
1. ಚಾಹಲ್ ತನ್ನ ಪಾಲಿನ ಸಂಪೂರ್ಣ ಓವರ್ ಬೌಲಿಂಗ್ ಮಾಡಬೇಕು
ಯುಜುವೇಂದ್ರ ಚಾಹಲ್ ಅವರಿಗೆ ತನ್ನ ಪಾಲಿನ ಸಂಪೂರ್ಣ ಓವರ್ ಬೌಲಿಂಗ್ ಮಾಡುವ ಅವಕಾಶವನ್ನು ನೀಡಬೇಕಾದ ಅಗತ್ಯವಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಯುಜುವೇಂದ್ರ ಚಾಹಲ್ ಕೇವಲ 2.1 ಓವರ್ ಬೌಲಿಂಗ್ ಮಾಡುವ ಅವಕಾಶ ಪಡೆದರು ಹಾಗೂ 26 ರನ್ ನೀಡಿದ್ದರು. ಉತ್ತಮ ಬೌಲಿಂಗ್ ಮಾಡಿ ಕಷ್ಟದ ಸಂದರ್ಭದಲ್ಲಿ ವಿಕೆಟ್ ಕಬಳಿಸುವಂಥ ಸಾಮರ್ಥ್ಯವಿರುವ ಯುಜುವೇಂದ್ರ ಚಾಹಲ್ ಅವರಿಗೆ 4 ಓವರ್ ಬೌಲಿಂಗ್ ಮಾಡುವ ಅವಕಾಶ ನೀಡಬೇಕಾಗಿದೆ. ಅದರಲ್ಲಿಯೂ ಯುಜುವೇಂದ್ರ ಚಾಹಲ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಹೊರಹೊಮ್ಮಿದ್ದು, ಈ ಬದಲಾವಣೆಯನ್ನು ತಂಡದಲ್ಲಿ ಮಾಡಿಕೊಳ್ಳಲೇಬೇಕಾಗಿದೆ.

2. ಅಕ್ಷರ್ ಪಟೇಲ್ ಬದಲು ರವಿ ಬಿಷ್ಣೋಯಿಗೆ ಅವಕಾಶ
ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ತನ್ನ ಪಾಲಿನ ಎಲ್ಲಾ 4 ಓವರ್ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್ 1 ವಿಕೆಟ್ ಪಡೆದು 40 ರನ್ ನೀಡಿ ದುಬಾರಿಯಾದರು. ಹೀಗೆ ಡಿಕಾಕ್ ವಿಕೆಟ್ ಪಡೆದದ್ದನ್ನು ಬಿಟ್ಟರೆ ಅಕ್ಷರ್ ಪಟೇಲ್ ಪಂದ್ಯದಲ್ಲಿ ಅಕ್ಷರಶಃ ಮಂಕಾದರು. ಪಟೇಲ್ ಎಸೆತಕ್ಕೆ ಮಿಲ್ಲರ್ ದೊಡ್ಡ ದೊಡ್ಡ ಹೊಡೆತಗಳನ್ನು ಸಲೀಸಾಗಿ ಬಾರಿಸಿದರು. ಅತ್ತ ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದ್ದ ರವಿ ಬಿಷ್ಣೋಯಿಗೆ ದುಬಾರಿಯಾಗಿರುವ ಅಕ್ಷರ್ ಪಟೇಲ್ ಬದಲು ಅವಕಾಶ ನೀಡುವುದು ಉತ್ತಮ ಆಯ್ಕೆಗಳಲ್ಲೊಂದು ಎನ್ನಬಹುದು. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿರುವ ರವಿ ಬಿಷ್ಣೋಯಿಗೆ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಅವಕಾಶ ನೀಡಿ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ.

3. ಉಮ್ರಾನ್ ಮಲಿಕ್‌ಗೆ ಅವಕಾಶ
ತನ್ನ ವೇಗದ ಎಸೆತಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಉಮ್ರಾನ್ ಮಲಿಕ್ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಅವಕಾಶ ನೀಡಬೇಕಾದ ಅಗತ್ಯವಿದೆ. ಪ್ರಥಮ ಪಂದ್ಯದಲ್ಲಿ ಅವೇಶ್ ಖಾನ್ ಹೊರತುಪಡಿಸಿ ಉಳಿದ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಎದುರಾಳಿಗಳ ಮೇಲೆ ನಿಯಂತ್ರಣ ಸಾಧಿಸುವಂಥ ಎಸೆತಗಳನ್ನು ಹಾಕಲಿಲ್ಲ, ಬದಲಾಗಿ ಹೆಚ್ಚು ಬೌಂಡರಿಗಳನ್ನು ಬಿಟ್ಟುಕೊಟ್ಟು ದುಬಾರಿಯಾದರು. ಹೀಗಾಗಿ ತಂಡಕ್ಕೆ ವೇಗದ ಎಸೆತಗಳನ್ನು ಹಾಕಿ ಎದುರಾಳಿಗಳ ಮೇಲೆ ಒತ್ತಡ ಹೇರಬಲ್ಲಂತಹ ಬೌಲರ್ ಅಗತ್ಯವಿದ್ದು, ಉಮ್ರಾನ್ ಮಲಿಕ್‌ಗೆ ಅವಕಾಶ ನೀಡುವತ್ತ ಟೀಮ್ ಇಂಡಿಯಾ ಯೋಚಿಸಬೇಕಿದೆ.


Click it and Unblock the Notifications
