ಭಾರತ vs ಶ್ರೀಲಂಕಾ: ಎರಡು ತಿಂಗಳ ಬಳಿಕ ಮೈದಾನದಲ್ಲಿ ಅಬ್ಬರಿಸಲು ಜಡ್ಡು ಸಜ್ಜು

ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಗುರುವಾರದಿಂದ ಆರಂಭವಾಗಲಿದೆ. ಭಾರತ ಹಾಗೂ ಶ್ರೀಲಂಕಾ ಎರಡು ತಂಡಗಳು ಕೂಡ ಈ ಪಂದ್ಯದಲ್ಲಿ ಆಡಲು ಭರ್ಜರಿಯಾಗಿ ಸಿದ್ಧತೆ ನಡೆಸಿದೆ. ಇನ್ನು ಈ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ಆಲ್‌ರೌಂಡರ್ ರವೀಂದ್ರ ಜಡೇಜಾ ಕಮ್‌ಬ್ಯಾಕ್ ಮಾಡಿದ್ದು ಎರಡು ತಿಂಗಳ ಬಳಿಕ ಮತ್ತೆ ತಂಡದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ರವೀಂದ್ರ ಜಡೇಜಾ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
"ಭಾರತ ತಂಡಕ್ಕೆ ಮರಳಿರುವುದು ನಿಜಕ್ಕೂ ಉತ್ತಮವಾದ ಅನುಭವ ನೀಡುತ್ತದೆ. ನಾನು ನಿಜಕ್ಕೂ ಕೂಡ ಟಿ20 ಹಾಗೂ ಟೆಸ್ಟ್ ಸರಣಿಯಲ್ಲಿ ಆಡಲು ಎದುರು ನೋಡುತ್ತಿದ್ದೇನೆ" ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ. ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಈ ಪ್ರತಿಕ್ರಿಯೆ ನೀಡಿದ್ದಾರೆ. "ಎರಡು ತಿಂಗಳ ಬಳಿಕ ನಾನು ತಂಡಕ್ಕೆ ಮರಳುತ್ತಿರುವುದು ಬಹಳ ಸಂತಸ ತಂದಿದೆ. ನಾನೀಗ ಭಾರತದ ಪರ ಆಡುತ್ತಿದ್ದೇನೆ" ಎಂದು ತಂಡಕ್ಕೆ ಮರಳುತ್ತಿರುವ ಬಗ್ಗೆ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಗಾಯದಿಂದ ತಂಡಕ್ಕೆ ಮರಳಲು ನಡೆಸಿದ ಸಿದ್ಧತೆಯ ಬಗ್ಗೆಯೂ ಜಡೇಜಾ ಪ್ರತಿಕ್ರಿಯಿಸಿದ್ದಾರೆ. "ನಾನು ನನ್ನ ರೀಹ್ಯಾಬ್ ಪೂರ್ಣಗೊಳಿಸಲು ಉತ್ಸುಕನಾಗಿದ್ದೆ. ಎನ್‌ಸಿಎನಲ್ಲಿ ನನ್ನ ಫಿಟ್‌ನೆಸ್ ಮರಳಿ ಪಡೆಯಲು ಸಾಕಷ್ಟು ಶ್ರಮಪಟ್ಟಿದ್ದೇನೆ. ಈ ಸರಣಿಗಾಗಿ ನಾನು ಕಾಯುತ್ತಿದ್ದೆ. ಸುಮಾರು ಎರಡು ತಿಂಗಳ ನಂತರ ನಾನು ಭಾರತದ ಪರವಾಗಿ ಆಡಲು ಸಿದ್ಧನಾಗಿದ್ದೇನೆ" ಎಂದು ರವೀಂದ್ರ ಜಡೇಜಾ ಹೇಳಿಕೆ ನೀಡಿದ್ದಾರೆ.
"ನಾನು ಬೆಂಗಳೂರಿನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಅಭ್ಯಾಸವನ್ನು ನಡೆಸಿದ್ದೇನೆ. ಹಾಗಾಗಿ ನಾನು ಆಟದ ಸಂಪರ್ಕದಲ್ಲಿದ್ದೇನೆ. ಇವತ್ತು ನಾನು ನನ್ನ ಮೊದಲ ಅಭ್ಯಾಸ ಸೆಶನ್‌ನಲ್ಲಿ ಆಡಿದ ಬಳಿಕ ಬಹಳ ಉತ್ತಮ ಅನಯಭವ ಹೊಂದಿದ್ದೇನೆ" ಎಂದು ರವೀಂದ್ರ ಜಡೇಜಾ ಪ್ರತಿಕ್ರಿಯಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದ ರವೀಂದ್ರ ಜಡೇಜಾ ಆ ಸರಣಿಯಲ್ಲಿ ಗಾಯಗೊಂಡಿದ್ದರು. ಹೀಗಾಗಿ ನಂತರದ ಎರಡು ಸರಣಿಯಿಂದ ಜಡ್ಡು ಹೊರಗುಳಿದಿದ್ದರು. ದಕ್ಷಿಣ ಆಪ್ರಿಕಾ ಪ್ರವಾಸ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಭಾರತದಲ್ಲಿ ನಡೆದ ವೈಟ್‌ಬಾಲ್ ಸರಣಿಯಲ್ಲಿ ರವೀಂದ್ರ ಜಡೇಜಾ ಸಂಪೂರ್ಣವಾಗಿ ಹೊರಗುಳಿದಿದ್ದರು.
ಇನ್ನು ಈ ಸರಣಿಯಲ್ಲಿ ರವೀಂದ್ರ ಜಡೇಜಾ ಜೊತೆಗೆ ಜಸ್ಪ್ರೀತ್ ಬೂಮ್ರಾ ಕೂಡ ಕಮ್‌ಬ್ಯಾಕ್ ಮಾಡಿದ್ದಾರೆ. ಇನ್ನು ಭಾರತ ಹಾಗೂ ಶ್ರೀಲಂಕಾ ಎರಡು ತಂಡಗಳು ಕೂಡ ಈ ಸರಣಿಯಲ್ಲಿ ಕೆಲ ಪ್ರಮುಖ ಆಟಗಾರರ ಸೇವೆಯಿಂದ ವಂಚಿತವಾಗಲಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್‌ಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಿದ್ದರೆ ದೀಪಕ್ ಚಾಹರ್, ಸೂರ್ಯಕುಮಾರ್ ಯಾದವ್ ಗಾಯದ ಕಾರಣದಿಂದ ಸರಣಿಯಿಂದ ಹೊರಬಿದ್ದಿದ್ದಾರೆ. ಕೆಎಲ್ ರಾಹುಲ್ ಕೂಡ ಈ ಸರಣಿಗೆ ಅಲಭ್ಯವಾಗಿದ್ದಾರೆ. ಇತ್ತ ಶ್ರೀಲಂಕಾ ತಂಡದ ಪ್ರಮುಖ ಆಟಗಾರ ವನಿಂದು ಹಸರಂಗ ಕೋವಿಡ್‌ನಿಂದ ಸಂಪೂರ್ಣ ಚೇತರಿಕೆ ಕಾಣದ ಕಾರಣ ಸಂಪೂರ್ಣ ಟಿ20 ಸರಣಿಗೆ ಅಲಭ್ಯವಾಗಲಿದ್ದಾರೆ.
ಭಾರತ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅವೇಶ್ ಖಾನ್
ಶ್ರೀಲಂಕಾ ಸ್ಕ್ವಾಡ್: ದಸುನ್ ಶನಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ (ಉಪನಾಯಕ), ದಿನೇಶ್ ಚಾಂಡಿಮಾಲ್, ದನುಷ್ಕ ಗುಣತಿಲಕ, ಕಮಿಲ್ ಮಿಶ್ರಾ, ಜನಿತ್ ಲಿಯಾನಗೆ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಮಹೇಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಲಹಿರು ಎಫ್ ಕುಮಾರ, ಪ್ರವೀಣ್ ಜಯವಿಕ್ರಮ, ಆಶಿಯನ್ ಡೇನಿಯಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications