ಮತ್ತೆ ಕೊಹ್ಲಿಯನ್ನು ಕಡೆಗಣಿಸಿದ ಬಿಸಿಸಿಐ? ನಾಯಕ ಕೊಹ್ಲಿ ಮಾಡಬೇಕಿದ್ದ ಕೆಲಸ ಈಗ ರಾಹುಲ್ ಪಾಲು!

ಬಿಸಿಸಿಐ ಮತ್ತು ಟೀಮ್ ಇಂಡಿಯಾ ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ, ಬಿಸಿಸಿಐ ತನ್ನ ಆಟಗಾರರಿಗೆ ಸ್ಪಷ್ಟವಾದ ಮಾಹಿತಿಯನ್ನು ನೀಡದೇ ತನ್ನ ಪಾಡಿಗೆ ತಾನು ಕ್ರಮಗಳನ್ನು ಕೈಗೊಳ್ಳುತ್ತೆ, ಯಾವುದಾದರೂ ಮಹತ್ವದ ನಿರ್ಧಾರವನ್ನು ಕೈಗೊಳ್ಳಬೇಕಾದರೆ ಸಂಬಂಧಪಟ್ಟ ಆಟಗಾರನಿಗೆ ಮುಂಚಿತವಾಗಿ ತಿಳಿಸದೇ ಆ ಆಟಗಾರನನ್ನು ಕಡೆಗಣಿಸುತ್ತದೆ ಎಂಬ ದೊಡ್ಡ ಆರೋಪವನ್ನು ಬಿಸಿಸಿಐ ಈ ಹಿಂದಿನಿಂದಲೂ ಎದುರಿಸುತ್ತಿದೆ. ಆದರೆ ಈ ಎಲ್ಲಾ ಆರೋಪಗಳನ್ನು ಪದೇಪದೇ ತಳ್ಳಿಹಾಕುತ್ತಿದ್ದ ಬಿಸಿಸಿಐ ತನ್ನ ಮತ್ತು ಆಟಗಾರರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಾಗಲಿ ಅಥವಾ ಮನಸ್ತಾಪಗಳಾಗಲಿ ಇಲ್ಲ, ಆಟಗಾರರ ಜೊತೆ ಅಗತ್ಯವಾದ ಸಂಪರ್ಕವನ್ನು ಬೆಳೆಸಿ ವಿಷಯಗಳನ್ನು ಚರ್ಚಿಸಿದ ನಂತರವೇ ಮುಂದಿನ ಹೆಜ್ಜೆಯನ್ನು ಯಾವಾಗಲೂ ಇಡುವುದಾಗಿ ಹೇಳಿಕೆಗಳನ್ನು ನೀಡಿತ್ತು.
ಆದರೆ ಬಿಸಿಸಿಐ ವಿರುದ್ಧದ ಈ ಎಲ್ಲಾ ಸುದ್ದಿಗಳು ಕೇವಲ ವದಂತಿಯಲ್ಲ ಎಂಬ ಅನುಮಾನಗಳು ದೊಡ್ಡ ಮಟ್ಟದಲ್ಲಿ ಹೆಚ್ಚಾಗುವಂತೆ ಮಾಡಿದ್ದು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳುವ ಮುನ್ನ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಡೆಸಿದ ಮಾಧ್ಯಮ ಗೋಷ್ಠಿ. ಹೌದು, ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳುವ ಮುನ್ನ ವಿಶೇಷ ಮಾಧ್ಯಮಗೋಷ್ಠಿಯನ್ನು ನಡೆಸಿದ ವಿರಾಟ್ ಕೊಹ್ಲಿ ಬಿಸಿಸಿಐ ನಡೆಯ ಕುರಿತು ನೇರವಾದ ಹೇಳಿಕೆಗಳನ್ನು ನೀಡುವುದರ ಮೂಲಕ ತಾನು ಏಕದಿನ ನಾಯಕತ್ವದಿಂದ ಕೆಳಗಿಳಿಯುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿಲ್ಲ, ಬದಲಾಗಿ ಬಿಸಿಸಿಐ ಭಾರತ ಏಕದಿನ ತಂಡದ ನೂತನ ನಾಯಕನನ್ನು ಘೋಷಿಸುವ 90 ನಿಮಿಷಗಳ ಹಿಂದಷ್ಟೇ ನನಗೆ ವಿಷಯವನ್ನು ತಿಳಿಸಿತ್ತು ಮತ್ತು ಅದಕ್ಕೆ ನಾನು ವಿರೋಧ ವ್ಯಕ್ತಪಡಿಸದೇ ಒಪ್ಪಿಗೆಯನ್ನೂ ಸೂಚಿಸಿದ್ದೆ ಎಂದು ಹೇಳಿಕೆಗಳನ್ನು ನೀಡಿದ್ದರು. ಅಷ್ಟೇ ಅಲ್ಲದೇ ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನು ಬಿಸಿಸಿಐಗೆ ಸಲ್ಲಿಸಿದಾಗ ಯಾವುದೇ ಪ್ರತಿರೋಧವನ್ನು ವ್ಯಕ್ತಪಡಿಸದ ಬಿಸಿಸಿಐ ಒಪ್ಪಿಗೆಯನ್ನು ಸೂಚಿಸಿತ್ತು ಎಂಬ ಆಶ್ಚರ್ಯಕರ ಹೇಳಿಕೆಯನ್ನು ನೀಡಿದರು.
ವಿರಾಟ್ ಕೊಹ್ಲಿ ನೀಡಿದ ಇಷ್ಟು ಹೇಳಿಕೆಗಳು ಕ್ರಿಕೆಟ್ ಅಭಿಮಾನಿಗಳನ್ನು ಬಿಸಿಸಿಐ ವಿರುದ್ಧ ಕಿಡಿ ಕಾರುವಂತೆ ಮಾಡಿದ್ದವು. ಹೌದು, ಈ ಹಿಂದೆ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಟಿ ಟ್ವೆಂಟಿ ನಾಯಕತ್ವ ತ್ಯಜಿಸಲು ಮುಂದಾದಾಗ ಬಿಸಿಸಿಐ ಅವರ ನಿರ್ಧಾರವನ್ನು ತಿರಸ್ಕರಿಸಿತ್ತು ಆದರೂ ಸಹ ಕೊಹ್ಲಿ ತಮ್ಮ ನಿರ್ಧಾರದಲ್ಲಿಯೇ ಮುಂದುವರಿದರು ಎಂಬ ಹೇಳಿಕೆಯನ್ನು ನೀಡಿದ್ದರು. ಹೀಗಾಗಿ ಸೌರವ್ ಗಂಗೂಲಿ ಅಂದು ಕೊಹ್ಲಿ ಕುರಿತು ಸುಳ್ಳು ಹೇಳಿಕೆಯನ್ನು ನೀಡಿದ್ದರು ಎಂದು ಕೆಂಡಾಮಂಡಲವಾದ ವಿರಾಟ್ ಕೊಹ್ಲಿ ಅಭಿಮಾನಿಗಳು ಬಿಸಿಸಿಐ ಬೇಕಂತಲೇ ಕೊಹ್ಲಿ ಅವರನ್ನು ಕಡೆಗಣಿಸುತ್ತಿದೆ ಎಂಬ ಆರೋಪವನ್ನು ಮಾಡಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೇ ಇದೀಗ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದು ಇಲ್ಲಿನ ಬೆಳವಣಿಗೆಯೊಂದು ಇದೀಗ ಮತ್ತೆ ಕೊಹ್ಲಿ ಅಭಿಮಾನಿಗಳನ್ನು ಕೆರಳಿಸುವ ಮುನ್ಸೂಚನೆಯನ್ನು ನೀಡಿದೆ. ಆ ಕುರಿತಾದ ವಿವರ ಈ ಕೆಳಕಂಡಂತಿದೆ..

ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಕುರಿತ ಸುದ್ದಿಗೋಷ್ಠಿ ನಡೆಸಲಿದ್ದಾರೆ ಕೆಎಲ್ ರಾಹುಲ್!
ವಾಡಿಕೆಯಂತೆ ಯಾವುದೇ ಸರಣಿಗಳ ಕುರಿತಾಗಿ ಸುದ್ದಿಗೋಷ್ಠಿ ನಡೆಸಬೇಕೆಂದರೆ ಅದನ್ನು ತಂಡದ ನಾಯಕನೇ ನಡೆಸಬೇಕು. ಹೌದು, ಟೀಮ್ ಇಂಡಿಯಾ ನಾಯಕ ಮತ್ತು ಕೋಚ್ ಮಾಧ್ಯಮಗಳ ಮುಂದೆ ಬಂದು ತಮ್ಮ ಮುಂದಿನ ಸರಣಿಗಳ ಕುರಿತು ಮಾತನಾಡುವುದು ಸಾಮಾನ್ಯ. ಆದರೆ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನಡೆಯಲಿರುವ ಮಾಧ್ಯಮಗೋಷ್ಠಿಯಲ್ಲಿ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬದಲು ಉಪನಾಯಕ ಕೆಎಲ್ ರಾಹುಲ್ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದ್ದು ಇದು ವಿರಾಟ್ ಕೊಹ್ಲಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಗಾಯಕ್ಕೊಳಗಾದ ರೋಹಿತ್ ಶರ್ಮಾ ಬದಲು ಉಪ ನಾಯಕನಾದ ಕೆಎಲ್ ರಾಹುಲ್
ಇನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಪ್ರಕಟವಾಗಿದ್ದ ಟೆಸ್ಟ್ ತಂಡದಲ್ಲಿ ಅಜಿಂಕ್ಯ ರಹಾನೆ ಬದಲು ರೋಹಿತ್ ಶರ್ಮಾಗೆ ಉಪ ನಾಯಕನ ಪಟ್ಟವನ್ನು ನೀಡಲಾಗಿತ್ತು. ಆದರೆ ಪ್ರವಾಸವನ್ನು ಕೈಗೊಳ್ಳುವುದಕ್ಕೂ ಮುನ್ನವೇ ಗಾಯಕ್ಕೊಳಗಾದ ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಗುಳಿದರು. ಹೀಗಾಗಿ ಬಿಸಿಸಿಐ ರೋಹಿತ್ ಶರ್ಮಾ ಬದಲು ಕೆಎಲ್ ರಾಹುಲ್ ಹೆಗಲಿಗೆ ಉಪ ನಾಯಕನ ಜವಾಬ್ದಾರಿಯನ್ನು ಹೊರಿಸಿತು.

ಡಿಸೆಂಬರ್ 24 ಅಥವಾ 25ರಂದು ಸುದ್ದಿಗೋಷ್ಠಿ
ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಚೊಚ್ಚಲ ಟೆಸ್ಟ್ ಪಂದ್ಯ ಡಿಸೆಂಬರ್ 26ರ ಭಾನುವಾರದಂದು ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಕೆಎಲ್ ರಾಹುಲ್ ಡಿಸೆಂಬರ್ 24 ಅಥವಾ ಡಿಸೆಂಬರ್ 25ರಂದು ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಜೊತೆ ಚರ್ಚಿಸಲಿದ್ದಾರೆ ಎನ್ನಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications