
ತಿರುವನಂತಪುರದ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಭಾರತ ವಿಶ್ವ ದಾಖಲೆಯ ಜಯ ಸಾಧಿಸಿದೆ. ಭಾರತದ ಗೆಲುವನ್ನು ಎಲ್ಲರೂ ಸಂಭ್ರಮಿಸಿದರೆ, ವೇಗಿ ಮೊಹಮ್ಮದ್ ಸಿರಾಜ್ ಮಾತ್ರ ಸಂತಸದಲ್ಲಿಯೂ ಒಂದು ಬೇಸರವನ್ನು ಹೊರಹಾಕಿದರು.
ಏಕದಿನ ಕ್ರಿಕೆಟ್‌ನಲ್ಲಿ 5 ವಿಕೆಟ್ ಗಳಿಸುವ ಅವಕಾಶವನ್ನು ಕಳೆದುಕೊಂಡಿದ್ದಕ್ಕೆ ಮೊಹಮ್ಮದ್ ಸಿರಾಜ್ ನಿರಾಸೆ ವ್ಯಕ್ತಪಡಿಸಿದ್ದಾರೆ. ಭಾರತ 5 ವಿಕೆಟ್ ಕಳೆದುಕೊಂಡು 390 ರನ್ ಗಳಿಸಿದ ನಂತರ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 73 ರನ್‌ಗಳಿಗೆ ಆಲೌಟ್ ಆಯಿತು.
ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದುಕೊಂಡರೆ, ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಸಿರಾಜ್ 4 ವಿಕೆಟ್ ಜೊತೆ ಒಂದು ರನೌಟ್ ಕೂಡ ಮಾಡಿದರು. ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸಿರಾಜ್ ಎದುರಾಳಿಗಳಿಗೆ ಮಾರಕವಾಗಿದ್ದಾರೆ. ಅದರಲ್ಲೂ, ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಸಿರಾಜ್ ಭಾರತದ ಬೌಲಿಂಗ್ ವಿಭಾಗವನ್ನು ಸಾಕಷ್ಟು ಶಕ್ತಿಯುತಗೊಳಿಸಿದ್ದಾರೆ.
ಪವರ್ ಪ್ಲೇನಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಸಿರಾಜ್ ಪ್ರಮುಖ 4 ವಿಕೆಟ್ ಕಬಳಿಸಿದರು. ತಮ್ಮ 10 ಓವರ್ ಗಳನ್ನು ಮುಕ್ತಾಯಗೊಳಿಸಿದರೂ ಅವರಿಗೆ 5ನೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ತುಂಬಾ ಪ್ರಯತ್ನಿಸಿದೆ ಎಂದ ಸಿರಾಜ್
ಏಕದಿನ ಮಾದರಿಯಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆಯುವ ಅವಕಾಶ ಕಳೆದುಕೊಂಡಿದ್ದಕ್ಕೆ ಸಿರಾಜ್ ನಿರಾಶರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು ನನ್ನ ಮೊದಲ 5 ವಿಕೆಟ್ ಪಡೆಯಲು ಬಯುಸುತ್ತೇನೆ. ಅದಕ್ಕಾಗಿ ತುಂಬಾ ಪ್ರಯತ್ನಿಸಿದೆ. ಆದರೆ, ನಮಗೆ ಎಷ್ಟು ಸಿಗಬೇಕೋ ಅಷ್ಟೇ ದಕ್ಕುವುದು" ಎಂದು ಸಿರಾಜ್ ಹೇಳಿದ್ದಾರೆ.
ಬ್ಯಾಟರ್ ಗಳನ್ನು ಗೊಂದಲಗೊಳಿಸಲು ಔಟ್ ಸ್ವಿಂಗರ್ ಎಸೆತಗಳನ್ನು ಹಾಕುವುದಾಗಿ ಅವರು ಹೇಳಿದ್ದಾರೆ. "ನಾನು ಔಟ್ ಸ್ವಿಂಗ್ ಎಸೆತಗಳೊಂದಿಗೆ ಬ್ಯಾಟರ್‌ನ ಮನಸ್ಸಿನಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತೇನೆ. ನಾಯಕ ರೋಹಿತ್ ಶರ್ಮಾ ನಾನು ಫಿಫರ್ ಪಡೆಯಲಿ ಎಂದು 10 ಓವರ್ ಬೌಲಿಂಗ್ ಮಾಡಲು ಅವಕಾಶ ಕೊಟ್ಟರು, ಆದರೆ ಏನು ಮಾಡುವುದು, ಅವಕಾಶ ಕಳೆದುಕೊಂಡೆ" ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸರಣಿಯ ಮೂರು ಪಂದ್ಯಗಳನ್ನಾಡಿರುವ ಅವರು 10.22 ಸರಾಸರಿಯಲ್ಲಿ 9 ವಿಕೆಟ್ ಪಡೆದು ಮಿಂಚಿದ್ದಾರೆ. ಬುಮ್ರಾ ಅನುಪಸ್ಥಿತಿಯಲ್ಲಿ ಸಿರಾಜ್ ಪವರ್ ಪ್ಲೇನಲ್ಲಿ ಮಾರಕ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
5 ವಿಕೆಟ್ ಗೊಂಚಲು ಪಡೆಯುವ ಅವಕಾಶವನ್ನು ಕಳೆದುಕೊಂಡರೂ, ಇದೇ ರೀತಿ ಬೌಲಿಂಗ್ ಮಾಡಿದರೆ ಅತಿ ಶೀಘ್ರದಲ್ಲೇ ಏಕದಿನ ಪಂದ್ಯವೊಂದರಲ್ಲಿ 5 ವಿಕೆಟ್ ಪಡೆಯುವುದು ಖಚಿತ ಎಂದು ಅಭಿಮಾನಿಗಳು ಸಿರಾಜ್‌ಗೆ ಬೆಂಬಲ ನೀಡಿದ್ದಾರೆ.