ನವೆಂಬರ್ 5ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 243 ರನ್‌ಗಳ ಬೃಹತ್ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.
ರವೀಂದ್ರ ಜಡೇಜಾ ತಮ್ಮ ಆಲ್‌ರೌಂಡ್ ಪ್ರದರ್ಶನದ ಮೂಲಕ ಏಕದಿನ ವಿಶ್ವಕಪ್‌ನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು.

ಅಲ್ಲದೆ, ಇದು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಭಾರತೀಯ ಸ್ಪಿನ್ನರ್ ಐದು ವಿಕೆಟ್‌ಗಳ ಸಾಧನೆ ಮಾಡಿದಂತಾಯಿತು. ಈ ಮೊದಲು 2011ರ ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ ಇದನ್ನು ಮಾಡಿದ ಕೊನೆಯ ಬೌಲರ್ ಆಗಿದ್ದರು. ಆಗ ತಮ್ಮ 10 ಓವರ್‌ಗಳ ಕೋಟಾದಲ್ಲಿ 31 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದರು.
ಇದೀಗ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತೀಯ ಬೌಲರ್‌ನ ಅತ್ಯುತ್ತಮ ಬೌಲಿಂಗ್ ಅಂಕಿಅಂಶವಾಗಿದೆ. 2019ರ ಏಕದಿನ ವಿಶ್ವಕಪ್‌ನಲ್ಲಿ 51 ರನ್‌ಗಳಿಗೆ 4 ವಿಕೆಟ್ ಪಡೆದಿದ್ದ ಯುಜ್ವೇಂದ್ರ ಚಹಾಲ್ ಹಿಂದಿನ ಅತ್ಯುತ್ತಮ ಸಾಧನೆ ಮಾಡಿದ್ದರು.
ಇನ್ನು ವಿರಾಟ್ ಕೊಹ್ಲಿ ಅವರ 49ನೇ ಏಕದಿನ ಶತಕ ಮತ್ತು ಶ್ರೇಯಸ್ ಅಯ್ಯರ್ ಅವರ 77 ರನ್‌ಗಳ ನಂತರ, ಭಾರತ ತಂಡ 50 ಓವರ್‌ಗಳಲ್ಲಿ 327 ರನ್‌ಗಳನ್ನು ಕಲೆಹಾಕಿತ್ತು.

15 ಎಸೆತಗಳಲ್ಲಿ 29 ರನ್ ಗಳಿಸಿದ ರವೀಂದ್ರ ಜಡೇಜಾ ಬ್ಯಾಟ್ ಮೂಲಕವೂ ಬಿರುಸಿನ ಹೊಡೆತಗಳು ಭಾರತ ತಂಡದ ಮೊತ್ತವನ್ನು 320ರ ಗಡಿ ದಾಟಿಸಿತು.
ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಅಪಾಯಕಾರಿ ಕ್ವಿಂಟನ್ ಡಿ ಕಾಕ್ ಅವರನ್ನು ಬೌಲ್ಡ್ ಮಾಡುವುದರೊಂದಿಗೆ ಭಾರತದ ಬೌಲರ್‌ಗಳು ಅದ್ಭುತವಾಗಿ ಪ್ರಾರಂಭಿಸಿದರು.
ರವೀಂದ್ರ ಜಡೇಜಾ ಕಣಕ್ಕೆ ಇಳಿಯುವ ಮೊದಲು ಭಾರತದ ವೇಗಿಗಳು ದಕ್ಷಿಣ ಆಫ್ರಿಕಾ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದ್ದರಿಂದ ಟೆಂಬಾ ಬವುಮಾ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ರನ್ ಗಳಿಸಲು ಕಷ್ಟವಾಯಿತು. ಭಾರತದ ಆಲ್‌ರೌಂಡರ್ ತನ್ನ ಮೂರನೇ ಎಸೆತದಲ್ಲಿ ಟೆಂಬಾ ಬವುಮಾರನ್ನು ಔಟ್ ಮಾಡಿದರು.
ರವೀಂದ್ರ ಜಡೇಜಾ ನಂತರ ಹೆನ್ರಿಚ್ ಕ್ಲಾಸೆನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರೆ, ಡೇವಿಡ್ ಮಿಲ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ನಂತರ ಬಲೆಗೆ ಬಿದ್ದವರು ಕೇಶವ್ ಮಹಾರಾಜ್.
ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳಿಂದ ಸ್ವಲ್ಪ ಪ್ರತಿರೋಧದ ನಂತರ ಕಗಿಸೊ ರಬಾಡ ಅವರ ಕ್ಯಾಚ್‌ನೊಂದಿಗೆ ರವೀಂದ್ರ ಜಡೇಜಾ ಐದನೇ ವಿಕೆಟ್ ಪಡೆದರು.