ಮೂರು ಟಿ20 ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರುವ ಭಾರತದ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ವಿರಾಟ್ ಕೊಹ್ಲಿ ಆಟವನ್ನು ವೀಕ್ಷಿಸುವ ನಿರೀಕ್ಷೆಯನ್ನು ಅವರ ಆಪ್ತ ಗೆಳೆಯ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ನಾಯಕನೂ ಆಗಿರುವ ಎಬಿ ಡಿವಿಲಿಯರ್ಸ್ ವ್ಯಕ್ತಪಡಿಸಿದ್ದಾರೆ.
ಒಂದು ತಿಂಗಳ ಅವಧಿಯ ಪ್ರವಾಸವು ಡಿಸೆಂಬರ್ 10ರಿಂದ ಪ್ರಾರಂಭವಾಗಲಿದೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆರಂಭಿಕ ವೈಟ್-ಬಾಲ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ.
ಡಿಸೆಂಬರ್ 10ರಂದು ಪ್ರಾರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ನಂತರ ಕ್ರಮವಾಗಿ ಡಿಸೆಂಬರ್ 12 ಮತ್ತು ಡಿಸೆಂಬರ್ 14ರಂದು ಗ್ಕೆಬರ್ಹಾ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ಎರಡು ಮತ್ತು ಮೂರನೇ ಪಂದ್ಯಗಳು ನಡೆಯಲಿವೆ.

ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ತಂಡವು ಡಿಸೆಂಬರ್ 17ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಪ್ರಾರಂಭವಾಗುವ ಏಕದಿನ ಸರಣಿಯಲ್ಲಿ ಆಡಲಿದೆ. ನಂತರದ ಪಂದ್ಯಗಳು ಡಿಸೆಂಬರ್ 19ರಂದು ಗ್ಕೆಬರ್ಹಾದಲ್ಲಿ ಮತ್ತು ಡಿಸೆಂಬರ್ 21ರಂದು ಪಾರ್ಲ್‌ನಲ್ಲಿ ನಡೆಯಲಿವೆ.
ಈ ಪ್ರವಾಸವು ಬಹು ನಿರೀಕ್ಷಿತ ಗಾಂಧಿ-ಮಂಡೇಲಾ ಟ್ರೋಫಿ ಟೆಸ್ಟ್ ಸರಣಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಇದರಲ್ಲಿ ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಟೆಸ್ಟ್ ಸರಣಿಗೆ ಮರಳುತ್ತಾರೆ.
ಮೊದಲ ಟೆಸ್ಟ್ ಪಂದ್ಯವು ಡಿಸೆಂಬರ್ 26ರಿಂದ ಡಿಸೆಂಬರ್ 30ರವರೆಗೆ ಸೆಂಚುರಿಯನ್‌ನಲ್ಲಿ ನಿಗದಿಯಾಗಿದೆ. ನಂತರ ಎರಡನೇ ಟೆಸ್ಟ್ ಜನವರಿ 3ರಿಂದ ಜನವರಿ 7ರವರೆಗೆ ಕೇಪ್ ಟೌನ್‌ನಲ್ಲಿ ನಡೆಯಲಿದೆ.
ಬಹು ಮಾದರಿಯ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ಲೆಜೆಂಡ್ ಎಬಿ ಡಿವಿಲಿಯರ್ಸ್ ಮಾತನಾಡಿ, ವಿರಾಟ್ ಕೊಹ್ಲಿಯ ಅಸಾಧಾರಣ ಪ್ರದರ್ಶನಕ್ಕಾಗಿ ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿದರು ಮತ್ತು ಅವರಿಮದ ಉತ್ಸಾಹಭರಿತ ಪ್ರದರ್ಶನವನ್ನು ನಿರೀಕ್ಷಿಸಿದರು.

"ನಾವು ವಿರಾಟ್ ಕೊಹ್ಲಿಯ ಅತ್ಯುತ್ತಮ ಪ್ರದರ್ಶನವನ್ನು ನೋಡುತ್ತೇವೆ. ಅವರು ಎದೆಯುಬ್ಬಿಸಿ ಆಡುವುದನ್ನು ನೋಡಲು ಕಾಯಲು ಸಾಧ್ಯವಿಲ್ಲ, ಎದುರಾಳಿ ತಂಡದೊಂದಿಗೆ ಕಣ್ಣಿನ ಸಂಪರ್ಕ ಸಾಧಿಸುತ್ತಾರೆ ಮತ್ತು ಎಲ್ಲರೊಂದಿಗೆ ಸ್ವಲ್ಪ ಮಾತನಾಡುತ್ತಾರೆ," ಎಂದರು.
"ಏಕೆಂದರೆ ವಿರಾಟ್ ಕೊಹ್ಲಿ ಈ ಸರಣಿಗೆ ಬೆಂಕಿ ಹಚ್ಚಲಿದ್ದಾರೆ. ಆತಿಥೇಯ ದಕ್ಷಿಣ ಆಫ್ರಿಕಾ ಜಾಗರೂಕರಾಗಿರಬೇಕು. ಈ ಭಾರತೀಯ ತಂಡವು ಶುದ್ಧ ವಿಶ್ವ ದರ್ಜೆಯದ್ದಾಗಿದೆ," ಎಂದು ಆರ್‌ಸಿಬಿ ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಲ್ಲದೆ ಪಂದ್ಯಾವಳಿಯ ಅಗ್ರ ರನ್ ಸ್ಕೋರರ್ ಮತ್ತು ಅತ್ಯುತ್ತಮ ಬ್ಯಾಟರ್ ಆಗಿ ಹೊರಹೊಮ್ಮಿದರು.
ಫೈನಲ್ ಸೇರಿದ ಆಡಿದ 11 ಇನ್ನಿಂಗ್ಸ್‌ಗಳಲ್ಲಿ 95.62ರ ಸರಾಸರಿಯಲ್ಲಿ ಅದ್ಭುತ 765 ರನ್ ಗಳಿಸಿದರು. ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲೂ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದರು.
ಆದಾಗ್ಯೂ, ಫೈನಲ್ ಗೆಲ್ಲಲು ಇದು ಸಾಕಾಗಲಿಲ್ಲ. ಏಕೆಂದರೆ ಆಸ್ಟ್ರೇಲಿಯಾ ತಂಡವು ಭಾರತ ನೀಡಿದ ಸುಲಭ ಗುರಿಯನ್ನು ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಬೆನ್ನಟ್ಟಿತು. ಈ ಪಂದ್ಯದಲ್ಲಿ ಗೆಲುವಿನೊಂದಿಗೆ ತಮ್ಮ ಆರನೇ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದರು.