
ಅಚ್ಚರಿಯ ಬೆಳವಣಿಗೆಯಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಜಸ್ಪ್ರೀತ್ ಬುಮ್ರಾರನ್ನು ಹೊರಗಿಡಲು ಬಿಸಿಸಿಐ ನಿರ್ಧರಿಸಿದೆ. ಸರಣಿಯ ಮೊದಲನೇ ಪಂದ್ಯಕ್ಕೆ ಹಿಂದಿನ ದಿನ ಬಿಸಿಸಿಐ ಈ ಮಹತ್ವದ ನಿರ್ಧಾರ ತೆಗೆದುಕೊಂಡಿತು.
ಡಿಸೆಂಬರ್ ನಲ್ಲಿ ಬಿಸಿಸಿಐ ಘೋಷಿಸಿದ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಹೆಸರು ಇರಲಿಲ್ಲ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಬುಮ್ರಾ ಫಿಟ್ ಆಗಿದ್ದಾರೆ ಎಂದು ಘೋಷಣೆ ಮಾಡಿದ ನಂತರ ಜನವರಿ 3ರಂದು ಅವರ ಹೆಸರನ್ನು ತಂಡಕ್ಕೆ ಸೇರ್ಪಡೆ ಮಾಡಲಾಯಿತು. ಜನವರಿ 9 ರಂದು ಅವರನ್ನು ಸರಣಿಯಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ಘೋಷಣೆ ಮಾಡಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ ನಂತರ ಬೆನ್ನು ನೋವು ಕಾಣಿಸಿಕೊಂಡ ಕಾರಣ ಅವರು ಮತ್ತೆ ಕ್ರಿಕೆಟ್‌ನಿಂದ ದೂರವುಳಿದರು. 2022ರ ಟಿ20 ವಿಶ್ವಕಪ್‌ನಲ್ಲಿ ಕೂಡ ಅವರು ಆಡಲು ಸಾಧ್ಯವಾಗಲಿಲ್ಲ.
ಸಂಪೂರ್ಣವಾಗಿ ಫಿಟ್ ಆಗುವ ಮುನ್ನವೇ ಅವರನ್ನು ಆಡಿಸಿದ್ದು ಗಾಯಕ್ಕೆ ಕಾರಣ ಎಂದು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗಿಡಲು ಇದೇ ಕಾರಣ ಎನ್ನಲಾಗಿದೆ.

ಸಂಪೂರ್ಣವಾಗಿ ಸಜ್ಜಾದ ನಂತರ ತಂಡಕ್ಕೆ ವಾಪಸ್
ಅವರು ಇತ್ತೀಚೆಗೆ ತಾನೆ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಅವರನ್ನು ಈಗಲೇ ತಂಡಕ್ಕೆ ಸೇರ್ಪಡೆ ಮಾಡುವುದರಿಂದ ಮತ್ತೆ ಗಾಯಗೊಳ್ಳುವ ಭಯ ಎದುರಾಗಿದೆ. ಅವರು ಇನ್ನೂ ಫಿಟ್ ಆಗಬೇಕು, ಬೌಲರ್‌ಗೆ ಹೆಚ್ಚಿನ ಸ್ಥಿತಿಸ್ಥಾಪಕತ್ವದ ಅಗತ್ಯವಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಮಾಡಲಾಗಿದೆ. ಸಂಪೂರ್ಣವಾಗಿ ಸಜ್ಜಾದ ನಂತರವೇ ತಂಡಕ್ಕೆ ಸೇರ್ಪಡೆ ಮಾಡಲು ನಿರ್ಧರಿಸಿರುವುದಾಗಿ ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಬುಮ್ರಾ ಹೊರಗುಳಿದರೂ, ಅವರಿಗೆ ಬದಲಿಯಾಗಿ ಯಾವುದೇ ಆಟಗಾರನನ್ನು ತಂಡಕ್ಕೆ ಸೇರ್ಪಡೆ ಮಾಡದಿರಲು ನಿರ್ಧರಿಸಿದೆ. ಬುಮ್ರಾ ಅನುಪಸ್ಥಿತಿಯಲ್ಲಿ ಈಗ ತಂಡದಲ್ಲಿರುವ ಯುವ ಆಟಗಾರರಿಗೆ ಅವಕಾಶ ಸಿಗುವಂತೆ ಮಾಡಲು ಬಿಸಿಸಿಐ ಈ ತೀರ್ಮಾನ ಮಾಡಿದೆ.
ಯುವ ವೇಗಿಗಳಿಗೆ ಅವಕಾಶ
ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ. ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಉಮ್ರಾನ್ ಮಲಿಕ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆ?
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದ ಬಳಿಕ ಜನವರಿ 18ರಂದು ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಫೆಬ್ರವರಿ 9ರಂದು ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ ಸರಣಿಗೆ ಆಯ್ಕೆಯಾಗುತ್ತಾರಾ ಎನ್ನುವುದು ಅನುಮಾನವಾಗಿದೆ.
2023ರ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗಾಗಿ ಭಾರತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬುಮ್ರಾ ವಿಶ್ವಕಪ್‌ನಲ್ಲಿ ಪ್ರಮುಖ ಆಟಗಾರನಾಗಿರುವ ಕಾರಣ, ಅವರ ಚೇತರಿಕೆ ಬಗ್ಗೆ ಬಿಸಿಸಿಐ ಹೆಚ್ಚಿನ ಕಾಳಜಿ ವಹಿಸಲಿದೆ.