Ind vs SL 2nd ODI: ಶ್ರೀಲಂಕಾ ಕನಸಿಗೆ ಕೆಎಲ್ ರಾಹುಲ್ ಅಡ್ಡಿ: 2ನೇ ಏಕದಿನ ಪಂದ್ಯ ಗೆದ್ದು ಸರಣಿ ಭಾರತದ ವಶಕ್ಕೆ

ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಲೋಸ್ಕೋರಿಂಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿ ಸೋಲಿನ ಭೀತಿಗೆ ಒಳಗಾಗಿದ್ದರು ಕೂಡ ಕೆಎಲ್ ರಾಹುಲ್ ಜವಾಬ್ಧಾರಿಯುತ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಸರಣಿಯಲ್ಲಿ ಒಂದು ಪಂದ್ಯ ಬಾಕಿಯಿರುವಂತೆಯೇ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ವಿರುದ್ಧ ಭಾರತ ಬೌಲಿಂಗ್ ವಿಭಾಗ ಅದ್ಭುತ ಯಶಸ್ಸು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಶ್ರೀಲಂಕಾ ತಂಡವನ್ನು 215 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಭಾರತೀಯ ಬೌಲಿಂಗ್ ವಿಭಾಗ ಯಶಸ್ವಿಯಾಗಿತ್ತು. ಆದರೆ ಬ್ಯಾಟಿಂಗ್‌ನಲ್ಲಿ ಭಾರತದ ದಾಂಡಿಗರು ಕೂಡ ಹಿನ್ನಡೆ ಅನುಭವಿಸಿದರು. ಒಂದು ಹಂತದಲ್ಲಿ ಲಂಕಾ ಬೌಲರ್‌ಗಳು ಭಾರತದ ಬ್ಯಾಟಿಂಗ್ ವಿಭಾಗದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸುವ ಹಿಮ್ಮಸ್ಸಿನಲ್ಲಿದ್ದರು. ಆದರೆ ಕನ್ನಡಿಗ ಕೆಎಲ್ ರಾಹುಲ್ ಅಂತಿಮ ಹಂತದವರೆಗೂ ಅಜೇಯವಾಗುಳಿದು ಭಾರತ ತಂಡಕ್ಕೆ ಗೆಲುವು ಖಚಿತಪಡಿಸಿದರು. ಹೀಗಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

ಟೀಮ್ ಇಂಡಿಯಾಗೆ ಕೈಕೊಟ್ಟ ಅಗ್ರ ಕ್ರಮಾಂಕ
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ 216 ರನ್‌ಗಳ ಸಾಧಾರಣ ಗುರಿ ಶ್ರೀಲಂಕಾ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ 33 ರನ್‌ಗಳ ಸಾಧಾರಣ ಆರಂಭಿಕ ಜೊತೆಯಾಟ ಲಭ್ಯವಾಯಿತು. ಆದರೆ ಅದಾದ ಬಳಿಕ ಟೀಮ್ ಇಂಡಿಯಾ ತನ್ನ ಕೆಲ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತ್ತು. ರೋಹಿತ್ ಶರ್ಮಾ (17 ರನ್), ಶುಬ್ಮನ್ ಗಿಲ್(21), ವಿರಾಟ್ ಕೊಹ್ಲಿ(4), ಶ್ರೇಯಸ್ ಐಯ್ಯರ್(28) ವಿಕೆಟ್ ಕಳೆದುಕೊಳ್ಳುವ ಮೂಲಕ ಟೀಮ್ ಇಂಡಿಯಾ 86 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಗೆಲುವು ತಂದುಕೊಟ್ಟ ಕೆಎಲ್ ರಾಹುಲ್
ಇನ್ನು ಈ ಪಂದ್ಯದಲ್ಲಿ ಅಲ್ಪ ಮೊತ್ತದ ಹೊರತಾಗಿಯೂ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿಕೊಂಡಾಗ ಆಸರೆಯಾಗಿದ್ದು ಕೆಎಲ್ ರಾಹುಲ್. ಮೊದಲಿಗೆ ಹಾರ್ದಿಕ್ ಪಾಂಡ್ಯ(36 ರನ್) ಜೊತೆಗೆ ಉತ್ತಮ ಜೊತೆಯಾಟದಲ್ಲಿ ಭಾಗಿಯಾದ ರಾಹುಲ್‌ಗೆ ಬಳಿಕ ಅಕ್ಷರ್ ಪಟೇಲ್(21 ರನ್) ಕೆಲ ಕಾಲ ಸಾಥ್ ನೀಡಿದರು. ಅಂತಿಮ ಹಂತದಲ್ಲಿ ಕುಲ್‌ದೀಪ್ ಯಾದವ್(10*) ಜೊತೆ ಸೇರಿಕೊಂಡು ಭಾರತವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜವಾಬ್ಧಾರಿಯುತ ಪ್ರದರ್ಶನ ನೀಡಿದ ಕೆಎಲ್ ರಾಹುಲ್ ಅಜೇಯ 64 ರನ್ ಸಿಡಿಸಿ ಮಿಂಚಿದ್ದಾರೆ.

ಲಂಕಾಗೆ ನಿರಾಸೆ ಮೂಡಿಸಿದ ಮಧ್ಯಮ ಕ್ರಮಾಂಕ
ಇನ್ನು ಈ ಪಂದ್ಯದಲ್ಲಿ ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಶ್ರೀಲಂಕಾಗೆ ಮೊದಲ ವಿಕೆಟನ್ನು 29 ರನ್‌ಗಳಿಗೆ ಕಳೆದುಕೊಂಡಿತಾದರೂ ಎರಡನೇ ವಿಕೆಟ್‌ಗೆ ಅದ್ಭುತ ಜೊತೆಯಾಟ ಪಡೆದುಕೊಂಡಿತು. ಚೊಚ್ಚಲ ಪಂದ್ಯವನ್ನಾಡುತ್ತಿರುವ ನುವಾನಿಡು ಫೆರ್ನಾಂಡೋ ಕುಸಾಲ್ ಮೆಂಡಿಸ್ ಜೊತೆಗೂಡಿ ಉತ್ತಮ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಲಂಕಾ ಪಡೆ ಕುಸಿಯುತ್ತ ಸಾಗಿತು. ಕುಸಾಲ್ ಮೆಂಡಿಸ್ 34 ರನ್‌ಗಳ ಕೊಡುಗೆ ನೀಡಿ ಕುಲ್ದೀಪ್ ಯಾದವ್‌ಗೆ ವಿಕೆಟ್ ನೀಡುವ ಮೂಲಕ ಲಂಕಾದ ಕುಸಿತ ಆರಂಭವಾಯಿತು.
ಇನ್ನು ನುವಾನಿಡು ಫೆರ್ನಾಂಡೋ ಪದಾರ್ಪಣಾ ಪಂದ್ಯವನ್ನು ಅರ್ಧ ಶತಕ ಸಿಡಿಸುವ ಮೂಲಕ ಸ್ಮರಣೀಯಗೊಳಿಸಿದರು. 63 ಎಸೆತಗಳಲ್ಲಿ 50 ರನ್‌ಗಳಿಸಿದ ಯುವ ಆಟಗಾರ ರನೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಉಳಿದಂತೆ ಲಂಕಾದ ಯಾವ ಆಟಗಾರನಿಂದಲೂ ದೊಡ್ಡ ಮೊತ್ತದ ಕೊಡುಗೆ ಬಾರಲಿಲ್ಲ. ಅಂತಿಮವಾಗಿ ಶ್ರೀಲಂಕಾ ತಂಡ 39.4 ಓವರ್‌ಗಳಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 215 ರನ್ ಮಾತ್ರವೇ ಗಳಿಸಲು ಶಕ್ತವಾಯಿತು

ಭಾರತದ ಭರ್ಜರಿ ಬೌಲಿಂಗ್
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಅತ್ಯಂತ ಪರಿಣಾಮಕಾರಿಯಾಗಿ ಬೌಲಿಂಗ್ ನಡೆಸಿದ್ದು ಕುಲ್‌ದೀಪ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್. ಇಬ್ಬರು ಕೂಡ ತಲಾ ಮೂರು ವಿಕೆಟ್ ಸಂಪಾದಿಸಿದ್ದಾರೆ. ಇನ್ನು ಉಮ್ರಾನ್ ಮಲಿಕ್ ಕೂಡ ಎರಡು ವಿಕೆಟ್ ಪಡೆದುಕೊಂಡಿದ್ದು ಒಂದು ವಿಕೆಟ್ ಅಕ್ಷರ್ ಪಟೇಲ್ ಪಾಲಾಗಿದೆ.

ಇತ್ತಂಡಗಳ ಆಡುವ ಬಳಗ
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಉಮ್ರಾನ್ ಮಲಿಕ್, ಕುಲ್‌ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಬೆಂಚ್: ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್
ಶ್ರೀಲಂಕಾ: ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಅವಿಷ್ಕ ಫೆರ್ನಾಂಡೊ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ನುವಾನಿಡು ಫೆರ್ನಾಂಡೊ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಲಹಿರು ಕುಮಾರ, ಕಸುನ್ ರಜಿತ
ಬೆಂಚ್: ಮಹೇಶ್ ತೀಕ್ಷಣ, ಅಶೇನ್ ಬಂಡಾರ, ಪ್ರಮೋದ್ ಮದುಶನ್, ಜೆಫ್ರಿ ವಂಡರ್ಸೆ, ಸದೀರ ಸಮರವಿಕ್ರಮ, ಪಾತುಮ್ ನಿಸ್ಸಾಂಕ, ದಿಲ್ಶಾನ್ ಮಧುಶಂಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications