Ind vs SA: ವಿಶ್ವದಾಖಲೆ ಮೇಲೆ ಕಣ್ಣು: ಮೊದಲ ಟಿ20 ಪಂದ್ಯಕ್ಕೆ ಅಭ್ಯಾಸ ಆರಂಭಿಸಿದ ರಾಹುಲ್ ಪಡೆ

ಮುಂದಿನ ಗುರುವಾರದಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ನೇತೃತ್ವದ ಭಾರತ ತಂಡ ಈಗಾಗಲೇ ಒಟ್ಟಾಗಿದ್ದು ದೆಹಲಿಯಲ್ಲಿ ನೆಟ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಗುರುವಾರ ನಡೆಯಲಿರುವ ಮೊದಲ ಟಿ20 ಪಂದ್ಯ ಭಾರತಕ್ಕೆ ವಿಶ್ವದಾಖಲೆ ನಿರ್ಮಿಸಬಹುದಾದ ಪಂದ್ಯವಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಭಾನುವಾರವೇ ಭಾರತ ತಂಡದ ಸದಸ್ಯರು ದೆಹಲಿಗೆ ಬಂದಿಳಿಯಲು ಆರಂಭಿಸಿದ್ದರು. ನಾಯಕ ಕೆಎಲ್ ರಾಹುಲ್ ಉಪ ನಾಯಕ ರಿಷಬ್ ಪಂತ್ ಸೇರಿದಂತೆ ಬಹುತೇಕರು ಭಾನುವಾರವೇ ಆಗಮಿಸಿದ್ದಾರೆ. ಈ ಮೂಲಕ ಹೈವೋಲ್ಟೇಜ್ ಪಂದ್ಯಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಭಾರತ ಸತತವಾಗಿ 12 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಇನ್ನೊಂದು ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸತತವಾಗಿ ಅತಿ ಹೆಚ್ಚು ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆದಂತಾಗುತ್ತದೆ.

ನಿರೀಕ್ಷೆ ಮೂಡಿಸಿದ ಐಪಿಎಲ್ ಪ್ರದರ್ಶನ
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ ವಿರುದ್ಧಧ ಈ ಸರಣಿಗೆ ಆಯ್ಕೆಯಾಗಿದ್ದು ಈ ಮೂಲಕ ಸುಮಾರು ಮೂರ ವರ್ಷಗಳ ಬಳಿಕ ಭಾರತ ತಂಡದ ಜರ್ಸಿ ತೊಡಲಿದ್ದಾರೆ. ಇನ್ನು ಕಳೆದ ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿರುವ ಕಾರಣ ಆ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗಿಯಾಗುವ ಕನಸಿಟ್ಟುಕೊಂಡಿದ್ದಾರೆ ಡಿಕೆ. ಹೀಗಾಗಿ ಈ ಆಟಗಾರನ ಪ್ರದರ್ಶನ ಸಾಕಷ್ಟು ಕುತೂಹಲ ಮೂಡಿಸಿದೆ.
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ನೀಡಿದ ಅಮೋಘ ಪ್ರದರ್ಶನದಿಂದಾಗಿ ಭಾರತ ತಂಡದಲ್ಲಿ ಸ್ಥಾನ ಗಳಿಸಿದ ಇಬ್ಬರು ಯುವ ಆಟಗಾರರು ಎಂದರೆ ಉಮ್ರಾನ್ ಮಲಿಕ್ ಹಾಗೂ ಅರ್ಷ್‌ದೀಪ್ ಸಿಂಗ್. ಈ ಇಬ್ಬರು ಆಟಗಾರರು ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಲು ಸಜ್ಜಾಗಿದ್ದಾರೆ.

ಸಂಪೂರ್ಣ ಸಾಮರ್ಥ್ಯದೊಂದಿಗೆ ಬಂದಿಳಿದ ದ. ಆಫ್ರಿಕಾ
ಇನ್ನು ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಸಂಪೂರ್ಣ ಸಾಮರ್ಥ್ಯದೊಂದಿಗೆ ಭಾರತಕ್ಕೆ ಬಂದಿಳಿದಿದೆ. ಅಲ್ಲದೆ ಕೆಲ ಆಟಗಾರರು ಐಪಿಎಲ್‌ನಲ್ಲಿಯೂ ಆಡಿದ ಅನುಭವ ಹೊಂದಿದ್ದು ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಹೀಗಾಗಿ ಭಾರತ ತಂಡದ ವಿರುದ್ಧದ ಸರಣಿಯಲ್ಲಿಯೂ ತಮ್ಮ ಫಾರ್ಮ್ ಮುಂದುವರಿಸುವ ಆತ್ಮವಿಶ್ವಾಸದಲ್ಲಿದ್ದಾರೆ.

ಸರಣಿಯ ಮಾಹಿತಿ
ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಈ ಸರಣಿ ಜೂನ್ 9ರಿಂದ ಆರಂಭವಾಗಲಿದೆ. ಐದು ಪಂದ್ಯಗಳ ಟಿ20 ಸರಣಿ ಇದಾಗಿದ್ದು ಐದು ಭಿನ್ನ ತಾಣಗಳಲ್ಲಿ ಈ ಸರಣಿ ಆಯೋಜನೆಯಾಗಲಿದೆ. ಮೊದಲ ಪಂದ್ಯ ಜೂನ್ 9ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದರೆ ಎರಡನೇ ಪಂದ್ಯ ಜೂನ್ 12ರಂದು ಕಟಕ್‌ನಲ್ಲಿ ನಡೆಯಲಿದೆ. ಮೂರನೇ ಪಂದ್ಯ ಜೂನ್ 14ರಂದು ವಿಶಾಖಪಟ್ಟಣಂನಲ್ಲಿ ಆಯೋಜನೆಯಾಗಲಿದೆ. ನಾಲ್ಕನೇ ಪಂದ್ಯ ಜೂನ್ 17ರಂದು ರಾಜ್‌ಕೋಟ್‌ನಲ್ಲಿ ಆಯೋಜನೆಯಾದರೆ ಅಂತಿಮ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಈ ಪಂದ್ಯ ಜೂನ್ 19ರಂದು ನಡೆಯಲಿದೆ

ಇತ್ತಂಡಗಳ ಸ್ಕ್ವಾಡ್‌ಗಳು
ಟಿ20 ಸರಣಿಗೆ ಭಾರತ ಸ್ಕ್ವಾಡ್: ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ) (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
ದಕ್ಷಿಣ ಆಫ್ರಿಕಾ ಟಿ20 ಬಳಗ ಹೀಗಿದೆ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನಾರ್ಕಿಯಾ, ವಾಯ್ನೆ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ಟಬ್ರೈಜ್ ಶಮ್ಸಿ, ಸ್ಟೀಸ್ಟನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications