
ತವರಿನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಟಿ20 ಮತ್ತು ಏಕದಿನ ಸರಣಿಗೆ ಶೀಘ್ರದಲ್ಲೇ ಭಾರತ ತಂಡವನ್ನು ಆಯ್ಕೆ ಮಾಡಲಿದೆ. ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದ್ದು, ಹಾರ್ದಿಕ್ ಪಾಂಡ್ಯ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಕೆಎಲ್ ರಾಹುಲ್ ಮದುವೆಗಾಗಿ ರಜೆಯಲ್ಲಿ ಇರುವುದರಿಂದ ಅವರು ಕೂಡ ಸರಣಿಗೆ ಲಭ್ಯವಿರುವುದಿಲ್ಲ. ಬಿಸಿಸಿಐ ಇನ್ನೂ ಹೊಸ ಆಯ್ಕೆ ಸಮಿತಿಯನ್ನು ಆಯ್ಕೆ ಮಾಡದ ಕಾರಣ, ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯೇ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಗಾಯಗೊಂಡಿದ್ದ ರೋಹಿತ್ ಶರ್ಮಾ ಟಿ20 ಸರಣಿಯಲ್ಲಿ ಆಡುವುದು ಅನುಮಾನವಾದರೂ, ಜನವರಿ 10 ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಆಡುವ ನಿರೀಕ್ಷೆಯಿದೆ. ಎನ್‌ಸಿಎ ರೋಹಿತ್ ಶರ್ಮಾಗೆ ಬಾಂಗ್ಲಾದೇಶದ ವಿರುದ್ಧದ 2ನೇ ಟೆಸ್ಟ್ ಆಡಲು ಅನುಮತಿ ನೀಡಿದರೂ ಕೂಡ, ತಂಡದ ವೈದ್ಯಕೀಯ ತಂಡ ಅವರನ್ನು ಎರಡನೇ ಟೆಸ್ಟ್ ಆಡಲು ಅನುಮತಿ ನೀಡಲಿಲ್ಲ.

ಟಿ20 ಮತ್ತು ಏಕದಿನ ಸರಣಿ
ಶ್ರೀಲಂಕಾ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಜನವರಿ 3 ರಂದು ಟಿ20 ಸರಣಿಯ ಮೊದಲನೇ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಜನವರಿ 5ರಂದು 2ನೇ ಟಿ20 ಪಂದ್ಯ ಪುಣೆಯಲ್ಲಿ ನಡೆಯಲಿದ್ದು, ಸರಣಿಯ ಕೊನೆಯ ಪಂದ್ಯ ಜನವರಿ 7 ರಂದು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಜನವರಿ 10 ರಂದು ಏಕದಿನ ಸರಣಿ ಆರಂಭವಾಗಲಿದ್ದು, ಮೊದಲನೇ ಪಂದ್ಯ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಜ. 12 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ 2ನೇ ಪಂದ್ಯ ಮತ್ತು ತಿರುವನಂತಪುರದ ಗ್ರೀನ್‌ಫಿಲ್ಡ್ ಸ್ಟೇಡಿಯಂನಲ್ಲಿ ಜನವರಿ 15 ರಂದು ಅಂತಿಮ ಪಂದ್ಯ ನಡೆಯಲಿದೆ.
ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಹಾರ್ದಿಕ್ ಪಾಂಡ್ಯರನ್ನು ಟಿ20 ತಂಡಕ್ಕೆ ನಾಯಕನಾಗುವಂತೆ ಕೇಳಿಕೊಳ್ಳಲಾಗಿದೆ. ಆದರೆ, ಹಾರ್ದಿಕ್ ಪಾಂಡ್ಯ ಸಮಯ ಕೇಳಿದ್ದು, ಅವರು ಒಪ್ಪಿಗೆ ನೀಡಿದ ನಂತರ ಖಾಯಂ ಆಗಿ ತಂಡದ ಟಿ20 ನಾಯಕರಾಗಿ ಮುಂದುವರೆಯಲಿದ್ದಾರೆ.
ಮುಂದಿನ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ತಯಾರಿ ನಡೆಸುತ್ತಿರುವ ಕಾರಣ, ಏಕದಿನ ತಂಡದಲ್ಲಿ ಹಿರಿಯ ಆಟಗಾರರು ಆಡುವ ಸಾಧ್ಯತೆ ಇದೆ.