ದ್ವಿಶತಕದ ಹೊಸ್ತಿಲಲ್ಲಿ ರೋಹಿತ್ ಡಿಕ್ಲೇರ್ ಘೋಷಿಸಲು ಇವರೇ ಕಾರಣ: ಸ್ವತಃ ಸತ್ಯ ಬಾಯ್ಬಿಟ್ಟ ಜಡೇಜಾ!

ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ ಟಿ ಟ್ವೆಂಟಿ ಸರಣಿ ಹಾಗೂ ಟೆಸ್ಟ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಮೊದಲಿಗೆ ಟೀಮ್ ಇಂಡಿಯಾ ವಿರುದ್ದದ ೩ ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸಿದ ಶ್ರೀಲಂಕಾ ಎಲ್ಲಾ ಪಂದ್ಯಗಳಲ್ಲಿಯೂ ಸೋಲುವುದರ ಮೂಲಕ ವೈಟ್ ವಾಷ್ ಮುಖಭಂಗಕ್ಕೆ ಒಳಗಾಯಿತು. ಹೀಗೆ ಟಿ ಟ್ವೆಂಟಿ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿ ಮುಖಭಂಗಕ್ಕೊಳಗಾಗಿರುವ ಶ್ರೀಲಂಕಾ ಸದ್ಯ ಟೀಮ್ ಇಂಡಿಯಾ ವಿರುದ್ಧ ೨ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದೆ.
ಇತ್ತಂಡಗಳ ನಡುವಿನ ೨ ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಮಾರ್ಚ್ ೪ರಂದು ಆರಂಭವಾಗಿದ್ದು, ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಷಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿದ್ದು, ಮೊದಲ ಇನ್ನಿಂಗ್ಸಿನಲ್ಲಿ ೮ ವಿಕೆಟ್ ನಷ್ಟಕ್ಕೆ ೫೭೪ ರನ್ ಗಳಿಸಿತು. ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರರು ಮತ್ತು ಮೇಲಿನ ಕ್ರಮಾಂಕದ ದಾಂಡಿಗರು ಸಾಮಾನ್ಯ ಪ್ರದರ್ಶನ ನೀಡಿದರೆ, ವಿಕೆಟ್ ಕೀಪರ್ ರಿಷಭ್ ಪಂತ್ ೯೬ ರನ್ ಗಳಿಸಿದರು ಹಾಗೂ ರವೀಂದ್ರ ಜಡೇಜಾ ಅಜೇಯ ೧೭೫ ರನ್ ಗಳಿಸಿ ಅಬ್ಬರಿಸಿದರು. ಹೀಗೆ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಾ ೧೭೦ರ ಗಡಿದಾಟಿದ ನಂತರ ಪ್ರತಿಯೊಬ್ಬ ಪ್ರೇಕ್ಷಕನ ಚಿತ್ತವೂ ಜಡೇಜಾ ದ್ವಿಶತಕ ಬಾರಿಸಿ ದಾಖಲೆ ಬರೆಯಲಿದ್ದಾರೆ ಎನ್ನುವತ್ತ ಇತ್ತು. ಆದರೆ, ರವೀಂದ್ರ ಜಡೇಜಾ ೧೭೫ ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ ಡಿಕ್ಲೇರ್ ಘೋಷಿಸಿದ್ದು ಎಲ್ಲರಲ್ಲೂ ಆಶ್ಚರ್ಯವನ್ನು ಮೂಡಿಸಿತ್ತು.
ಆಲ್ ರೌಂಡರ್ ಆಟಗಾರನೋರ್ವ ದ್ವಿಶತಕ ಬಾರಿಸಿ ದಾಖಲೆ ನಿರ್ಮಿಸಬಹುದಾದ ಹಂತದಲ್ಲಿ ರೋಹಿತ್ ಶರ್ಮಾ ಈ ರೀತಿ ನಿರ್ಧಾರ ಮಾಡಿದ್ದು ಸರಿಯಲ್ಲ ಎಂಬ ವಿರೋಧಗಳು ವ್ಯಕ್ತವಾಗತೊಡಗಿದವು. ಹಾಗೂ ಕೋಚ್ ರಾಹುಲ್ ದ್ರಾವಿಡ್ ಆದರೂ ರವೀಂದ್ರ ಜಡೇಜಾ ದ್ವಿಶತಕ ಬಾರಿಸಲು ಸೂಚಿಸಬೇಕಿತ್ತು ಎಂದು ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕಿಡಿಕಾರಿದರು. ಅದರಲ್ಲಿಯೂ ಈ ಹಿಂದೆ ಸಚಿನ್ ತೆಂಡೂಲ್ಕರ್ ಕೂಡ ದ್ವಿಶತಕದ ಹೊಸ್ತಿಲಲ್ಲಿದ್ದಾಗ ಆ ಸಮಯದ ನಾಯಕನಾಗಿದ್ದಾಗಲೂ ರಾಹುಲ್ ದ್ರಾವಿಡ್ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದರು ಎಂದು ನೆಟ್ಟಿಗರು ಹಳೆಯ ಘಟನೆಯನ್ನು ಕೆದಕಿ ಅಸಮಾಧಾನ ಹೊರಹಾಕಿದರು. ಆದರೆ, ರವೀಂದ್ರ ಜಡೇಜಾ ದ್ವಿಶತಕದ ಹೊಸ್ತಿಲಲ್ಲಿದ್ದಾಗ ರೋಹಿತ್ ಶರ್ಮಾ ಡಿಕ್ಲೇರ್ ಘೋಷಿಸಲು ಕಾರಣವೇನೆಂಬುದನ್ನು ಮಾತ್ರ ಯಾರೂ ಬಹಿರಂಗಪಡಿಸಿರಲಿಲ್ಲ. ಈ ಕುರಿತಾಗಿ ಎರಡನೇ ದಿನದಾಟ ಮುಕ್ತಾಯಗೊಂಡ ನಂತರ ಮಾತನಾಡಿರುವ ರವೀಂದ್ರ ಜಡೇಜಾ ರೋಹಿತ್ ಶರ್ಮಾ ಈ ರೀತಿ ಡಿಕ್ಲೇರ್ ಘೋಷಿಸಿದ್ದೇಕೆ ಎಂಬುದನ್ನು ಈ ಕೆಳಕಂಡಂತೆ ಬಹಿರಂಗಪಡಿಸಿದ್ದಾರೆ.

ರೋಹಿತ್ ಡಿಕ್ಲೇರ್ ಘೋಷಿಸಿದ್ದರ ಹಿಂದಿನ ಕಾರಣ
ಡಿಕ್ಲೇರ್ ಕುರಿತು ಮಾತನಾಡಿರುವ ರವೀಂದ್ರ ಜಡೇಜಾ ಡಿಕ್ಲೇರ್ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೇ ತಾನು ಎಂಬ ಹೇಳಿಕೆಯನ್ನು ನೀಡಿದ್ದಾರೆ. ತಾನು ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಚೆಂಡು ಬೌನ್ಸ್ ಆಗಲು ಶುರುವಾಯಿತು ಎಂದಿರುವ ರವೀಂದ್ರ ಜಡೇಜಾ ಅದೇ ಸಮಯದಲ್ಲಿ ಶ್ರೀಲಂಕಾ ಆಟಗಾರರು ತೀವ್ರ ದಣಿದಿದ್ದರು ಹೀಗಾಗಿ ಡಿಕ್ಲೇರ್ ತೆಗೆದುಕೊಳ್ಳಲು ಅದೇ ಸರಿಯಾದ ಸಮಯ ಎಂದು ತಾನೇ ಡಿಕ್ಲೇರ್ ತೆಗೆದುಕೊಳ್ಳುವಂತೆ ಸ್ವತಃ ಸಲಹೆ ನೀಡಿದೆ ಎಂದಿದ್ದಾರೆ. ತಾನು ದ್ವಿಶತಕ ಬಾರಿಸಿದ್ದರೆ ಮುಂದಿನ ವಿರಾಮ ಆಗಮಿಸಿ ಶ್ರೀಲಂಕಾ ಆಟಗಾರರು ಸುಧಾರಿಸಿಕೊಳ್ಳುತ್ತಿದ್ದರು, ಹೀಗಾಗಿ ದಣಿದಿದ್ದ ಅವರಿಗೆ ವಿಶ್ರಾಂತಿಯ ಅವಕಾಶ ನೀಡದೇ ಕೂಡಲೇ ಬ್ಯಾಟಿಂಗ್ ನೀಡಿದರೆ ಬೇಗನೇ ವಿಕೆಟ್ ಪಡೆಯಬಹುದು ಎಂಬುದು ರವೀಂದ್ರ ಜಡೇಜಾ ಅವರ ಮುಂದಾಲೋಚನೆಯಾಗಿತ್ತು ಹಾಗೂ ಇದೇ ಕಾರಣಕ್ಕೆ ಅವರು ಡಿಕ್ಲೇರ್ ತೆಗೆದುಕೊಳ್ಳುವ ಸಲಹೆಯನ್ನು ಸಲಹೆ ನೀಡಿದ್ದರು.

ರೋಹಿತ್ ದ್ವಿಶತಕ ಬಾರಿಸಿ ಎಂದಿದ್ದರು
ಇನ್ನೂ ಮುಂದುವರೆದು ಈ ಕುರಿತು ಮಾತನಾಡಿರುವ ರವೀಂದ್ರ ಜಡೇಜಾ ಕುಲ್ದೀಪ್ ಯಾದವ್ ಬ್ಯಾಟಿಂಗ್ ಮಾಡಲು ಬಂದಾಗ ರೋಹಿತ್ ಶರ್ಮಾ ಕುಲ್ದೀಪ್ ಮೂಲಕ ದ್ವಿಶತಕ ಪೂರೈಸು ಎಂಬ ಸಂದೇಶವನ್ನು ಕಳುಹಿಸಿದ್ದರು ಎಂದು ಹೇಳಿಕೆ ನೀಡಿ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರ ವಿರುದ್ಧ ಮಾತನಾಡಿದವರ ಬಾಯಿ ಮುಚ್ಚಿಸಿದ್ದಾರೆ.

ಬೌಲಿಂಗ್ ವಿಭಾಗದಲ್ಲೂ ಜಡೇಜಾ ಅಬ್ಬರ
ಶ್ರೀಲಂಕಾ ವಿರುದ್ದದ ಈ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ ಅಜೇಯ 175 ರನ್ ಬಾರಿಸಿ ಅಬ್ಬರಿಸಿದ ರವೀಂದ್ರ ಜಡೇಜಾ ಬೌಲಿಂಗ್ ಮೂಲಕವೂ ಟೀಮ್ ಇಂಡಿಯಾ ಪಾಲಿನ ಹೀರೋ ಆಗಿದ್ದಾರೆ. 13 ಓವರ್ ಬೌಲಿಂಗ್ ಮಾಡಿರುವ ರವೀಂದ್ರ ಜಡೇಜಾ 4 ಓವರ್ ಮೇಡನ್ ಸಹಿತ 41 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ರವೀಂದ್ರ ಜಡೇಜಾ 5 ವಿಕೆಟ್‍ಗಳ ಗೊಂಚಲನ್ನು ಪಡೆದು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿಯೂ ಟೀಮ್ ಇಂಡಿಯಾಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಸದ್ಯ 400 ರನ್‌ಗಳ ಬೃಹತ್ ಹಿನ್ನಡೆಯನ್ನು ಅನುಭವಿಸಿರುವ ಶ್ರೀಲಂಕಾ ಫಾಲೋಆನ್ ನಿಯಮಕ್ಕೆ ಒಳಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications