IND vs SA: ಮತ್ತೊಮ್ಮೆ ಕೈಕೊಟ್ಟ ಬ್ಯಾಟಿಂಗ್; ಮೊದಲ ಟೆಸ್ಟ್ ಪಂದ್ಯದಲ್ಲಿ ಹರಿಣ ಪಡೆ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಸೋಲು!
ಮಂಗಳವಾರ, ಡಿಸೆಂಬರ್ 28ರಿಂದ ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಆರಂಭವಾಗಿದ್ದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಪ್ರವಾಸಿ ಭಾರತ ತಂಡ ಇನ್ನಿಂಗ್ಸ್ ಹಾಗೂ 32 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು.
ಗುರುವಾರ, ಡಿಸೆಂಬರ್ 28ರಂದು ಮೂರನೇ ದಿನದಾಟದಲ್ಲೇ ಪಂದ್ಯ ಮುಕ್ತಾಯಗೊಂಡಿದ್ದು, ಮತ್ತೊಮ್ಮೆ ಭಾರತೀಯ ಬ್ಯಾಟಿಂಗ್ ಲೈನ್‌ಅಪ್ ಕೈಕೊಟ್ಟಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಶತಕ ಸಿಡಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸುವ ಮೂಲಕ ಮಾತ್ರ ಏಕಾಂಗಿ ಹೋರಾಟ ನಡೆಸಿದರು.

ಇನ್ನು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 1-0 ಅಂತರದ ಮುನ್ನಡೆ ಸಾಧಿಸಿದ್ದು, ಎರಡನೇ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವುದು ಭಾರತದ ಮುಂದಿರುವ ಏಕೈಕ ಸವಾಲಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅವರ ಅಮೋಘ ಶತಕದ ಸಹಾಯದಿಂದ 67.4 ಓವರ್‌ಗಳಲ್ಲಿ 245 ರನ್‌ಗಳನ್ನು ಕಲೆಹಾಕಿ ಆಲೌಟ್ ಆಯಿತು.
ನಂತರ, ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಡೀನ್ ಎಲ್ಗರ್ ಅವರ ಭರ್ಜರಿ ಶತಕದ ನೆರವಿನಿಂದ 108.4 ಓವರ್‌ಗಳಲ್ಲಿ 408 ರನ್‌ಗಳಿಗೆ ಸರ್ವಪತನ ಕಂಡಿತು ಮತ್ತು 157 ರನ್‌ಗಳ ಅಮೂಲ್ಯ ಮುನ್ನಡೆ ಸಾಧಿಸಿತು.
ಬಳಿಕ, ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ವಿರಾಟ್ ಕೊಹ್ಲಿಯ ಏಕೈಕ ಅರ್ಧಶತಕದ ಮೂಲಕ 34.1 ಓವರ್‌ಗಳಲ್ಲಿ 131 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಾಗೂ 32 ರನ್‌ಗಳ ಸೋಲು ಅನುಭವಿಸಿತು.
ಭಾರತ ತಂಡದ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ 0 ಸುತ್ತಿದರೆ, ಯಶಸ್ವಿ ಜೈಸ್ವಾಲ್ 5 ರನ್‌ಗಳಿಗೆ ಔಟಾದರು. ನಂತರ ಬಂದ ಶುಭ್ಮನ್ ಗಿಲ್ 26 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 6 ರನ್, ಕೆಎಲ್ ರಾಹುಲ್ 4 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
ವಿರಾಟ್ ಕೊಹ್ಲಿ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿ 82 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 76 ರನ್ ಗಳಿಸಿ ಕೊನೆಯವರಾಗಿ ಔಟಾದರು. ಉಳಿದಂತೆ ರವಿಚಂದ್ರನ್ ಅಶ್ವಿನ್ 0, ಶಾರ್ದೂಲ್ ಠಾಕೂರ್ 2 ರನ್, ಜಸ್ಪ್ರೀತ್ ಬುಮ್ರಾ 0, ಮೊಹಮ್ಮದ್ ಸಿರಾಜ್ 4 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ನಾಂದ್ರೆ ಬರ್ಗರ್ 4 ವಿಕೆಟ್ ಕಬಳಿಸಿದರೆ, ಮಾರ್ಕೊ ಜಾನ್ಸೆನ್ 3 ವಿಕೆಟ್ ಮತ್ತು ಕಗಿಸೊ ರಬಾಡ 2 ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಮೊದಲ ಇನ್ನಿಂಗ್ಸ್‌ನಲ್ಲಿ ಏಡೆನ್ ಮಾರ್ಕ್ರಾಮ್ 5 ರನ್, ಟೋನಿ ಡಿ ಜೋರ್ಜಿ 28 ರನ್, ಕೀಗನ್ ಪೀಟರ್ಸನ್ 2 ರನ್, ಡೇವಿಡ್ ಬೇಡಿಂಗ್‌ಹ್ಯಾಮ್ 56 ರನ್, ಕೈಲ್ ವೆರೆನ್ನೆ 4 ರನ್, ಮಾರ್ಕೊ ಜಾನ್ಸೆನ್ 84 ರನ್, ಜೆರಾಲ್ಡ್ ಕೋಯಟ್ಜಿ 19 ರನ್ ಗಳಿಸಿದರು.
ಇನ್ನು ಆರಂಭಿಕ ಡೀನ್ ಎಲ್ಗರ್ 287 ಎಸೆತಗಳಲ್ಲಿ 28 ಬೌಂಡರಿ ಸಮೇತ 185 ರನ್ ಗಳಿಸಿ ಕೇವಲ 15 ರನ್‌ಗಳಿಂದ ದ್ವಿಶತಕ ವಂಚಿತರಾದರು.
ಭಾರತದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರೆ, ಉಳಿದಂತೆ ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications