IND vs SA: ಮತ್ತದೇ ತಪ್ಪಿಗೆ ವಿಕೆಟ್ ನೀಡಿದ ಕಿಂಗ್ ಕೊಹ್ಲಿ; ವಿರಾಟ್‌ನ ಈ ದೌರ್ಬಲ್ಯವೇ ಎದುರಾಳಿ ಬೌಲರ್‌ಗಳಿಗೆ ಅಸ್ತ್ರ!
ಮಂಗಳವಾರ, ಡಿಸೆಂಬರ್ 26ರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಆರಂಭವಾಗಿರುವ ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ತಮ್ಮ ಉತ್ತಮ ಆರಂಭವನ್ನು ದೊಡ್ಡ ಸ್ಕೋರ್‌ಗೆ ಪರಿವರ್ತಿಸಲು ವಿಫಲರಾದರು.
ತಮ್ಮ ಹಳೆಯ ತಪ್ಪುಗಳಿಂದ ಪಾಠ ಕಲಿಯದ ಭಾರತದ ಸ್ಟಾರ್ ಬ್ಯಾಟರ್ ಮತ್ತೊಮ್ಮೆ ಆಫ್ ಸ್ಟಂಪ್ ಹೊರಗೆ ಚೆಂಡನ್ನು ಕೆಣಕಿ ಎಡ್ಜ್ ಮಾಡುವ ಮೂಲಕ ವಿಕೆಟ್ ಒಪ್ಪಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಕಗಿಸೊ ರಬಾಡ ಎಸೆದ 31ನೇ ಓವರ್‌ನ ಅಂತಿಮ ಎಸೆತದಲ್ಲಿ ರಕ್ಷಣಾತ್ಮಕ ಶಾಟ್ ಆಯ್ಕೆ ಮಾಡಲು ಅರ್ಧಂಬರ್ಧ ಮನಸ್ಸಿನಿಂದ ಪ್ರಯತ್ನಿಸಿ ಕ್ಯಾಚ್ ನೀಡಿದರು.
ಚೆಂಡು ವಿರಾಟ್ ಕೊಹ್ಲಿಯಿಂದ ಸ್ವಲ್ಪ ದೂರ ಹೋಯಿತು ಮತ್ತು ಆಗ ಅವರ ಬ್ಯಾಟ್‌ನ ಹೊರ ಅಂಚನ್ನು ಸವರಿಕೊಂಡು ನೇರವಾಗಿ ವಿಕೆಟ್‌ಕೀಪರ್ ಕೈಲ್ ವೆರ್ರೆನ್ ಕೈ ಸೇರಿತು. ಅಂತಿಮವಾಗಿ ವಿರಾಟ್ ಕೊಹ್ಲಿ 63 ಎಸೆತಗಳಲ್ಲಿ 38 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಕಗಿಸೊ ರಬಾಡ ಮತ್ತು ಕೈಲ್ ವೆರ್ರೆನ್ ಕ್ಯಾಚ್ ಔಟ್‌ಗಾಗಿ ಮನವಿ ಮಾಡಿದರು ಮತ್ತು ಅಂಪೈರ್ ತಮ್ಮ ತೋರು ಬೆರಳು ಮೇಲೆತ್ತಲು ಯಾವುದೇ ಹಿಂಜರಿಕೆ ಮಾಡಲಿಲ್ಲ. ಕಳೆದ ಕೆಲವು ವರ್ಷಗಳಿಂದ ಇದೇ ರೀತಿ ಹಲವು ಬಾರಿ ಔಟ್ ಆಗಿದ್ದಾರೆ. ವಿರಾಟ್ ಕೊಹ್ಲಿಯ ಈ ದೌರ್ಬಲ್ಯವೇ ಎದುರಾಳಿ ತಂಡಗಳ ಬೌಲರ್‌ಗಳಿಗೆ ಅಸ್ತ್ರವಾಗಿದೆ.
38 ರನ್ ಗಳಿಸಿ ಔಟಾದಾಗ ವಿರಾಟ್ ಕೊಹ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸಿದ್ದರು. ಆದಾಗ್ಯೂ, ಭಾರತದ ಸ್ಟಾರ್ ಬ್ಯಾಟರ್ ತನ್ನ ಉತ್ತಮ ಫಾರ್ಮ್ ಅನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಮತ್ತು ಇನಿಂಗ್ಸ್‌ನ 31ನೇ ಓವರ್‌ನಲ್ಲೇ ತನ್ನ ವಿಕೆಟ್ ಕಳೆದುಕೊಂಡರು.
ವಿರಾಟ್ ಕೊಹ್ಲಿ ವಿಕೆಟ್ ನಂತರ ಭಾರತ ಸಂಕಷ್ಟದಲ್ಲಿ; ಕೆಎಲ್ ರಾಹುಲ್ ಆಸರೆ
ವಿರಾಟ್ ಕೊಹ್ಲಿ ಔಟಾದ ನಂತರ ಭಾರತ 107 ರನ್‌ಗಳಾಗುವಷ್ಟರಲ್ಲಿ ಅಗ್ರ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ (31) 68 ರನ್ ಜೊತೆಯಾಟವನ್ನು ನೀಡಿದರು. ಆದರೆ ಕಗಿಸೊ ರಬಾಡ ಪ್ರವಾಸಿ ತಂಡವನ್ನು 107-5ಕ್ಕೆ ತಗ್ಗಿಸಲು ಇಬ್ಬರನ್ನೂ ಔಟ್ ಮಾಡಿದರು.
ಇನ್ನು ಯಶಸ್ವಿ ಜೈಸ್ವಾಲ್ (17) ಮತ್ತು ಶುಭ್ಮನ್ ಗಿಲ್ (2) ಈ ಇಬ್ಬರ ಎರಡು ವಿಕೆಟ್ ಕಬಳಿಸುವ ಮೂಲಕ ನಾಂದ್ರೆ ಬರ್ಗರ್ ಉತ್ತಮ ಸಾಥ್ ನೀಡಿದರು.
ಭಾರತದ ಮೊದಲ ಇನ್ನಿಂಗ್ಸ್‌ನ ಮೊದಲ ದಿನದ ಮೂರನೇ ಸೆಷನ್‌ನ ಕೊನೆಯಲ್ಲಿ ಮಳೆ ಬಂದು ಆಟ ನಿಂತಿತು. ಮೊದಲ ದಿನದಂತ್ಯಕ್ಕೆ ಭಾರತ ತಂಡ 208 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದೆ. ಕೆಎಲ್ ರಾಹುಲ್ ಅಜೇಯ 70 ರನ್ ಮತ್ತು ಮೊಹಮ್ಮದ್ ಸಿರಾಜ್ ರನ್ ಖಾತೆ ತೆರೆಯದೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಕಗಿಸೊ ರಬಾಡ 17 ಓವರ್‌ಗಳಲ್ಲಿ 44 ರನ್ ನೀಡಿ 5 ವಿಕೆಟ್ ಕಬಳಿಸಿದ್ದರೆ, ನಾಂದ್ರೆ ಬರ್ಗರ್ 15 ಓವರ್‌ಗಳಲ್ಲಿ 50 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮಾರ್ಕೊ ಜಾನ್ಸನ್ ಒಂದು ವಿಕೆಟ್ ಪಡೆದಿದ್ದಾರೆ.
ಎರಡನೇ ದಿನದ ಆರಂಭದಲ್ಲಿ ಭಾರತದ 9ನೇ ವಿಕೆಟ್ ಜೊತೆಯಾಟವನ್ನು ಮುರಿಯಲು ದಕ್ಷಿಣ ಆಫ್ರಿಕಾ ಎದುರು ನೋಡುತ್ತಿದೆ ಮತ್ತು ಶೀಘ್ರದಲ್ಲೇ ಭಾರತದ ಇನ್ನಿಂಗ್ಸ್‌ಗೆ ಅಂತ್ಯ ಹಾಡಲಿದೆ. ಇದೇ ವೇಳೆ ಪ್ರವಾಸಿ ತಂಡ ಕೆಎಲ್ ರಾಹುಲ್ ನೆರವಿನಿಂದ ಚೇತರಿಸಿಕೊಂಡು ಗೌರವಾನ್ವಿತ ಮೊತ್ತವನ್ನು ಹಾಕಲು ಪ್ರಯತ್ನಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications