
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ನಡೆಯುತ್ತಿದೆ. ಈ ನಿರ್ಣಾಯಕ ಪಂದ್ಯದ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ನಿರೀಕ್ಷಿತ ಬ್ಯಾಟಿಂಗ್ ನಡೆಸಲು ವಿಫಲವಾಗಿದೆ. ಇದರ ಪರಿಣಾಮ ಭಾರತ ಮೊದಲ ದಿನದಾಟದಲ್ಲಿ 223 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಭಾರತದ ಮೊದಲ ದಿನದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಮಾತನಾಡಿದ್ದಾರೆ. ಈ ಪಿಚ್‌ನಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 275 ರನ್‌ಗಳನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿದ್ದರೆ ಪಂದ್ಯದಲ್ಲಿ ಹಿಡಿತವನ್ನು ಸಾಧಿಸಬಹುದಾಗಿತ್ತು ಎಂದಿದ್ದಾರೆ.
"ನನ್ನ ಪ್ರಕಾರ ಈ ಪಿಚ್‌ನಲ್ಲಿ 275 ರನ್ ಉತ್ತಮ ಮೊತ್ತವೆನಿಸುತ್ತದೆ" ಎಂದು ಎರಡನೇ ದಿನದಾಟದ ಆರಂಭಕ್ಕೂ ಮುನ್ನ ಪೂಜಾರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಪೂಜಾರ 77 ಎಸೆತಗಳನ್ನು ಎದುರಿಸಿ 43 ರನ್‌ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ.
"ಇದು ಉತ್ತನವಾದ ಪಿಚ್ ಆಗಿದ್ದು ಬೌಲರ್‌ಗಳಿಗೆ ಹೆಚ್ಚು ಸಹಕಾರಿಯಾಗುತ್ತದೆ. ಆದರೆ ನೀವು ಕ್ರೀಸ್‌ನಲ್ಲಿ ಸೆಟ್ ಆಗಬೇಕಾದರೆ ಕೆಲ ಎಸೆತಗಳಿಗೆ ನೀವು ಗೌರವವನ್ನು ನೀಡಬೇಕಿದೆ. ಹಾಗಿದ್ದಾಗ ಮಾತ್ರವೇ ರನ್‌ಗಳಿಸಲು ಸಾಧ್ಯವಿದೆ" ಎಂದು ಚೇತೇಶ್ವರ್ ಪೂಜಾರ ಅಭಿಪ್ರಾಯಪಟ್ಟಿದ್ದಾರೆ. ಈ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ನಾಯಕ ವಿರಾಟ್ ಕೊಹ್ಲಿ ಜೊತೆಗೆ 153 ಎಸೆತಗಳಲ್ಲಿ 62 ರನ್‌ಗಳ ಜೊತೆಯಾಟವನ್ನು ನೀಡಿದ್ದಾರೆ. ನಾಯಕ ಕೊಹ್ಲಿ ಈ ಪಂದ್ಯದಲ್ಲಿ 201 ಎಸೆತಗಳನ್ನು ಎದುರಿಸಿ 79 ರನ್‌ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ.
"ಈ ರೀತಿಯ ಪಿಚ್‌ನಲ್ಲಿ ಬ್ಯಾಟರ್‌ಗಳು ಸೆಟ್ ಆಗಲು ಬೌಲರ್‌ಗಳು ಬಿಡುವುದಿಲ್ಲ. ಇಂತಾ ಸಂದರ್ಭದಲ್ಲಿ ನೀವು ಯಾವ ಎಸೆತಗಳನ್ನು ಎದುರಿಸಬೇಕು ಯಾವುದನ್ನು ಬಿಡಬೇಕು ಎಂಬುದನ್ನು ಅರ್ಥೈಸಿಕೊಂಡಿರಬೇಕು. ಒಂದು ಬಾರಿ ನೀವು ನೆಲೆಯೂರಿದಲ್ಲಿ ನಂತರ ಹೆಚ್ಚು ಕಠಿಣವೆನಿಸುವುದಿಲ್ಲ. ವಿರಾಟ್ ಕೊಹ್ಲಿ ನಿನ್ನೆ ಅದನ್ನು ಮಾಡಿದ ರೀತಿಯಲ್ಲಿ ನನ್ನಿಂದ ಸಾಧ್ಯವಾಗಲಿಲ್ಲ" ಎಂದು ಚೇತೇಶ್ವರ್ ಪೂಜಾರ ಹೇಳಿಕೆ ನೀಡಿದ್ದಾರೆ.
"ನಾವು ಇನ್ನು ಕೂಡ 30-40 ರಷ್ಟು ಹೆಚ್ಚು ರನ್ ಗಳಿಸಬೇಕಿತ್ತು. ಆದರೆ ನಾವು ನಮ್ಮ ಬೌಲಿಂಗ್ ಬಗ್ಗೆ ಹೆಚ್ಚು ವಿಶ್ವಾಸವನ್ನು ಹೊಂದಿದ್ದೇವೆ. ನಾವು ವಿಶ್ವದ ಅತ್ಯುತ್ತಮ ವೇಗದ ಬೌಲಿಂಗ್ ಲೈನ್‌ಅಪ್‌ಅನ್ನು ಹೊಂದಿದ್ದೇವೆ. ಹೀಗಾಗಿ ನಾವು ಸೂಕ್ತವಾದ ಸ್ಥಳದಲ್ಲಿ ಬೌಲಿಂಗ್ ದಾಳಿ ನಡೆಸಿದರೆ ಹೆಚ್ಚಿನ ಯಶಸ್ಸು ಗಳಿಸಲುದ್ದೇವೆ ಎಂಬ ವಿಶ್ವಾಸವಿದೆ. ಮೂರನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಲು ಉತ್ತಮ ವಾತಾವರಣ ದೊರೆಯಲಿದೆ. ಇವತ್ತು ನಾವು ಉತ್ತಮ ಬೌಲಿಂಗ್ ನಡೆಸಿ ಎದುರಾಳಿಯನ್ನು ಶೀಘ್ರವಾಗಿ ಆಲೌಟ್ ಮಾಡಿದರೆ ಮೂರನೇ ಇನ್ನಿಂಗ್ಸ್‌ನಲ್ಲಿ ಸಾಧ್ಯವಾದಷ್ಟು ಹೆಚ್ಚಿನ ರನ್‌ಗಳಿಸುವತ್ತ ಚಿತ್ತ ಹರಿಸಲಿದ್ದೇವೆ. " ಎಂದು ಚೇತೇಶ್ವರ್ ಪೂಜಾರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ಆಡುವ ಬಳಗ: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಡುವಾನ್ನೆ ಒಲಿವಿಯರ್, ಲುಂಗಿ ಎನ್ಗಿಡಿ
ಬೆಂಚ್: ಪ್ರೆನೆಲನ್ ಸುಬ್ರಾಯೆನ್, ಬ್ಯೂರಾನ್ ಹೆಂಡ್ರಿಕ್ಸ್, ಸಿಸಂದಾ ಮಗಾಲಾ, ಜಾರ್ಜ್ ಲಿಂಡೆ, ವಿಯಾನ್ ಮುಲ್ಡರ್, ಸರೆಲ್ ಎರ್ವೀ, ರಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್
ಭಾರತ ಆಡುವ ಬಳಗ: ಆಡುತ್ತಿರುವವರು: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್
ಬೆಂಚ್ ಜಯಂತ್ ಯಾದವ್, ಪ್ರಿಯಾಂಕ್ ಪಾಂಚಾಲ್, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಮೊಹಮ್ಮದ್ ಸಿರಾಜ್, ವೃದ್ಧಿಮಾನ್ ಸಹಾ, ಇಶಾಂತ್ ಶರ್ಮಾ