
ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದು ಮೂರನೇ ಪಂದ್ಯದಲ್ಲಿ ಮತ್ತೆ ಲಯಕ್ಕೆ ಮರಳಿದ್ದಾರೆ. ವೈಜಾಗ್‌ನಲ್ಲಿ ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುಜುವೇಂದ್ರ ಚಾಹಲ್ 3 ವಿಕೆಟ್ ಪಡೆದು ಮಿಂಚಿದರು. ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರರಾದ ಡ್ವೇಯ್ನ್ ಪ್ರಿಟೋರಿಯಸ್, ರಾಸ್ಸಿ ವಾನ್‌ಡರ್ ಡುಸ್ಸೆನ್ ಹಾಗೂ ಅಪಾಯಕಾರಿ ಹೆನ್ರಿಕ್ ಕ್ಲಾಸೆನ್ ಅವರನ್ನು ಔಟ್ ಮಾಡಿವ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ ನೀಡಿದರು ಚಾಹಲ್.
ಬಿಸಿಸಿಐ ವೆಬ್‌ಸೈಟ್‌ನ ಚಾಹಲ್ ಟಿವಿ ಕಾರ್ಯಕ್ರಮದಲ್ಲಿ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಜೊತೆಗೆ ಸಂವಾದ ನಡೆಸಿದ ಚಾಹಲ್ ತನ್ನ ಹೊಸ ಸೆಲೆಬ್ರೇಶನ್ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ತಮಾಷೆಯಾಗಿ ಚಾಹಲ್ ಪ್ರತಿಕ್ರಿಯಿಸಿದ್ದು ತನಗೆ ವಯಸ್ಸಾಗುತ್ತಿದ್ದು ಸದ್ದಿಲ್ಲದೆ ಸಂಭ್ರಮಿಸುವುದು ಉತ್ತಮ ಎಂದು ಅರಿತುಕೊಂಡಿದ್ದೇನೆ ಎಂದಿದ್ದಾರೆ.
"ನನಗೀಗ ವಯಸ್ಸಾಗುತ್ತಿದೆ. ಆಕ್ರಮಣಕಾರಿತನ ಹೆಚ್ಚು ಕಾಲ ಸಹಜವಾಗು ಬರುವುದಿಲ್ಲ" ಎಂದು ಚಾಹಲ್ ನಗುತ್ತಾ ಹೇಳಿದ್ದಾರೆ. ಮುಂದುವರಿಸು ಮಾತನಾಡಿದ ಚಾಹಲ್ ತಾನು ಬೌಲಿಂಗ್ ಹಾಗೂ ಫಿಲ್ಡಿಂಗ್ ಮೇಲೆ ಕಠಿಣ ಪರಿಶ್ರಮ ಪಡುತ್ತಿದ್ದೇನೆ ಎಂದಿದ್ದಾರೆ. ನಾನು ಉತ್ತಮವಾಗಿ ಚೆಂಡೆಸೆಯಬಲ್ಲವನಾಗಿದ್ದು ಅಂಗಳದಲ್ಲಿ ವೇಗವಾಗಿ ಓಡುವ ಸಾಮರ್ಥ್ಯ ಹೊಂದಿದ್ದೇನೆ. ಹಾಗಾಗಿ ನಾನು ಬೌಂಡರಿ ಬಳಿ ಫೀಲ್ಡಿಂಗ್ ಮಾಡಿ ತಂಡಕ್ಕೆ ಕೊಡುಗೆ ನೀಡಲು ಬಯಸುತ್ತೇನೆ" ಎಂದಿದ್ದಾರೆ ಯುಜುವೇಂದ್ರ ಚಾಹಲ್.
ಇನ್ನು ಎರಡನೇ ಪಂದ್ಯದ ಬಗ್ಗೆಯೂ ಚಾಹಲ್ ಈ ಸಂದರ್ಭದಲ್ಲಿ ಮಾತನಾಡಿದರು. "ಹಿಂದಿನ ಪಂದ್ಯದಲ್ಲಿ ನಾನು ಸ್ವಲ್ಪ ವೇಗವಾಗಿ ಬೌಲಿಂಗ್ ಮಾಡುತ್ತಿದ್ದೆ ಮತ್ತು ಸ್ಲೈಡರ್ ಅನ್ನು ಬಳಸುತ್ತಿದ್ದೆ. ಆದ್ದರಿಂದ ಪಿಚ್ ಸಹಾಯವನ್ನು ಹೊಂದಿದ್ದರೂ ಕೂಡ ಚೆಂಡು ಕೇವಲ ಜಾರುತ್ತದೆ. ಹಾಗಾಗಿ ನಾನು ಪರಾಸ್ ಸರ್(ಬೌಲಿಂಗ್ ಕೋಚ್) ಮತ್ತು ನಾಯಕ ರಿಷಭ್ ಪಂತ್ ಅವರೊಂದಿಗೆ ಮಾತನಾಡಿ ಚರ್ಚೆ ನಡೆಸಿದೆ. ಅಂತಹ ಪಿಚ್‌ನಲ್ಲಿ ವೇಗದ ಲೆಗ್ ಸ್ಪಿನ್ ಬೌಲ್ ಮಾಡಬೇಕು ಮತ್ತು ಅದನ್ನು ಸೀಮ್ ಪೊಸಿಷನ್‌ನಲ್ಲಿ ಇಳಿಸಬೇಕು ಎಂದು ಅರಿತುಕೊಂಡೆ" ಎಂದಿದ್ದಾರೆ ಯುಜುವೇಂದ್ರ ಚಾಹಲ್.
ಇನ್ನು ಮೊದಲ ಎರಡು ಪಂದ್ಯಗಳಲ್ಲಿ ವಿಫಲವಾದಾಗ ಸಾಕಷ್ಟು ಟೀಕೆಗಳು ಕೇಳಿ ಬಂದಿತ್ತು. ಆದರೆ ಮೂರನೇ ಪಂದ್ಯದಲ್ಲಿ ಚಹಾಲ್ ಮತ್ತೊಮ್ಮೆ ತಮ್ಮ ಪ್ರದರ್ಶನದ ಮೂಲಕವೇ ಟೀಕಾಕಾರರ ಬಾಯ್ಮಿಚ್ಚಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ಭಾರತದ ಮೊದಲ ಆಯ್ಕೆಯ ಸ್ಪಿನ್ನರ್ ಸ್ಥಾನಕ್ಕೆ ಸ್ಪರ್ಧೆಯಲ್ಲಿ ಮುಂದಿದ್ದಾರೆ. ಮುಂದಿನ ಪಂದ್ಯ ಶುಕ್ರವಾರ (ಜೂನ್ 17) ರಾಜ್‌ಕೋಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಭಾರತಕ್ಕೆ ಮತ್ತೊಮ್ಮೆ ಗೆಲುವು ತಂದುಕೊಡಲು ಚಾಹಲ್ ಪ್ರಯತ್ನಿಸಲಿದ್ದಾರೆ.
ಭಾರತ ಸ್ಕ್ವಾಡ್: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್, ರವಿ ಬಿಷ್ಣೋಯ್, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
ದಕ್ಷಿಣ ಆಫ್ರಿಕಾ ಸ್ಕ್ವಾಡ್: ಟೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆನ್ರಿಚ್ ಕ್ಲಾಸೆನ್ (ವಾಕ್), ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಟ್ಜೆ, ಟ್ರಿಸ್ಟಾನ್ ಸ್ಟಬ್ಸ್, ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಾಮ್