ಭಾರೀ ಮಳೆಯಿಂದಾಗಿ ಭಾನುವಾರ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ರದ್ದಾದ ನಂತರ, ಮಂಗಳವಾರ, ಡಿಸೆಂಬರ್ 12ರಂದು ಪೋರ್ಟ್ ಎಲಿಜಬೆತ್‌ನ ಸೇಂಟ್ ಜಾರ್ಜ್ ಓವಲ್‌ನಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಎರಡನೇ ಟಿ20 ಪಂದ್ಯದಲ್ಲಿ ಸೆಣಸಾಡಲು ಸಜ್ಜಾಗಿವೆ.
ಮೊದಲ ಪಂದ್ಯ ರದ್ದಾದ ಕಾರಣ, ಮೂರು ಪಂದ್ಯಗಳ ಸರಣಿಯಲ್ಲಿ ಇದೀಗ ಉಳಿದಿರುವುದು ಎರಡು ಪಂದ್ಯಗಳು ಮಾತ್ರ. ಹೀಗಾಗಿ ಉಭಯ ತಂಡಗಳಿಗೆ ನಿರ್ಣಾಯಕ ಹಾಗೂ ಗೆಲ್ಲೇಬೇಕಾದ ಪಂದ್ಯಗಳಾಗಿದೆ. ಎರಡನೇ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಆಡುವ 11ರ ಬಳಗ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳೋಣ.

ಪ್ರವಾಸಿ ಭಾರತ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ ತಂಡಗಳು ಎರಡನೇ ಟಿ20 ಪಂದ್ಯಕ್ಕಾಗಿ ಗ್ಕೆಬರ್ಹಾದಲ್ಲಿರುವ ಸೇಂಟ್ ಜಾರ್ಜ್ ಪಾರ್ಕ್‌ಗೆ ಬಂದಿವೆ. ವಿಶ್ವದ ನಂ.1 ಟಿ20 ಶ್ರೇಯಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ವಿಶ್ವದ ನಂ.1 ಟಿ20 ತಂಡ ಭಾರತವು ಮತ್ತೊಂದು ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.
ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ತವರಿನ ಸರಣಿಯಲ್ಲಿ 4-1 ಅಂತರದಿಂದ ವಶಪಡಿಸಿಕೊಂಡಿರುವ ಭಾರತ ತಂಡವು, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಆತಿಥೇಯ ತಂಡವನ್ನು ಮಣಿಸಿ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸುವ ಗುರಿಯಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿದ್ದ ಭಾರತ ತಂಡದ ಆಡುವ ಬಳಗಕ್ಕೆ ಹೋಲಿಕೆ ಮಾಡಿದರೆ, ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿರುವ ಭಾರತ ತಂಡದಲ್ಲಿ ಕೆಲವೊಂದು ಬದಲಾವಣೆಗಳಾಗುವ ಸಾಧ್ಯತೆಗಳಿವೆ.

ಭಾರತೀಯ ತಾರೆ ಶುಭ್ಮನ್ ಗಿಲ್ ಟಿ20 ತಂಡಕ್ಕೆ ಮರಳಿದ್ದು, ಈತನಿಗಾಗಿ ಆಸೀಸ್ ವಿರುದ್ಧದ ಶತಕವೀರ ರುತುರಾಜ್ ಗಾಯಕ್ವಾಡ್ ತಮ್ಮ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಮಧ್ಯಮ ಕ್ರಮಾಂಕದ ಶ್ರೇಯಸ್ ಅಯ್ಯರ್, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆ ಇದೆ. ನಾಯಕ ಸೂರ್ಯಕುಮಾರ್ ಯಾದವ್ 4 ಮತ್ತು ಫಿನಿಶರ್ ರಿಂಕು ಸಿಂಗ್ 5ನೇ ಕ್ರಮಾಂಕದಲ್ಲಿ ಆಡುವುದು ಖಚಿತವೆನಿಸಿದೆ.
ಸದ್ಯ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಅವರ ಕ್ರಮಾಂಕವನ್ನು ಬದಲಾಯಿಸುವ ಸಾಧ್ಯತೆ ಇಲ್ಲ. ಹೀಗಾಗಿ ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ಆಡುವ 11ರ ಬಳಗದಿಂದ ಹೊರಗುಳಿಯಬೇಕಾಗುತ್ತದೆ.
ಮತ್ತೊಂದೆಡೆ, ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಜಿತೇಶ್ ಶರ್ಮಾ ಟೀಮ್ ಮ್ಯಾನೇಜ್‌ಮೆಂಟ್‌ನ ಮೊದಲ ಆಯ್ಕೆಯಾಗಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಆಡುವುದು ಅನುಮಾನವಾಗಿದೆ.
ಏಕದಿನ ವಿಶ್ವಕಪ್ ಆಡಿದ್ದ ರವೀಂದ್ರ ಜಡೇಜಾ ಒಂದು ವರ್ಷದ ನಂತರ ಭಾರತದ ಟಿ20 ತಂಡಕ್ಕೆ ಮರಳುತ್ತಿದ್ದಾರೆ. ಆಸೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದ ಅಕ್ಷರ್ ಪಟೇಲ್ ಬದಲಿಗೆ ರವೀಂದ್ರ ಜಡೇಜಾ ವಾಪಸ್ಸಾಗಿದ್ದಾರೆ.
ಅನುಭವಿ ಕುಲದೀಪ್ ಯಾದವ್ ಮತ್ತು ಯುವ ಸ್ಪಿನ್ನರ್ ರವಿ ಬಿಷ್ಣೋಯ್ ನಡುವೆ ಯಾರಿಗೆ ಎರಡನೇ ಟಿ20 ಪಂದ್ಯದಲ್ಲಿ ಆಡುವ ಅವಕಾಶ ಸಿಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
ರವಿ ಬಿಷ್ಣೋಯ್ ಅವರು ಆಸ್ಟ್ರೇಲಿಯಾ ವಿರುದ್ಧದ ಐದು ಟಿ20 ಸರಣಿಯಲ್ಲಿ ಅತಿ ಹೆಚ್ಚು (9) ವಿಕೆಟ್‌ಗಳನ್ನು ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಸದ್ಯ ವಿಶ್ವದ ನಂ.1 ಟಿ20 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಕುಲ್ದೀಪ್ ಯಾದವ್ ಆಡುವ ಬಳಗದಲ್ಲಿ ಉಳಿಯುತ್ತಾರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಟಿ20 ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಸಿರಾಜ್ ವೇಗದ ಬೌಲಿಂಗ್ ಸಾರಥ್ಯ ವಹಿಸಲಿದ್ದಾರೆ. ಅರ್ಶ್‌ದೀಪ್ ಸಿಂಗ್ ಮತ್ತು ಮುಖೇಶ್ ಕುಮಾರ್ ಸಾಥ್ ನೀಡಲಿದ್ದಾರೆ.
ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿ ಬಿಷ್ಣೋಯ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್.