ಬೆಂಗಳೂರು ಟೆಸ್ಟ್: ಕೊಹ್ಲಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಅಭಿಮಾನಿಗಳು ಜೈಲಿಗೆ!

ಭಾರತ ಪ್ರವಾಸ ಕೈಗೊಂಡು ಟೀಮ್ ಇಂಡಿಯಾ ವಿರುದ್ಧ ಮೊದಲಿಗೆ ಟಿ ಟ್ವೆಂಟಿ ಸರಣಿಯ ಎಲ್ಲಾ 3 ಪಂದ್ಯಗಳಲ್ಲಿಯೂ ಸೋಲುವುದರ ಮೂಲಕ ವೈಟ್‌ವಾಷ್ ಮುಖಭಂಗಕ್ಕೆ ಒಳಗಾಗಿದ್ದ ಶ್ರೀಲಂಕಾ ನಂತರ ಮೊಹಾಲಿಯಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿಯೂ ಕೂಡ 222 ರನ್‌ಗಳ ಹೀನಾಯ ಇನ್ನಿಂಗ್ಸ್ ಸೋಲನ್ನು ಅನುಭವಿಸಿತು. ಇತ್ತ ರೋಹಿತ್ ಶರ್ಮಾ ಪೂರ್ಣಾವಧಿ ನಾಯಕನಾದಾಗಿನಿಂದ ಸತತವಾಗಿ ವೈಟ್‌ವಾಷ್ ಸಾಧನೆ ಮಾಡುತ್ತಾ ಬಂದಿರುವ ಟೀಮ್ ಇಂಡಿಯಾ ಸದ್ಯ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ವೈಟ್‌ವಾಷ್ ಸಾಧನೆ ಮಾಡುವ ಸನಿಹದಲ್ಲಿದೆ. ಹೌದು, ಮೊಹಾಲಿಯಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾಗೆ ಮಣ್ಣು ಮುಕ್ಕಿಸಿದ ಟೀಮ್ ಇಂಡಿಯಾ ಕಳೆದ ಶನಿವಾರದಿಂದ ( ಮಾರ್ಚ್ 12 ) ಆರಂಭವಾಗಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಜಯ ಸಾಧಿಸುವತ್ತ ಸಾಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 252 ರನ್‌ಗಳಿಗೆ ಆಲ್ಔಟ್ ಆಯಿತು. ಹಾಗೂ ಶ್ರೀಲಂಕಾ ಮೊದಲನೇ ಇನ್ನಿಂಗ್ಸ್‌ನಲ್ಲಿ 109 ರನ್‌ಗಳಿಗೆ ಆಲ್ಔಟ್ ಆಗುವುದರ ಮೂಲಕ 143 ರನ್‌ಗಳ ಹಿನ್ನಡೆಯನ್ನು ಅನುಭವಿಸಿತು. ಇತ್ತ ಮೊದಲನೇ ಇನ್ನಿಂಗ್ಸ್‌ನಲ್ಲಿ ಸಾಮಾನ್ಯ ಮೊತ್ತ ದಾಖಲಿಸಿದರೂ ಮುನ್ನಡೆಯನ್ನು ಕಾಯ್ದುಕೊಂಡ ಟೀಮ್ ಇಂಡಿಯಾ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವ ಮೂಲಕ ಎರಡನೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡು ಶ್ರೀಲಂಕಾಗೆ ಗೆಲ್ಲಲು 446 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ. ಇತ್ತ ಎರಡನೇ ದಿನದಾಟದಂತ್ಯಕ್ಕೆ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಕಳೆದುಕೊಂಡಿರುವ ಶ್ರೀಲಂಕಾ 28 ರನ್ ಗಳಿಸಿದ್ದು ಗೆಲ್ಲಲು ಇನ್ನೂ 419 ರನ್ ಬಾರಿಸಲೇಬೇಕಾದ ಅನಿವಾರ್ಯತೆಯಲ್ಲಿದೆ.
ಹೀಗೆ ಈ ಪಂದ್ಯದ ಎರಡನೇ ದಿನದಾಟ ಮುಗಿಯುವ ಸನಿಹದಲ್ಲಿ ಮೈದಾನಕ್ಕೆ ಏಕಾಏಕಿ ನುಗ್ಗಿದ ನಾಲ್ವರು ವಿರಾಟ್ ಕೊಹ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಬಳಿ ಸೆಲ್ಫಿಗಾಗಿ ಮನವಿ ಮಾಡಿಕೊಂಡರು. ಈ ಮನವಿಗೆ ಒಪ್ಪಿದ ವಿರಾಟ್ ಕೊಹ್ಲಿ ಆ ಅಭಿಮಾನಿಗಳಿಗೆ ಫೋಟೋ ತೆಗೆದುಕೊಳ್ಳುವ ಅವಕಾಶ ನೀಡಿದರು. ಅಭಿಮಾನಿಗಳು ವಿರಾಟ್ ಕೊಹ್ಲಿಗಾಗಿ ಮೈದಾನಕ್ಕೆ ನುಗ್ಗಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಯಿತು. ಆದರೆ ಈ ಘಟನೆ ನಡೆದ ಕೆಲವೇ ಸಮಯದಲ್ಲಿ ಆ ನಾಲ್ವರು ಯುವಕರನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ನಿಯಮಕ್ಕೆ ವಿರುದ್ಧವಾಗಿ ಮೈದಾನಕ್ಕೆ ಅಕ್ರಮ ಪ್ರವೇಶ ಮಾಡಿದ ಕಾರಣಕ್ಕಾಗಿ ಬಂಧಿಸಿದ್ದಾರೆ. ಇನ್ನು ಬಂಧಿತರ ಪೈಕಿ ಓರ್ವ ಕಲಬುರಗಿ ಮೂಲದ ಯುವಕ ಹಾಗೂ ಮೂವರು ಬೆಂಗಳೂರಿನವರು ಎನ್ನಲಾಗುತ್ತಿದೆ.
ಭಾರತ ಪ್ಲೇಯಿಂಗ್ ಇಲೆವೆನ್: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ (ನಾಯಕ), ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ದಿಮುತ್ ಕರುಣಾರತ್ನೆ (ನಾಯಕ), ಲಹಿರು ತಿರಿಮನ್ನೆ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಸುರಂಗ ಲಕ್ಮಲ್, ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications