ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಗೆಲ್ಲಲು ಭಾರತ ತಂಡದಲ್ಲಿ ಈ ಆಟಗಾರರು ಇರಬೇಕು ಎಂದ ಮಾಜಿ ಕ್ರಿಕೆಟಿಗ

ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧದ ೩ ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ ೨ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಟಸಾಟ ನಡೆಸುತ್ತಿದೆ. ಈಗಾಗಲೇ ಇತ್ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಮಕ್ತಾಯಗೊಂಡಿದ್ದು ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿಯೂ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ ಸರಣಿಯಲ್ಲಿ ೩-೦ ಅಂತರದ ವಿಜಯದೊಂದಿಗೆ ಪ್ರವಾಸಿ ಶ್ರೀಲಂಕಾಗೆ ವೈಟ್ ವಾಷ್ ಬಳಿದಿದೆ. ಈ ಸರಣಿ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಈ ಹಿಂದೆ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ, ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಹಾಗೂ ಏಕದಿನ ಸರಣಿ ಸೇರಿದಂತೆ ಸತತ ನಾಲ್ಕನೇ ಸರಣಿಯಲ್ಲಿ ವೈಟ್ ವಾಷ್ ಸಾಧನೆ ಮಾಡಿದೆ. ಹೀಗೆ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯ ಗೆಲುವಿನ ಮೂಲಕ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿರುವ ರೋಹಿತ್ ಪಡೆ ಸದ್ಯ ಇದೇ ಶ್ರೀಲಂಕಾ ವಿರುದ್ಧ ನಡೆಯಲಿರುವ ೨ ಪಂದ್ಯಗಳ ಟೆಸ್ಟ್ ಸರಣಿಯಲ್ಲಿಯೂ ಸಹ ಗೆಲುವು ಸಾಧಿಸಲು ಸಿದ್ಧತೆಗಳನ್ನು ನಡೆಸುತ್ತಿದೆ.
ಇನ್ನು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಮಾರ್ಚ್ ೪ರಂದು ಆರಂಭವಾಗಲಿದ್ದು ಮೊಹಾಲಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯ ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಿ ಆಡಲಿರುವ ಮೊದಲ ಪಂದ್ಯ ಎಂಬ ವಿಶೇಷತೆಯನ್ನು ಹೊಂದಿದ್ದರೆ, ವಿರಾಟ್ ಕೊಹ್ಲಿ ಆಡಲಿರುವ ನೂರನೇ ಟೆಸ್ಟ್ ಪಂದ್ಯ ಎಂಬ ಕಾರಣಕ್ಕೆ ದೊಡ್ಡ ಮಟ್ಟದ ಮಹತ್ವವನ್ನು ಪಡೆದುಕೊಂಡು ಕ್ರೇಜ್ ಹುಟ್ಟಿಸಿದೆ. ಇನ್ನು ಟೀಮ್ ಇಂಡಿಯಾ ತನ್ನ ಕೊನೆಯ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಹೀನಾಯ ಸೋಲನ್ನು ಅನುಭವಿಸಿತ್ತು ಹಾಗೂ ಆ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದ ಆಟಗಾರರ ಪೈಕಿ ಹಲವಾರು ಕ್ರಿಕೆಟಿಗರು ಸದ್ಯ ಶ್ರೀಲಂಕಾ ವಿರುದ್ಧ ಕಣಕ್ಕಿಳಿಯಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳದೇ ಹೊರಬಿದ್ದಿದ್ದಾರೆ. ಹೌದು, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ವೃದ್ಧಿಮಾನ್ ಸಹಾ ಹಾಗೂ ಇಶಾಂತ್ ಶರ್ಮಾ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ತಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದು, ಗಾಯದ ಸಮಸ್ಯಗೊಳಗಾಗಿರುವ ಕೆಎಲ್ ರಾಹುಲ್ ಕೂಡ ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾದಲ್ಲಿ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶವಿದೆ.
ಈ ಕುರಿತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಹಲವಾರು ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪಂಡಿತರು ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಬೇಕು ಮತ್ತು ಯಾವ ಆಟಗಾರರು ಯಾರು ಆಡಬೇಕು ಎಂಬ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಈ ಕೆಳಕಂಡಂತೆ ಇರಬೇಕು ಎಂದು ತಿಳಿಸಿದ್ದಾರೆ.

ಆರು ಬ್ಯಾಟ್ಸ್ಮೆನ್
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಟೀಮ್ ಇಂಡಿಯಾದಲ್ಲಿ ಆರು ಬ್ಯಾಟ್ಸ್‍ಮನ್ ಇರಬೇಕು ಎಂದು ಆಕಾಶ್ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲಿಯೂ ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಐಯ್ಯರ್ ಆಡಬೇಕು ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ. ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಆಡಬೇಕು ಎಂದಿರುವ ಆಕಾಶ್ ಚೋಪ್ರಾ ಮೂರನೇ ಕ್ರಮಾಂಕದಲ್ಲಿ ಹನುಮ ವಿಹಾರಿ ಬದಲು ಶ್ರೇಯಸ್ ಐಯ್ಯರ್ ಕಣಕ್ಕಿಳಿಯಬೇಕು ಎಂದಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿ, ಐದನೇ ಕ್ರಮಾಂಕದಲ್ಲಿ ಹನುಮ ವಿಹಾರಿ ಹಾಗೂ ಆರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಆಡಲಿ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಇಬ್ಬರು ಸ್ಪಿನ್ನರ್ ಅಗತ್ಯತೆ ಇದೆ
ಇನ್ನು ಬೌಲಿಂಗ್ ವಿಭಾಗದ ಕುರಿತು ಮಾತನಾಡಿರುವ ಆಕಾಶ್ ಚೋಪ್ರಾ ಇಬ್ಬರು ಸ್ಪಿನ್ ಬೌಲರ್ಸ್ ಅಗತ್ಯತೆ ತಂಡಕ್ಕಿದೆ ಎಂದಿದ್ದಾರೆ. ಚಳಿಗಾಲದ ಸಮಯವಾದ್ದರಿಂದ ಮೊಹಾಲಿ ಪಿಚ್ ಪಂದ್ಯದಲ್ಲಿ ಇಬ್ಬರು ಸ್ಪಿನ್ನರ್ಸ್ ಇರಬೇಕು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ರವೀಂದ್ರ ಜಡೇಜಾ ಹೆಸರನ್ನು ಮೊದಲು ತೆಗೆದುಕೊಂಡಿರುವ ಆಕಾಶ್ ಚೋಪ್ರಾ ರವಿಚಂದ್ರನ್ ಅಶ್ವಿನ್ ಅವರನ್ನು ಎರಡನೇ ಸ್ಪಿನ್ ಬೌಲರ್ ಆಗಿ ಆರಿಸಿದ್ದಾರೆ. ಒಂದುವೇಳೆ ಅಶ್ವಿನ್ ಪಂದ್ಯಕ್ಕೆ ಅಲಭ್ಯರಾದರೆ ಜಯಂತ್ ಯಾದವ್ ಕಣಕ್ಕಿಳಿಯಬೇಕು ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ. ಇನ್ನು ಮೂವರು ವೇಗಿಗಳಾದ ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಕಣಕ್ಕಿಳಿಯಬೇಕು ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

ಆಕಾಶ್ ಚೋಪ್ರಾ ಪ್ರಕಟಿಸಿರುವ ತಂಡ
ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯಕ್ಕೆ ಮಾಜಿ ಕ್ರಿಕಟಿಗ ಆಕಾಶ್ ಚೋಪ್ರಾ ಪ್ರಕಟಿಸಿರುವ ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ / ಜಯಂತ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications