
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ಅಂತ್ಯವಾಗಿದ್ದು ಟೆಸ್ಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಭಾರತ ಹಾಗೂ ಶ್ರೀಲಂಕಾ ಎರಡೂ ತಂಡಗಳು ಕೂಡ ಈ ಸರಣಿಗೆ ಸಂಪೂರ್ಣ ಸಜ್ಜಾಗುತ್ತಿದೆ. ಟೆಸ್ಟ್ ಮಾದರಿಯಲ್ಲಿ ಅತ್ಯಂತ ಬಲಿಷ್ಠವಾಗಿರುವ ಭಾರತ ತಂಡವನ್ನು ದಿಟ್ಟವಾಗಿ ಎದುರಿಸಲು ಶ್ರೀಲಂಕಾ ಪಡೆ ರಣತಂತ್ರಗಳನ್ನು ಹೆಣೆಯುತ್ತಿದ್ದು ಅದಕ್ಕಾಗಿ ಮಹತ್ವದ ನಿರ್ಧಾರವೊಂದ ಲಂಕಾ ಪಡೆ ಮುಂದಾಗಿದೆ ಎನ್ನಲಾಗಿದೆ.
ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಶ್ರೀಲಂಕಾದ ಸೀಮಿತ ಓವರ್‌ಗಳ ನಾಯಕ ದಸುನ್ ಶನಕಾ ಅಮೋಘ ಪ್ರದರ್ಶನ ನೀಡಿದ್ದರು. ಭಾರತ ಬೌಲಿಂಗ್ ದಾಳಿಗೆ ಶನಕ ಅದ್ಭುತವಾದ ಪ್ರತ್ಯುತ್ತರಗಳನ್ನು ನೀಡುವ ಮೂಲಕ ಮಿಂಚುಹರಿಸಿದ್ದರು. ಈ ಮೂಲಕ ತನ್ನ ಅದ್ಭುತ ಫಾರ್ಮ್‌ಅನ್ನು ಲಂಕಾ ನಾಯಕ ಪ್ರದರ್ಶಿಸಿದ್ದರು. ಆದರೆ ದಸುನ್ ಶನಕಾ ಶ್ರೀಲಂಕಾದ ಟೆಸ್ಟ್ ಸರಣಿಯಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ. ಆದರೆ ಈ ಸಂದರ್ಭದಲ್ಲಿ ಕಂಕಾ ಮಂಡಳಿ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ.
ದಸುನ್ ಶನಕ ಶ್ರೀಲಂಕಾದ ಟೆಸ್ಟ್ ಸ್ಕ್ವಾಡ್‌ನಲ್ಲಿ ಇಲ್ಲದಿದ್ದರೂ ಈ ಸಂದರ್ಭದಲ್ಲಿ ಅವರ ಅತ್ಯುತ್ತಮ ಫಾರ್ಮ್ ಟೆಸ್ಟ್ ಸರಣಿಯಲ್ಲಿ ತಂಡಕ್ಕೆ ನೆರವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಶ್ರೀಲಂಕಾ ಮ್ಯಾನೇಜ್‌ಮೆಂಟ್ ಇದೆ. ಹೀಗಾಗಿ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ದಸುನ್ ಶನಕ ಅವರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ. ಮೊಹಾಲಿಗೆ ಬಂದಿಳಿದ ಶ್ರೀಲಂಕಾ ತಂಡದ ಜೊತೆಗೆ ದಸುನ್ ಶನಕ ಕೂಡ ಇರುವುದು ಈ ಬೆಳವಣಿಗೆಗೆ ಪೂರಕವಾಗಿದೆ.
ಈ ವಿಚಾರವಾಗಿ ಶ್ರೀಲಂಕಾ ಕ್ರಿಕೆಟ್ ತಂಡದ ಮೂಲಗಳು ಇನ್‌ಸೈಡ್‌ಸ್ಪೋರ್ಟ್‌ಗೆ ಮಾಹಿತಿ ನೀಡಿದ್ದಾರೆ. "ಹೌದು ಅವರು ಶ್ರೀಲಂಕಾ ತಂಡದೊಂದಿಗೆ ಮೊಹಾಲಿಗೆ ಬಂದು ಇಳಿದಿದ್ದಾರೆ. ಆದರೆ ಅವರು ಇನ್ನೂ ಕೂಡ ಅಧಿಕೃತವಾಗಿ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿಲ್ಲ. ಈ ಕ್ಷಣದಲ್ಲಿ ಅವರು ಸಣ್ಣ ಗಾಯಕ್ಕೂ ಒಳಗಾಗಿದ್ದಾರೆ. ಇದು ಆಯ್ಕೆ ಮಂಡಳಿಯ ನಿರ್ಧಾರವಾಗಿದ್ದು ಇದಕ್ಕೆ ಕ್ರೀಡಾ ಇಲಾಖೆಯ ಅನುಮತಿ ಬೇಕಾಗಿದೆ" ಎಂದು ಮಾಹಿತಿ ನೀಡಿದೆ.
ಲಂಕಾ ತಂಡದ ಸೀಮಿತ ಓವರ್‌ಗಳ ನಾಯಕನಾಗಿರುವ ಶನಕ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರವಾಗಿ ತಂಡದಲ್ಲಿ ಉಳಿಯಲು ವಿಫಲವಾಗಿದ್ದಾರೆ. 2021ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಗಾಲೆ ಪಂದ್ಯದಲ್ಲಿ ಅಂತಿಮ ಟೆಸ್ಟ್ ಪಂದ್ಯವನ್ನಾಡಿದ್ದ ಶನಕಾ ಅಲ್ಲಿ ವಿಫಲವಾಗಿದ್ದರು. ಆದರೆ ಭಾರತದ ನೆಲದಲ್ಲಿ ಶನಕಾ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಶನಕಾ ಒಂದು ಪಂದ್ಯದಲ್ಲಿ 19 ಎಸೆತಗಳಿಂದ ಅಜೇಯ 47 ರನ್‌ಗಳಿಸಿದ್ದರೆ ಮತ್ತೊಂದು ಪಂದ್ಯದಲ್ಲಿ 38 ಪಂದ್ಯಗಳಿಂದ 74 ರನ್‌ಗಳಿಸಿದ್ದರು.
ಶ್ರೀಲಂಕಾ ಟೆಸ್ಟ್ ಸ್ಕ್ವಾಡ್: ದಿಮುತ್ ಕರುಣಾರತ್ನೆ (ನಾಯಕ), ಪಾತುಮ್ ನಿಸ್ಸಾಂಕ, ಲಹಿರು ತಿರಿಮನ್ನೆ, ಧನಂಜಯ ಡಿ ಸಿಲ್ವಾ (ಉಪ ನಾಯಕ), ಕುಸಾಲ್ ಮೆಂಡಿಸ್ (ಫಿಟ್‌ನೆಸ್‌ಗೆ ಒಳಪಟ್ಟು), ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ, ಚಾಮಿಕಾ ಕರುಣಾರತ್ನ, ಲಹಿರು ಕುಮಾರ, ಸುರಂಗ ಲಕ್ಮಲ್, ದುಷ್ಮಂತ ಚಮೀರ, ವಿಶ್ವ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ಲಸಿತ್ ಎಂಬುಲ್ದೇನಿಯ.