
ವಾಂಡರರ್ಸ್‌ನಲ್ಲಿ ಭಾರತ ಸೋತೇ ಇಲ್ಲ!
ವಾಂಡರ್ಸ್ ಕ್ರೀಡಾಂಗಣ ಭಾರತದ ಪಾಲಿಗೆ ಯಾಕೆ ಭದ್ರಕೋಟೆ ಎನಿಸಿಕೊಳ್ಳುತ್ತದೆ ಎಂಬುದಕ್ಕೆ ಕಾರಣ ಅಲ್ಲಿ ಭಾರತದ ಫಲಿತಾಂಶ. ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿ ಗೆದ್ದಿರುವುದು ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ. ಒಟ್ಟಾರೆ ವಾಂಡರ್ಸ್ ಕ್ರೀಡಾಂಗಣದಲ್ಲಿ ಭಾರತ ಐದು ಬಾರಿ ಆಡಿದೆ. ಆದರೆ ಒಂದೇ ಒಂದು ಪಂದ್ಯ ಭಾರತ ತಂಡವನ್ನು ಆತಿಥೇಯ ತಂಡಕ್ಕೆ ಈ ಮೈದಾನದಲ್ಲಿ ಸೋಲಿಸಲು ಸಾಧ್ಯವಾಗಿಲ್ಲ. ಎರಡು ಪಂದ್ಯಗಳಲ್ಲಿ ಈ ಮೈದಾನದಲ್ಲಿ ಭಾರತ ಗೆದ್ದುಕೊಂಡಿದೆ. 2006ರಲ್ಲಿ ಭಾರತ 123 ರನ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿದ್ದರೆ 2018ರಲ್ಲಿ ನಡೆದ ಸರಣಿಯಲ್ಲಿ 63 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಉಳಿದ ಮೂರು ಪಂದ್ಯಗಳಲ್ಲಿ ಭಾರತ ತಂಡ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ವಾಂಡರರ್ಸ್ ಯಾಕೆ ಭಾರತದ ಭದ್ರಕೋಟೆ
ಏಷ್ಯಾಖಂಡಕ್ಕಿಂತ ಹೊರಗೆ ಭಾರತ 5ಕ್ಕಿಂತ ಹೆಚ್ಚು ಪಂದ್ಯಗಳನ್ನು ಒಟ್ಟು 19 ತಾಣಗಳಲ್ಲಿ ಆಡಿದೆ. ಆದರೆ ಈ ಎಲ್ಲಾ ಮೈದಾನಗಳಲ್ಲಿ ಭಾರತದ ಪ್ರದರ್ಶನವನ್ನು ಗಮನಿಸಿದರೆ ವಾಂಡರರ್ಸ್ ಕ್ರೀಡಾಂಗಣದಲ್ಲಿ ಮಾತ್ರವೇ ಭಾರತ ಈವರೆಗೆ ಸೋಲು ಕಾಣದೆ ಅಜೇಯವಾಗಿ ಉಳಿದುಕೊಂಡಿದೆ. ಇದಕ್ಕೆ ಸನಿಹದಲ್ಲಿರುವ ಭಾರತದ ಸಾಧನೆಯೆಂದರೆ ಕೆರೀಬಿಯನ್ ನಾಡಿನ ಜಾರ್ಜ್‌ಟೌನ್ ಕ್ರೀಡಾಂಗಣದಲ್ಲಿಯೂ ಭಾರತ ಸೋಲು ಕಂಡಿಲ್ಲ. ಆಡಿರುವ ಆರು ಪಂದ್ಯಗಳಲ್ಲಿಯೂ ಭಾರತ ಡ್ರಾ ಸಾಧಿಸಿದೆ. ಆದರೆ ಈ ತಾಣದಲ್ಲಿ 2002ರಿಂದೀಚೆಗೆ ಟೀಮ್ ಇಂಡಿಯಾ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಇದನ್ನು ಹೊರತುಪಡಿಸಿ ಏಷ್ಯಾ ಖಂಡಿಕ್ಕಿಂತ ಆಚೆ ಭಾರತದ ಮತ್ತೊಂದು ಅದೃಷ್ಟದ ಕ್ರೀಡಾಂಗಣವೆಂದರೆ ಅದು ನ್ಯೂಜಿಲೆಂಡ್‌ನ ಈಡನ್ ಪಾರ್ಕ್. ಈಡನ್ ಪಾರ್ಕ್‌ನಲ್ಲಿ ಭಾರತ ಒಟ್ಟು ಐದು ಪಂದ್ಯಗಳನ್ನು ಆಡಿದ್ದು ಅದರಲ್ಲಿ ಎರಡು ಪಂದ್ಯಗಳಲ್ಲಿ ಗೆಲುವು ಒಂದು ಸೋಲು ಹಾಗೂ ಎರಡು ಡ್ರಾ ಸಾಧಿಸಿದೆ.

ವಾಂಡರರ್ಸ್‌ನಲ್ಲಿ ಭಾರತೀಯ ಬ್ಯಾಟಿಂಗ್ ಸಾಧನೆ
ಈ ಕ್ರೀಡಾಂಗಣದಲ್ಲಿ ಭಾರತದ ಪರವಾಗಿ ಒಟ್ಟು ನಾಲ್ಕು ಶತಕಗಳು ದಾಖಲಾಗಿದ್ದು ಒಟ್ಟು 9 ಅರ್ಧ ಶತಕ ದಾಖಲಾಗಿದೆ. ಒಂದರಿಂದ 7ನೇ ಕ್ರಮಾಂಕದ ವರೆಗಿನ ಆಟಗಾರರ ಸರಾಸರಿ ಕೂಡ ಉತ್ತಮವಾಗಿದ್ದು 31.73ರಷ್ಟಿದೆ. ಇದು 19 ತಾಣಗಳಲ್ಲಿ ಭಾರತದ ಉತ್ತಮ ಸರಾಸರಿಯಲ್ಲಿ 10ನೇ ಸ್ಥಾನವನ್ನು ಹೊಂದಿದೆ.

ಬೌಲರ್‌ಗಳದ್ದೇ ಮೇಲುಗೈ
ಇನ್ನು ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತೀಯ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾಲು ಭಾರತೀಯ ಬೌಲರ್‌ಗಳದ್ದು ಎಂಬುದರಲ್ಲಿ ಅನುಮಾನವಿಲ್ಲ. ಬುಲ್‌ರಿಂಗ್ ಎಂದು ಕೂಡ ಕರೆಯಲ್ಪಡುವ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತೀಯ ಬೌಲರ್‌ಗಳು 27.59ರ ಸರಾಸರಿಯನ್ನು ಹೊಂದಿದ್ದು 57.8ರ ಸ್ಟ್ರೈಕ್‌ರೇಟ್ ಹೊಂದಿದ್ದು ಒಟ್ಟು 88 ವಿಕೆಟ್‌ಗಳು ಭಾರತೀಯ ಬೌಲರ್‌ಗಳ ಪಾಲಾಗಿದೆ. ಈ ಬೌಲಿಂಗ್ ಅಂಕಿಅಂಶ ಭಾರತೀಯ ಬೌಲರ್‌ಗಳು ಉಳಿದ ಎಲ್ಲಾ 19 ತಾಣಗಳಲ್ಲಿಯೂ ಅತ್ಯುತ್ತಮ ಸಾಧನೆಯಾಗಿದೆ. ವಾಂಡರರ್ಸ್ ಕ್ರೀಡಾಂಗಣದಲ್ಲಿ ಆಡಿರುವ ಎಲ್ಲಾ ಪ್ರವಾಸಿ ತಂಡಗಳಿಗಿಂತಲೂ ಭಾರತೀಯ ತಂಡದ ಈ ಬೌಲಿಂಗ್ ಸಾಧನೆ ಅತ್ಯುತ್ತಮ ಎನಿಸಿಕೊಳ್ಳುತ್ತದೆ. ಹೀಗಾಗಿಯೇ ಭಾರತ ವಾಂಡರರ್ಸ್ ಕ್ರೀಡಾಂಗಣಕ್ಕೆ ಕಣಕ್ಕಿಳಿಯುವಾಗ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿಯೇ ಕಣಕ್ಕಿಳಿಯುತ್ತಿದೆ.


Click it and Unblock the Notifications
