ಬುಮ್ರಾ ನಂತರ ಭಾರತಕ್ಕೆ ಹೊಸ ತಲೆನೋವು, ಮತ್ತೊಬ್ಬ ಪ್ರಮುಖ ವೇಗಿಗೆ ಗಾಯದ ಸಮಸ್ಯೆ

ಬೆನ್ನಿನ ಗಾಯದ ಸಮಸ್ಯೆಯಿಂದ ಈಗಾಗಲೇ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿರುವುದು ಟೀಂ ಇಂಡಿಯಾಕ್ಕೆ ಭಾರಿ ಸಮಸ್ಯೆಯಾಗಿದೆ. ಇದರ ಬೆನ್ನಲ್ಲೇ ಈಗ ಭಾರತಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಬೌಲಿಂಗ್ ಮಾಡಿ ಪ್ರಮುಖ ವಿಕೆಟ್‌ಗಳನ್ನು ಪಡೆದು ಮಿಂಚಿದ ಅರ್ಷದೀಪ್, ಈಗ ಬೆನ್ನುನೋವಿನ ಕಾರಣದಿಂದ ದಕ್ಷಿಣ ಆಫ್ರಿಕಾ ವಿರುದ್ದದ 3ನೇ ಟಿ20 ಪಂದ್ಯದಿಂದ ಹೊರಗುಳಿದಿದ್ದಾರೆ. ಆಟಗಾರರ ಫಿಟ್ನೆಸ್ ಬಗ್ಗೆ ರೋಹಿತ್ ಶರ್ಮಾ ತೀವ್ರ ಕಾಳಜಿ ವಹಿಸುತ್ತಿರುವ ಕಾರಣ ಮೂರನೇ ಪಂದ್ಯದಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಮೂರನೇ ಟಿ20 ಪಂದ್ಯದ ಟಾಸ್ ವೇಳೆ ಮಾತನಾಡಿದ ರೋಹಿತ್ ಶರ್ಮಾ, "ಅರ್ಶ್‌ದೀಪ್ ತನ್ನ ಬೆನ್ನಿನ ಕೆಲವು ಸಮಸ್ಯೆಗಳಿಂದ ಪಂದ್ಯದಿಂದ ಹೊರಗುಳಿದಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ, ಸಮಸ್ಯೆ ಗಂಭೀರವಾಗಿಲ್ಲ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ಮೊದಲನೇ ಟಿ20 ಪಂದ್ಯದಲ್ಲಿ ಬುಮ್ರಾ ಆಟದಿಂದ ಹೊರಗುಳಿದಾಗ ಕೂಡ ರೋಹಿತ್ ಶರ್ಮಾ ಇದೇ ರೀತಿ ಹೇಳಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಬುಮ್ರಾ ಆಡುತ್ತಿಲ್ಲ ಎಂದು ಹೇಳಿದ್ದರು. ಆದರೆ, ಕೊನೆಗೆ ಗಾಯದ ಸಮಸ್ಯೆಯಿಂದಾಗಿ ಬುಮ್ರಾ ವಿಶ್ವಕಪ್ ಟೂರ್ನಿಯನ್ನು ಕಳೆದುಕೊಂಡರು.

ಟಿ20 ವಿಶ್ವಕಪ್‌ನಲ್ಲಿ ಪ್ರಮುಖ ವೇಗಿ
ಗಾಯದ ಸಮಸ್ಯೆಯಿಂದಾಗಿ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಗುಳಿದ ಮೇಲೆ ಅರ್ಶ್‌ದೀಪ್ ಸಿಂಗ್ ಭಾರತದ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ತಿರುವನಂತಪುರ ಮತ್ತು ಗುವಾಹಟಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಅರ್ಶ್‌ದೀಪ್ ಪ್ರಮುಖ 5 ವಿಕೆಟ್‌ಗಳನ್ನು ಪಡೆದಿದ್ದಾರೆ.
ಬುಮ್ರಾ ಸ್ಥಾನಕ್ಕೆ ಇನ್ನೂ ಯಾವ ಆಟಗಾರರ ಹೆಸರನ್ನು ಹೆಸರಿಸಿಲ್ಲ, ಮೊಹಮ್ಮದ್ ಶಮಿ ಈ ವಾರ ತಮ್ಮ ಫಿಟ್ನೆಸ್ ಪರೀಕ್ಷೆಗಾಗಿ ಬೆಂಗಳೂರಿನಲ್ಲಿರುವ ಎನ್‌ಸಿಎಗೆ ಹಾಜರಾಗಲಿದ್ದಾರೆ. ಅಲ್ಲಿ, ಹೃದಯ ರಕ್ತನಾಳದ ಪರೀಕ್ಷೆ ಮಾಡಲಿದ್ದು, ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರೆ ಮಾತ್ರ ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.

ಆಸ್ಟ್ರೇಲಿಯಾ ಸರಣಿಯಿಂದ ಹೊರಗುಳಿದಿದ್ದ ಅರ್ಶ್‌ದೀಪ್
ಅರ್ಶ್‌ದೀಪ್ ತಮ್ಮ ಫಿಟ್ನೆಸ್ ಸಾಬೀತುಪಡಿಸಬೇಕಿದ್ದ ಕಾರಣ ಏಷ್ಯಾಕಪ್ ನಂತರ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಹೊರಗುಳಿದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಬುಮ್ರಾ ಅನುಪಸ್ಥಿತಿಯಲ್ಲಿ ಅರ್ಶ್‌ದೀಪ್ ಮತ್ತು ಚಹಾರ್ ಜೋಡಿ ಉತ್ತಮ ಬೌಲಿಂಗ್ ಮಾಡಿದ್ದರು.
ಮೊಹಮ್ಮದ್ ಶಮಿ ಫಿಟ್ನೆಸ್ ಇನ್ನೂ ಖಚಿತವಾಗಿಲ್ಲ, ಬುಮ್ರಾ ಗಾಯಗೊಂಡು ಹೊರಗುಳಿದಿದ್ದಾರೆ. ಇದರ ನಡುವೆ ಅರ್ಶ್‌ದೀಪ್ ಬೆನ್ನಿನ ಗಾಯದಿಂದ ಮೂರನೇ ಟಿ20 ಪಂದ್ಯದಿಂದ ಹೊರಗುಳಿದಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications