ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕು ಪಂದ್ಯಗಳ ಟಿ20 ಸರಣಿಯು ನವೆಂಬರ್ 8 ರಿಂದ ಪ್ರಾರಂಭವಾಗಲಿದೆ. ಈ ಟಿ20 ಸರಣಿಯಿಂದ ಟೀಮ್ ಇಂಡಿಯಾ ಮೂವರು ಹೊಸ ಮ್ಯಾಚ್ ವಿನ್ನರ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಆದರೆ, ಅವರು ಇನ್ನೂ ಭಾರತದ ಪರ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ.
ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಭಾರತದ ಮೂವರು ಮ್ಯಾಚ್ ವಿನ್ನರ್‌ಗಳು ಪಾದಾರ್ಪಣೆ ಮಾಡುವ ಮೂಲಕ ಸಂಚಲನ ಮೂಡಿಸಬಹುದು. ಅಲ್ಲದೆ, ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದ ಭಾರತ ಟಿ20 ತಂಡಕ್ಕೆ ಈ ಮೂವರು ಅಟಗಾರರು ನೆರವಾಗಬಹುದು. ಮಾಜಿ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಕೂಡ ಈ ಮೂವರು ಆಟಗಾರರಿಗೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಪಾದಾರ್ಪಣೆ ಮಾಡುವ ಅವಕಾಶ ಸಿಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೇಗದ ಬೌಲರ್‌ಗಳಾದ ಯಶ್ ದಯಾಳ್, ವಿಜಯ್‌ಕುಮಾರ್ ವೈಶಾಖ್ ಮತ್ತು ಸ್ಟಾರ್ ಯುವ ಆಲ್‌ರೌಂಡರ್ ರಮಣದೀಪ್ ಸಿಂಗ್ ದೇಶೀಯ ಕ್ರಿಕೆಟ್‌ನಲ್ಲಿನ ಅತ್ಯುತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಇದರ ಆಧಾರದ ಮೇಲೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಟಿ20 ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಅವಕಾಶವನ್ನು ನೀಡಬೇಕು ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ಐಪಿಎಲ್ 2023ರ ಸಮಯದಲ್ಲಿ ರಿಂಕು ಸಿಂಗ್ ಅವರಿಂದ ಸತತ ಐದು ಸಿಕ್ಸರ್‌ಗಳನ್ನು ಹೊಡೆಸಿಕೊಂಡ ವೇಗದ ಬೌಲರ್ ಯಶ್ ದಯಾಲ್ ಅದ್ಭುತ ಪುನರಾಗಮನಕ್ಕಾಗಿ ಕುಂಬ್ಳೆ ಶ್ಲಾಘಿಸಿದ್ದಾರೆ. ಯಶ್ ದಯಾಳ್ ಅವರ ಮೇಲೆ ರಿಂಕು ಸಿಂಗ್ ಸತತ 5 ಸಿಕ್ಸರ್ ಬಾರಿಸಿದ್ದರು. ಅವರು ಎಂತಹ ಅದ್ಭುತ ಪುನರಾಗಮನವನ್ನು ಮಾಡಿದರು. ಇದು ಅವರ ಉತ್ಸಾಹವನ್ನು ತೋರಿಸುತ್ತದೆ. ಅವರು ಅತ್ಯುತ್ತಮ ಎಡಗೈ ವೇಗದ ಬೌಲರ್ ಆಗಿದ್ದಾರೆ ಎಂದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 2025ರ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜಿಗೆ ವಿಜಯ್ ಕುಮಾರ್ ಅವರನ್ನು ಉಳಿಸಿಕೊಳ್ಳದಿರುವ ಬಗ್ಗೆ ಕುಂಬ್ಳೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ವಿಜಯಕುಮಾರ್ ನಿಜವಾಗಿಯೂ ಉತ್ತಮ ವೇಗದ ಬೌಲರ್. ಆರ್‌ಸಿಬಿ ಅವರನ್ನು ಉಳಿಸಿಕೊಳ್ಳದಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.
ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ಅವಕಾಶ ಸಿಗುತ್ತದೆ ಅಂದುಕೊಳ್ಳುತ್ತೇನೆ. ಅವರು ಡೆತ್ ಓವರ್‌ಗಳಿಗೆ ಎಲ್ಲಾ ರೀತಿಯ ವ್ಯತ್ಯಾಸಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ರಮಣದೀಪ್ ಉತ್ತಮ ಆಕ್ರಮಣಕಾರಿ ಬ್ಯಾಟರ್ ಮತ್ತು ಅತ್ಯುತ್ತಮ ಫೀಲ್ಡರ್. ಅವರನ್ನು ಬೌಲರ್ ಆಗಿಯೂ ಬಳಸಿಕೊಳ್ಳಬಹುದು ಎಂದು ಕುಂಬ್ಳೆ ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಶುಕ್ರವಾರದಿಂದ ಡರ್ಬನ್‌ನಲ್ಲಿ ಪ್ರಾರಂಭವಾಗುವ ನಾಲ್ಕು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಮಾಜಿ ದಿಗ್ಗಜ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಈ ತಂಡದ ಕೋಚ್ ಆಗಿದ್ದಾರೆ.