಿಮೆ ಹಾಗೂ ಪ್ರತ್ಯೇಕ ಬೆಡ್ ವ್ಯವಸ್ಥೆ ಸಿಗುವುದಂತೂ ತೀರಾ ಕಷ್ಟದ ಕೆಲಸ. ಹೀಗಾಗಿ ಕೆಲವೊಂದು ಆಸ್ಪತ್ರೆಗಳ ಜೊತೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಚರ್ಚೆಯನ್ನು ನಡೆಸಿದ್ದು ಪ್ರತ್ಯೇಕ ಹಾಗೂ ಸುರಕ್ಷಿತ ಬೆಡ್ ತಕ್ಷಣಕ್ಕೆ ಸಿಗಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ವೈದ್ಯಕೀಯ ಅಧಿಕಾರಿ ಶೋಯಿಬ್ ಮಂಜ್ರಾ ಭರವಸೆ ನೀಡಿದ್ದಾರೆ.

ಲಾಡ್ಜ್ ಸಿಬ್ಬಂದಿಗಳಿಗೂ ಬಯೋ ಬಬಲ್
ಇನ್ನು ಟೀಮ್ ಇಂಡಿಯಾ ಆಟಗಾರರು ಉಳಿದುಕೊಂಡಿರುವ ಲಾಡ್ಜ್ ಸಿಬ್ಬಂದಿಗಳಿಗನ್ನೂ ಕೂಡ ಬಯೋ ಬಬಲ್ ನಿಯಮಕ್ಕೆ ಒಳಪಡಿಸಲಾಗಿದೆ. ಈ ಹೋಟೆಲ್‌ಗೆ ಟೀಮ್ ಇಂಡಿಯಾ ಆಟಗಾರರನ್ನು ಹೊರತುಪಡಿಸಿ ಇತರರಿಗೆ ಅನುಮತಿಯನ್ನು ನೀಡಿಲ್ಲ, ಸಿಬ್ಬಂದಿಗಳನ್ನು ಈಗಾಗಲೇ ಕ್ವಾರಂಟೈನ್ ಮಾಡಿದ್ದು ದೈನಂದಿನ ಪರೀಕ್ಷೆಗೂ ಸಹ ಒಳಪಡಿಸಲಾಗುತ್ತಿದೆ, ಹೊರಗಿನಿಂದ ಬರುವ ಪ್ರತಿಯೊಂದು ವಸ್ತುಗಳನ್ನು ಸಹ ಪರೀಕ್ಷೆ ನಡೆಸಿ ನಂತರ ಸ್ಯಾನಿಟೈಸ್ ಮಾಡಿ ಸುರಕ್ಷಿತವಾಗಿ ಸ್ವೀಕರಿಸಲಾಗುತ್ತಿದೆ ಮತ್ತು ಹೋಟೆಲ್ ಒಳಗಡೆಯೇ ವೈದ್ಯರನ್ನು ಕೂಡ ಇರಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications