ಭಾರತ ತಂಡವು 2024 ರಲ್ಲಿ ಹೊಸ ಆರಂಭವನ್ನು ಶುಭಾರಂಭ ಮಾಡುವ ಕನಸಿನಲ್ಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಟೆಸ್ಟ್‌ಗಳ ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯ ಜನವರಿ 3 ರಿಂದ ಕೇಪ್‌ಟೌನ್‌ನಲ್ಲಿ ನಡೆಯಲಿದೆ.
ಈ ಪಂದ್ಯದಲ್ಲಿ ಮತ್ತೊಮ್ಮೆ ಎಲ್ಲರ ಚಿತ್ತ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೇಲೆ ನೆಟ್ಟಿದೆ. ವಿರಾಟ್ ಕೊಹ್ಲಿ ಅವರ ಬ್ಯಾಟ್ ಅಬ್ಬರಿಸಿದರೆ ಟೀಮ್ ಇಂಡಿಯಾ ಗೆಲ್ಲುವುದು ಮಾತ್ರವಲ್ಲ, ಪಾಕಿಸ್ತಾನದ ಇಬ್ಬರು ದಿಗ್ಗಜರ ದಾಖಲೆಗಳನ್ನು ಏಕಕಾಲದಲ್ಲಿ ಮುರಿಯುವ ಸನಿಹದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಅವರ ಟೆಸ್ಟ್ ಅಂಕಿಅಂಶಗಳ ನೋಡಿದರೆ, ಅವರು ಇದುವರೆಗೆ 112 ಪಂದ್ಯಗಳಲ್ಲಿ 8790 ರನ್ ಗಳಿಸಿದ್ದಾರೆ. ಅವರ ಟೆಸ್ಟ್ ಸರಾಸರಿ 49.38 ಮತ್ತು ಸ್ಟ್ರೈಕ್ ರೇಟ್ 55.44 ಆಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವ ವಿಷಯದಲ್ಲಿ ವಿರಾಟ್ ಕೊಹ್ಲಿ ಇನ್ನೂ ಹಿಂದಿದ್ದಾರೆ. ಆದರೆ ಇಂಜಮಾಮ್ ಉಲ್ ಹಕ್ ಮತ್ತು ಜಾವೇದ್ ಮಿಯಾಂದಾದ್ ಅವರ ದಾಖಲೆಗಳನ್ನು ಅಳಿಸಿ ಹಾಕುವ ವಿಶ್ವಾಸವನ್ನು ಹೊಂದಿದ್ದಾರೆ.

ಇಂಜಮಾಮ್ ಉಲ್ ಹಕ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 120 ಪಂದ್ಯಗಳಲ್ಲಿ 8830 ರನ್ ಗಳಿಸಿದ್ದರು. ಆದರೆ ಜಾವೇದ್ ಮಿಯಾಂದಾದ್ 124 ಟೆಸ್ಟ್‌ಗಳಲ್ಲಿ 8832 ರನ್ ಗಳಿಸಿದ್ದಾರೆ. ಇಂಜಮಾಮ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಇನ್ನೂ 41 ರನ್ ಗಳ ಅವಶ್ಯಕತೆಯಿದ್ದರೆ, ಜಾವೇದ್ ಮಿಯಾಂದಾದ್ ಅವರನ್ನು ಮೀರಿಸಲು 43 ರನ್ ಗಳ ಅಗತ್ಯವಿದೆ.
ವಿರಾಟ್ ಕೊಹ್ಲಿಗೆ ಈ ಗುರಿ ತುಂಬಾ ದೊಡ್ಡದಲ್ಲ. ಇದನ್ನು ಒಂದೇ ಇನ್ನಿಂಗ್ಸ್‌ನಲ್ಲಿ ಮುಟ್ಟುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇಲ್ಲದಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಇದು ಖಂಡಿತವಾಗಿಯೂ ನೆರವೇರುವ ಸಾಧ್ಯತೆ ಇದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ, ಆದರೆ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿ ಗಮನ ಸೆಳೆದರು.
ಸೆಂಚುರಿಯನ್‌ನಲ್ಲಿ ನಡೆದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 64 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 38 ರನ್ ಗಳಿಸಿದ್ದರು. ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬಂದಾಗ, ಅವರು 82 ಎಸೆತಗಳಲ್ಲಿ 76 ರನ್ ಗಳಿಸಿದರು. ಇದರಲ್ಲಿ 12 ಬೌಂಡರಿ ಹಾಗೂ ಒಂದು ಅದ್ಭುತ ಸಿಕ್ಸರ್ ಕೂಡ ಸೇರಿತ್ತು. ಆದರೆ, ಇದಾದ ಬಳಿಕವೂ ಭಾರತ ತಂಡ ಇನಿಂಗ್ಸ್ ಹಾಗೂ 32 ರನ್‌ಗಳಿಂದ ಸೋಲನುಭವಿಸಬೇಕಾಯಿತು.
ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಈ ಬಾರಿ ಟೀಮ್ ಇಂಡಿಯಾ ನ್ಯೂಲೆಂಡ್‌ನಲ್ಲಿ ಗೆಲುವಿನ ಕುದುರೆಯನ್ನು ಕಟ್ಟಿ ಹಾಕುವ ವಿಶ್ವಾಸವನ್ನು ಹೊಂದಿದೆ. ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಸೋತಿದ್ದು, ಕೇವಲ ಎರಡು ಪಂದ್ಯಗಳ ಸರಣಿಯಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲುವ ಕನಸು ಮತ್ತೊಮ್ಮೆ ನನಸಾಗದೇ ಉಳಿಯಲಿದೆ.
ಕೇಪ್ ಟೌನ್ ಅಂಕಿಅಂಶಗಳನ್ನು ನೋಡಿದರೆ, ಇಲ್ಲಿಯವರೆಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ 6 ಪಂದ್ಯಗಳು ನಡೆದಿವೆ. ಅದರಲ್ಲಿ ದಕ್ಷಿಣ ಆಫ್ರಿಕಾ 4 ರಲ್ಲಿ ಗೆದ್ದಿದ್ದರೆ, ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಕೇಪ್ ಟೌನ್ ಟೆಸ್ಟ್ ನಲ್ಲಿ ಭಾರತ ತಂಡ ಗೆಲುವು ಸಾಧಿಸುವುದು ಸುಲಭವಲ್ಲ ಎಂಬುದು ಈ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ. ರೋಹಿತ್ ಶರ್ಮಾ ತಂಡ ಕೇಪ್‌ಟೌನ್‌ನಲ್ಲಿ ಮೈದಾನಕ್ಕಿಳಿದಾಗ ಯಾವ ತಂತ್ರಗಾರಿಕೆಯಿಂದ ಅಖಾಡಕ್ಕೆ ಇಳಿಯುತ್ತದೆ. ಮತ್ತು ಪಂದ್ಯದ ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.