ಗುರುವಾರ, ಜನವರಿ 4ರಂದು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿನ ಕಠಿಣ ಪಿಚ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಪ್ರವಾಸಿ ಭಾರತ ತಂಡ 7 ವಿಕೆಟ್‌ಗಳ ಗೆಲುವು ದಾಖಲಿಸಿತು. ಈ ಪಂದ್ಯವು ಕೇವಲ ಒಂದೂವರೆ ದಿನಗಳಲ್ಲಿ ಮುಕ್ತಾಯಗೊಂಡಿತು.
ಇದೇ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಕೇಪ್ ಟೌನ್‌ನಲ್ಲಿ ಐತಿಹಾಸಿಕ ಟೆಸ್ಟ್ ಗೆಲುವಿಗೆ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ನೇತೃತ್ವದ ವೇಗದ ಬೌಲಿಂಗ್ ಘಟಕ ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.
ಕೇಪ್ ಟೌನ್‌ನ ಪಂದ್ಯವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಡಿದ ಅತ್ಯಂತ ಕಡಿಮೆ ಟೆಸ್ಟ್ ಪಂದ್ಯವಾಗಿದ್ದು, ಗೆಲುವಿನ ಫಲಿತಾಂಶವನ್ನು ನೀಡಿತು. ಪಂದ್ಯದ ನಂತರ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಸೆಂಚುರಿಯನ್‌ನಲ್ಲಿ ಹೀನಾಯ ಸೋಲಿನ ನಂತರ, ಸರಣಿ ಡ್ರಾ ಸಾಧಿಸಲು ಭಾರತಕ್ಕೆ ಇದು ದೊಡ್ಡ ಗೆಲುವಾಗಿದೆ ಎಂದು ಹೇಳಿದರು.

ರೋಹಿತ್ ಶರ್ಮಾ ಭಾರತದ ಟೆಸ್ಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿಯನ್ನು ಡ್ರಾ ಮಾಡಿದ ಎರಡನೇ ಭಾರತೀಯ ನಾಯಕರೆನಿಸಿದರು. ಈ ಮೊದಲು ಎಂಎಸ್ ಧೋನಿ ಅವರು ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿಯನ್ನು ಡ್ರಾ ಮಾಡಿದ ಮೊದಲ ಭಾರತೀಯ ನಾಯಕರಾಗಿದ್ದರು.
"ಇದು ಒಂದು ದೊಡ್ಡ ಸಾಧನೆ. ನಾವು ಸೆಂಚುರಿಯನ್‌ನಲ್ಲಿನ ನಮ್ಮ ತಪ್ಪುಗಳಿಂದ ಕಲಿಯಬೇಕಾಗಿತ್ತು. ನಾವು ಉತ್ತಮವಾಗಿ ಮರಳಿದ್ದೇವೆ, ವಿಶೇಷವಾಗಿ ನಮ್ಮ ಬೌಲರ್‌ಗಳು. ಕೆಲವು ಯೋಜನೆಗಳನ್ನು ಹೊಂದಿದ್ದರು ಮತ್ತು ಹುಡುಗರಿಗೆ ಬಹುಮಾನ ಸಿಕ್ಕಿದೆ. 100 ರನ್ ಮುನ್ನಡೆ ಪಡೆಯಲು ನಾವು ಉತ್ತಮವಾಗಿ ಬ್ಯಾಟ್ ಮಾಡಿದ್ದೇವೆ. ಆದರೆ ಕೊನೆಯ ಆರು ವಿಕೆಟ್ ಪತನವನ್ನು ನೋಡಲು ಸಂತೋಷವಾಗಲಿಲ್ಲ".
"ಇದು ಒಂದು ಸಣ್ಣ ಆಟ ಎಂದು ನಮಗೆ ತಿಳಿದಿತ್ತು, ಪ್ರತಿ ರನ್‌ನ ಮಹತ್ವವೂ ನಮಗೆ ತಿಳಿದಿತ್ತು. ಆ ಮುನ್ನಡೆ ಪಡೆಯುವುದು ಬಹಳ ಮುಖ್ಯ," ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಎರಡನೇ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿದರು.
ಮೊದಲ ಇನ್ನಿಂಗ್ಸ್‌ನಲ್ಲಿ 15 ರನ್ ನೀಡಿ 6 ವಿಕೆಟ್ ಪಡೆದಿದ್ದಕ್ಕಾಗಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದ ಮೊಹಮ್ಮದ್ ಸಿರಾಜ್ ಅವರನ್ನು ನಾಯಕ ರೋಹಿತ್ ಶರ್ಮಾ ಶ್ಲಾಘಿಸಿದರು.
ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಪ್ರದರ್ಶನ ಮೊದಲ ದಿನದ ಮೊದಲ ಸೆಷನ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಕೇವಲ 55 ರನ್‌ಗಳಿಗೆ ಆಲೌಟ್ ಮಾಡಲು ಸಹಾಯ ಮಾಡಿತು.

"ತುಂಬಾ ವಿಶೇಷವಾಗಿದ್ದು, ನಿಮಗೆ ಆಗಾಗ್ಗೆ ಸಿಗುವುದಿಲ್ಲ. ನಾವು ವಿಷಯಗಳನ್ನು ಸರಳವಾಗಿಡುವುದರ ಬಗ್ಗೆ ಮಾತನಾಡಿದ್ದೆವು ಮತ್ತು ಅದು ಫಲ ನೀಡಿತು. ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮುಖೇಶ್ ಕುಮಾರ್ ಮತ್ತು ಪ್ರಸಿದ್ಧ್ ಕೃಷ್ಣ ಅವರಿಗೆ ಗೆಲುವಿನ ಕ್ರೆಡಿಟ್ ಸಲ್ಲಬೇಕು," ಭಾರತ ತಂಡದ ನಾಯಕ ಶರ್ಮಾ ತಮ್ಮ ವೇಗಿಗಳನ್ನು ಹೊಗಳಿದರು.
ಎರಡನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಸ್ಪಿನ್ನರ್‌ಗಳು ಒಂದೇ ಒಂದು ಓವರ್ ಬೌಲ್ ಮಾಡಿಲ್ಲ. ರೋಹಿತ್ ಶರ್ಮಾ ಅವರು ದಕ್ಷಿಣ ಆಫ್ರಿಕಾದಲ್ಲಿ ಸವಾಲಿನ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡಿರುವುದಾಗಿ ಹೇಳಿದರು ಮತ್ತು ಕಳೆದ 3-4 ವರ್ಷಗಳಲ್ಲಿ ಭಾರತ ತಂಡವು ತವರಿನ ಹೊರಗೆ ತಮ್ಮ ಪ್ರದರ್ಶನಗಳಿ ಬಹಳಷ್ಟು ಹೆಮ್ಮೆಪಡುತ್ತದೆ ಎಂದು ತಿಳಿಸಿದರು.
"ದಕ್ಷಿಣ ಆಫ್ರಿಕಾಕ್ಕೆ ಬಂದಾಗಲೆಲ್ಲಾ ಇದು ಸವಾಲಿನ ಸಂಗತಿಯಾಗಿದೆ. ನಾವು ಭಾರತದ ಹೊರಗೆ ಸಾಕಷ್ಟು ಉತ್ತಮ ಕ್ರಿಕೆಟ್ ಆಡಿದ್ದೇವೆ, ಅದಕ್ಕಾಗಿ ನಾವು ತುಂಬಾ ಹೆಮ್ಮೆಪಡುತ್ತೇವೆ. ನಾವು ಸರಣಿಯನ್ನು ಗೆಲ್ಲಲು ಇಷ್ಟಪಡುತ್ತೇವೆ. ದಕ್ಷಿಣ ಆಫ್ರಿಕಾ ಉತ್ತಮ ತಂಡ, ಅವರು ಯಾವಾಗಲೂ ನಮಗೆ ಸವಾಲು ಹಾಕುತ್ತಾರೆ," ಎಂದರು.
"ಇಂದಿನ ಪ್ರದರ್ಶನದಿಂದ ನಾವು ಸಾಕಷ್ಟು ಹೆಮ್ಮೆ ಪಡಬಹುದು. ಡೀನ್ ಎಲ್ಗರ್ ಅವರು ದಕ್ಷಿಣ ಆಫ್ರಿಕಾ ತಂಡಕ್ಕೆ ಪ್ರಮುಖ ಆಟಗಾರರಾಗಿದ್ದಾರೆ. ನಾವು ಅವರನ್ನು ತುಂಬಾ ಪ್ರಶಂಸಿಸುತ್ತೇವೆ. ನಾನು ಆತನಿಗೆ ಶುಭ ಹಾರೈಸಲು ಬಯಸುತ್ತೇನೆ. ಅದ್ಭುತವಾದ ವೃತ್ತಿಜೀವನ, ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಕೆಗಳು," ಎಂದು ರೋಹಿತ್ ಶರ್ಮಾ ಮಾತು ಮುಗಿಸಿದರು.