ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಈ ಟೆಸ್ಟ್‌ನಲ್ಲಿ ಹಲವು ಸ್ಟಾರ್ ಆಟಗಾರರು ತಂಡಕ್ಕೆ ಸೇರಿದ್ದಾರೆ. ಏಕದಿನ ವಿಶ್ವಕಪ್ ಬಳಿಕ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ವೇಗಿ ಜಸ್ಪ್ರಿತ್ ಬುಮ್ರಾ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ನಿಜಕ್ಕೂ ಟೀಮ್ ಇಂಡಿಯಾ ಆಟಗಾರರು ಬೌನ್ಸ್ ಹಾಗೂ ವೇಗದ ಪಿಚ್‌ಗಳಲ್ಲಿ ಆಡಲು ಪರದಾಟ ನಡೆಸಿದರು. ದಕ್ಷಿಣ ಆಫ್ರಿಕಾದ ವೇಗಿಗಳು ಕರಾರುವಕ್ ದಾಳಿ ಸಂಘಟಿಸಿ ಮಿಂಚಿದರು.

ದಕ್ಷಿಣ ಆಫ್ರಿಕಾದಲ್ಲಿನ ಪಿಚ್‌ಗಳು ವೇಗಿಗಳಿಗೆ ಸಹಾಯ ನೀಡುತ್ತವೆ. ಕೊಂಚ ಸಮಯವನ್ನು ಈ ಪಿಚ್‌ಗಳ ಮೇಲೆ ಕಳೆದರೆ, ನಿಶ್ಚಿತವಾಗಿ ಬಿಗ್ ಸ್ಕೋರ್ ಗಳಿಸಬಹುದು ಎಂಬ ಹಿರಿಯರ ಕಿವಿ ಮಾತನ್ನು ಸಹ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್‌ಗಳು ನಿರ್ಲಕ್ಷಿಸಿದರು.
ಟೀಮ್ ಇಂಡಿಯಾ ನಾಯಕನನ್ನು ಕಟ್ಟಿ ಹಾಕಲು ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಪ್ಲ್ಯಾನ್ ಮಾಡಿಕೊಂಡೆ ಬಂದಿದ್ದರು. ಅದರಂತೆ ಕಗಿಸೊ ಸತತ ಶಾರ್ಟ್ ಪಿಚ್ ಎಸೆತಗಳನ್ನು ಎಸೆದು ಪ್ರಶ್ನೆಗಳನ್ನು ಕೆಳೆದರು. ಆದರೆ, ಎದೆಯ ಎತ್ತರಕ್ಕೆ ಬಂದ ಎಸೆತವನ್ನು ರೋಹಿತ್ ತಪ್ಪಾಗಿ ಅರ್ಥಿಸಿಕೊಂಡು ಪುಲ್ ಶಾಟ್ ಬಾರಿಸಿ ಔಟ್ ಆದರು.

ಟೀಮ್ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ 30ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿ ಸೆಟಲ್ ಆದಂತೆ ಕಂಡು ಬಂದರು. ಆದರೆ, ಆಫ್ ಸ್ಟಂಪ್ ಆಚೆಯ ಚೆಂಡು ಇವರಿಗೆ ಕಿರಿ ಕಿರಿ ಮಾಡುತ್ತಿತ್ತು. ನಾಂದ್ರೆ ಬರ್ಗರ್ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಚೆಂಡನ್ನು ಆಫ್ ಸ್ಟಂಪ್ ಆಚೆಗೆ ಎಸೆಯುತ್ತಲೆ ಇದ್ದರು. ಅಲ್ಲದೆ ಯಶಸ್ವಿ ಜೈಸ್ವಾಲ್ ಅವರಿಗೆ ಡ್ರೈ ಮಾಡಲು ಪ್ರೇರಿಪಿಸುತ್ತಲೇ ಇದ್ದರು. ಬರ್ಗರ್ ಎಸೆದ ಆಫ್ ಸ್ಟಂಪ್ ಆಚೆಯ ಎಸೆತಕ್ಕೆ ಉತ್ತರಿಸಲು ಹೋದ ಯಶಸ್ವಿ ಬ್ಯಾಟ್ ತಾಗಿದ ಚೆಂಡು ವಿಕೆಟ್ ಕೀಪರ್ ಕೈ ಸೇರಿತು. ಟೀಮ್ ಇಂಡಿಯಾದ ಎರಡನೇ ವಿಕೆಟ್ ಬಿದ್ದಿತು.
ಟೀಮ್ ಇಂಡಿಯಾದ ಭರವಸೆಯ ಆಟಗಾರ ಶುಭಮನ್ ಗಿಲ್, ಮೊದಲ ಟೆಸ್ಟ್‌ನಲ್ಲಿ ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಿದರು. ಬರ್ಗರ್ 142 ಕಿಲೋ ಮೀಟರ್ ವೇಗದಲ್ಲಿ ಲೆಗ್ ಸೈಡ್‌ನಲ್ಲಿ ಚೆಂಡನ್ನು ಎಸೆದರು. ಇದನ್ನು ಕೆಣಕಲು ಹೋಗಿ ವಿಕೆಟ್ ಒಪ್ಪಿಸಿದರು.

ಹೌದು.. ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರ ಚೇತೇಶ್ವರ್ ಪೂಜಾರ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಕೈ ಬಿಡಲಾಗಿತ್ತು. ಚೇತೇಶ್ವರ್ ಪೂಜಾರ ಬೌನ್ಸ್ ಪಿಚ್‌ಗಳಲ್ಲಿ ಉತ್ತಮ ದಾಖಲೆಯನ್ನು ಹೊಂದಿರುವ ಬ್ಯಾಟರ್. ಇವರ ಬ್ಯಾಟ್ ವಿದೇಶಗಳಲ್ಲಿಯೇ ಹೆಚ್ಚು ಆರ್ಭಟಿಸುತ್ತದೆ. ಆದರೆ ಆಯ್ಕೆ ಸಮಿತಿ ಇವರನ್ನು ಕೈ ಬಿಟ್ಟು ಯುವಕರಿಗೆ ಮಣೆ ಹಾಕಿತು.
ಟೀಮ್ ಇಂಡಿಯಾಕ್ಕೆ ಮೊದಲ ಟೆಸ್ಟ್‌ನಲ್ಲಿ ನಿಂತು ಆಡುವ ಆಟಗಾರನ ಅವಶ್ಯಕತೆ ಇದ್ದು, ಚೇತೇಶ್ವರ್ ಪೂಜಾರ ನೆನಪು ಟೀಮ್ ಇಂಡಿಯಾಕ್ಕೆ ಆಗದೆ ಇರದು.