ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರದ ಆಟವನ್ನು ಪ್ರದರ್ಶಿಸುತ್ತಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತ ಭಾರೀ ಸೋಲಿನ ರುಚಿ ನೀಡಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ತಂಡವನ್ನು ಎಲ್ಲಾ ಮೂರು ವಿಭಾಗದಲ್ಲಿಯೂ ಕಟ್ಟಿಹಾಕಿದ್ದು 243 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದೆ. ಇದು ಕಳೆದ ಐದು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ಮೊದಲ ಸೋಲಾಗಿದೆ.
ಈ ಪಂದ್ಯದ ಬಳಿಕ ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಸ್ಪಿನ್ ಬೌಲರ್ ಕೇಶವ್ ಮಹರಾಜ್ ಈ ಪಂದ್ಯದ ಸೋಲನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ ಎಂದಿದ್ದಾರೆ. ಸೆಮಿಫೈನಲ್ ಪಂದ್ಯಕ್ಕೂ ಮುನ್ನ ತಂಡದ ಹುಳುಕನ್ನು ಕಂಡುಕೊಳ್ಳಲು ಇದರಿಂದ ಸಾಧ್ಯವಾಗಲಿದ್ದು ಅದನ್ನು ಸರಿಪಡಿಸಿಕೊಂಡು ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯುವುದಾಗಿ ಹೇಳಿಕೊಂಡಿದ್ದಾರೆ.

"ನನ್ನ ಪ್ರಕಾರ ಇದು ಉತ್ತಮವಾದ ಸಿದ್ಧತೆ ಎಂದು ಕೊಳ್ಳುತ್ತೇನೆ. ಸೆಮಿಫೈನಲ್ ಹಂತದಲ್ಲಿ ಉತ್ತಮವಾದ ಪ್ರದರ್ಶನ ನೀಡಲು ಇದು ಸಹಕಾರಿಯಾಗಲಿದೆ. ನಾವು ಯಾವೆಲ್ಲಾ ಕ್ಷೇತ್ರದಲ್ಲಿ ಪ್ರಗತಿ ಕಾಣಬೇಕಿದೆ ಎನ್ನುವುದನ್ನು ಇದರಿಂದ ಅರಿತುಕೊಳ್ಳಬಹುದು" ಎಂದಿದ್ದಾರೆ ಕೇಶವ್ ಮಹರಾಜ್.
ಇನ್ನು ಈ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮೊದಲಿಗೆ ಸೆಮಿಫೈನಲ್‌ಗೆ ಪ್ರವೇಶಿಸಿದರೆ ನಂತರ ದಕ್ಷಿಣ ಆಫ್ರಿಕಾ ತಂಡ ಕೂಡ ಈಗಾಗಲೇ ಸೆಮಿಫೈನಲ್ ಸ್ಥಾವನ್ನು ಖಚಿತಪಡಿಸಿಕೊಂಡಿದೆ. ಹೀಗಾಗಿ ಈ ಎರಡು ತಂಡಗಳ ನಡುವಿನ ಮುಖಾಮುಖಿ ಸಾಕಷ್ಟು ಕುತೂಹಲ ಮೂಡಿಸಿತ್ತು.
"ಟೂರ್ನಿಯಲ್ಲಿ ನಾವು ಅದ್ಭುತವಾದ ಪ್ರದರ್ಶನ ನೀಡಿದ್ದೇವೆ. ಮತ್ತೆ ನಾವು ಈ ಹಿಂದೆ ನೀಡಿದ ಪ್ರದರ್ಶನವನ್ನು ಮರುಕಳಿಸಬೇಕಿದೆ. ಅಲ್ಲದೆ ಚೆಂಡು ತಿರುವು ಪಡೆಯುತ್ತಿರುವಾಗ ಹೇಗೆ ಆಡಬೇಕು ಎನ್ನುವುದನ್ನು ಈ ಪಂದ್ಯದಕ್ಕಿ ಕಂಡುಕೊಳ್ಳಬಹುದು" ಎಂದಿದ್ದಾರೆ ಕೇಶ್ವ್ ಮಹರಾಜ್.
"ಬಹುಶಃ ಈ ಪಂದ್ಯದಲ್ಲಿ ಅನುಭವಿಸಿದ ಸೋಲು ಒಳ್ಳೆಯದಕ್ಕೇ ಎಂದು ನಾನು ಭಾವಿಸುತ್ತೇನೆ. ನಮ್ಮಲ್ಲಿರುವ ಹುಳುಕುಗಳನ್ನು ಈ ಪಂದ್ಯದಲ್ಲಿ ಕಂಡುಕೊಂಡೆವು. ಇದು ನಮ್ಮ ಪಾಲಿಗೆ ಉತ್ತಮವಾಗಿ ಕಣ್ತೆರೆಸಿದ ಪಂದ್ಯ" ಎಂದು ಕೇಶವ್ ಮಹರಾಜ್ ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದ ಬಳಿಕ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ್ದಾರೆ.