
ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಗೆ ಎರಡೂ ತಂಡಗಳು ಕೂಡ ಸಜ್ಜಾಗಿದೆ. ಟೆಸ್ಟ್ ಸರಣಿಯನ್ನಾಡಲು ಭಾರತ ಹಾಗೂ ಶ್ರೀಲಂಕಾ ತಂಡಗಳ ಆಟಗಾರರು ಈಗಾಗಲೇ ಮೊಹಾಲಿಯನ್ನು ತಲುಪಿದ್ದು ಮುಂದಿನ ಶುಕ್ರವಾರ ಮೊದಲ ಪಂದ್ಯ ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈ ಪಂದ್ಯ ಟೀಮ್ ಇಂಡಿಯಾ ಮಾಜಿ ನಾಐಕ ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯವಾಗಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಕೊರೊನಾವೈರಸ್ ಕಾರಣದಿಂದಾಗಿ ಮುಚ್ಚಿನ ಕ್ರೀಡಾಂಗಣದಲ್ಲಿ ಈ ಟೂರ್ನಿ ಆಯೋಜನೆಗೆ ನಿರ್ಧರಿಸಲಾಗಿತ್ತು. ಆದರೆ ವಿರಾಟ್ ಕೊಹ್ಲಿಯ ಮೈಲುಗಲ್ಲಿನ ಈ ಪಂದ್ಯದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯಗಳು ಸಾಕಷ್ಟು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅಭಿಮಾನಿಗಳ ಒತ್ತಾಯಕ್ಕೆ ಮಣಿದಿದ್ದು ಪ್ರೇಕ್ಷಕರಿಗೆ ಅವಕಾಶ ನೀಡಲು ನಿರ್ಧರಿಸಿದೆ. ಕ್ರೀಡಾಂಗಣದ ಸಾಮರ್ಥ್ಯದ ಅರ್ಧದಷ್ಟು ಪ್ರೇಕ್ಷಕರು ನೇರವಾಗಿ ಪಂದ್ಯವನ್ನು ವೀಕ್ಷಿಸುವ ಅವಕಾಶ ಪಡೆದುಕೊಂಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪ್ರತಿಭಾವಂತ ಆಟಗಾರರ ಪಡೆಯನ್ನು ಹೊಂದಿದ್ದು ಭಾರತೀಯ ತಂಡದ ವಿರುದ್ಧ ಶ್ರೀಲಂಕಾ ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಮೊಹಾಲಿ ಪಿಚ್ ರಿಪೋರ್ಟ್: ದೇಶದ ಇತರ ನಗರಗಳ ಮೈದಾನಗಳಿಗೆ ಹೋಲಿಸಿದರೆ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್‌ನ ಈ ಪಿಚ್ ಹೆಚ್ಚು ಹಸಿರಿನಿಂದ ಕೂಡಿದೆ. ಹೀಗಾಗಿ ವೇಗದ ಬೌಲರ್‌ಗಳು ಈ ಪಿಚ್‌ನಿಂದ ಹೆಚ್ಚಿನ ನೆರವನ್ನು ನಿರೀಕ್ಷಿಸಬಹುದು ಅಲ್ಲದೆ ಬೌನ್ಸ್ ಕೂಡ ವೇಗಿಗಳಿಗೆ ನೆರವಾಗುವ ಸಾಧ್ಯತೆಯಿದೆ. ಆದರೆ ಪಿಚ್‌ನಲ್ಲಿ ಬಿರುಕುಂಟಾಗುವ ಕಾರಣ ಪಂದ್ಯದ ಅಂತಿಮ ಎರಡು ದಿನಗಳಲ್ಲಿ ಸ್ಪಿನ್ನರ್‌ಗಳು ಮಹತ್ವದ ಪಾತ್ರವಹಿಸುವ ಸಾಧ್ಯತೆಯಿದೆ. ಎರಡು ತಂಡಗಳು ಕೂಡ ಪ್ರತಿಭಾವಂತ ಸ್ಪಿನ್ನರ್‌ಗಳನ್ನು ಹೊಂದಿರುವ ಕಾರಣ ಸಾಕಷ್ಟು ಕುತೂಹಲ ಮೂಡಿಸಿದೆ.
ಮೊಹಾಲಿ ಹವಾಮಾನ ವರದಿ: ಸರಣಿಯ ಮೊದಲ ಟೆಸ್ಟ್ ಪಂದ್ಯ ಮಾರ್ಚ್ ನಾಲ್ಕರಂದು ಆರಂಭವಾಗಲಿದೆ. ಭಾರತದಲ್ಲಿ ಬೇಸಿಗೆ ಕಾಲವಾದ್ದರಿಂದ ಈ ಸಂದರ್ಭದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಆದರೆ ಟೆಸ್ಟ್ ಪಂದ್ಯ ಮುಂದುವರಿಯುತ್ತಿದ್ದಂತೆಯೇ ಕೆಲ ದಿನಗಳು ಮೋಡದಿಂದ ಕೂಡಿದ ವಾತಾವರಣವಿರುವ ಸಾಧ್ಯತೆಯಿದೆ. ಆದರೆ ಈ ಕ್ಷಣದವರೆಗೆ ಮಳೆಯಾಗುವ ಬಗ್ಗೆ ಯಾವುದೇ ಮುನ್ನಚ್ಚರಿಕೆಗಳು ಕೂಡ ಇಲ್ಲ. ಹೀಗಾಗಿ ನಿರಾತಂಕವಾಗಿ ಪಂದ್ಯ ಸಾಗಲಿದೆ.
ಭಾರತ vs ಶ್ರೀಲಂಕಾ ಟೆಸ್ಟ್ ಹೆಡ್ ಟು ಹೆಡ್: ಭಾರತ ಹಾಗೂ ಶ್ರೀಲಂಕಾ ತಂಡಗಳು ಈವರೆಗೆ 44 ಟೆಸ್ಟ್ ಪಂದ್ಯಗಳಲ್ಲು ಮುಖಾಮುಖಿಯಾಗಿದೆ. ಇದರಲ್ಲಿ ಭಾರತ 20 ಪಂದ್ಯಗಳಲ್ಲಿ ಗೆದ್ದಿದ್ದು ಮೇಲುಗೈ ಸಾಧಿಸಿದೆ. ಶ್ರೀಲಂಕಾ ತಂಡ ಈವರೆಗೆ ಭಾರತದ ವಿರುದ್ಧ 7 ಟೆಸ್ಟ್ ಪಂದ್ಯಗಳಲ್ಲಿ ಮಾತ್ರವೇ ಗೆದ್ದಿದೆ. ಇನ್ನುಳಿದ 17 ಪಂದ್ಯಗಳು ಡ್ರಾ ಕಂಡಿದೆ.
ಮೊಹಾಲಿ ಟೆಸ್ಟ್ ಅಂಕಿಅಂಶಗಳು: ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಭಾರತ ಈವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 7ರಲ್ಲಿ ಗೆದ್ದು 5ರಲ್ಲಿ ಡ್ರಾ ಮಾಡಿಕೊಂಡಿದೆ. ಈ ಮೈದಾನದಲ್ಲಿ ಭಾರತೀಯ ತಂಡ ಒಂದು ಪಂದ್ಯವನ್ನು ಸೋತಿದೆ.
ಗರಿಷ್ಠ ವೈಯಕ್ತಿಕ ಸ್ಕೋರ್: ಶಿಖರ್ ಧವನ್ 187 vs ಆಸ್ಟ್ರೇಲಿಯಾ.
ಅತ್ಯುತ್ತಮ ಬೌಲಿಂಗ್: ಡಿಯೋನ್ ನ್ಯಾಶ್ 6/27, ನ್ಯೂಜಿಲೆಂಡ್ vs ಭಾರತ
ತಂಡದ ಹೈಯೆಸ್ಟ್ ಸ್ಕೋರ್: ನ್ಯೂಜಿಲೆಂಡ್ 630/6 vs ಭಾರತ
ತಂಡದ ಕನಿಷ್ಟ ಸ್ಕೋರ್: ಭಾರತ 83 vs ನ್ಯೂಜಿಲೆಂಡ್
4ನೇ ಇನ್ನಿಂಗ್ಸ್‌ನಲ್ಲಿ ಚೇಸ್ ಮಾಡಿದ ಗರಿಷ್ಠ ಸ್ಕೋರ್: ಆಸ್ಟ್ರೇಲಿಯಾ ವಿರುದ್ಧ ಭಾರತ 216/9
ಮೊಹಾಲಿ ಕ್ರೀಡಾಂಗಣದಲ್ಲಿ ಹೆಚ್ಚು ರನ್: ಸಚಿನ್ ತೆಂಡೂಲ್ಕರ್: 11 ಪಂದ್ಯಗಳಿಂದ 767 ರನ್. ಸರಾಸರಿ: 47.94. 100: 1, 50: 5
ಅತಿ ಹೆಚ್ಚು ವಿಕೆಟ್: ಅನಿಲ್ ಕುಂಬ್ಳೆ: 7 ಟೆಸ್ಟ್‌ಗಳಲ್ಲಿ 36 ವಿಕೆಟ್.
ಆರ್ ಅಶ್ವಿನ್ 3 ಪಂದ್ಯಗಳಿಂದ 16 ವಿಕೆಟ್ ಪಡೆದಿದ್ದಾರೆ.