ಭಾರತ vs ಶ್ರೀಲಂಕಾ ದ್ವಿತೀಯ ಟಿ20: ಅಫ್ಘಾನಿಸ್ತಾನದ ಈ ಬೃಹತ್ ದಾಖಲೆಯನ್ನು ಸರಿದೂಗಿಸುತ್ತಾ ಭಾರತ?

ಇತ್ತೀಚೆಗಷ್ಟೇ ಭಾರತ ಪ್ರವಾಸವನ್ನು ಕೈಗೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಗಳ ಎಲ್ಲಾ ಪಂದ್ಯಗಳನ್ನು ಗೆಲ್ಲುವುದರ ಮೂಲಕ ಎರಡೂ ಸರಣಿಗಳಲ್ಲಿಯೂ ವೈಟ್ ವಾಷ್ ಸಾಧನೆ ಮಾಡಿದ ಟೀಮ್ ಇಂಡಿಯಾ ಇದೀಗ ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ವಿರುದ್ಧ ಸೆಣಸಾಟವನ್ನು ನಡೆಸುತ್ತಿದೆ. ಹೌದು, ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಮೊದಲಿಗೆ ಇತ್ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಆರಂಭವಾಗಿದ್ದು ಫೆಬ್ರವರಿ 24ರಂದು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 62 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ 1-0 ಮುನ್ನಡೆಯನ್ನು ಕಾಯ್ದುಕೊಂಡಿದೆ. ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ತನ್ನ ಗೆಲುವಿನ ನಾಗಲೋಟವನ್ನು ಮುಂದುವರೆಸಿದೆ.
ಹೀಗೆ ಸರಣಿಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿರುವ ಟೀಮ್ ಇಂಡಿಯಾ ಇಂದು ( ಫೆಬ್ರವರಿ 26 ) ಶ್ರೀಲಂಕಾ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಸೆಣಸಾಟವನ್ನು ನಡೆಸಲಿದೆ. ಸಂಜೆ 7 ಗಂಟೆಗೆ ಧರ್ಮಶಾಲಾದ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಈ ಪಂದ್ಯವನ್ನು ಕೂಡ ಗೆಲ್ಲುವುದರ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ಯೋಜನೆಯಲ್ಲಿ ಟೀಮ್ ಇಂಡಿಯಾವಿದ್ದರೆ, ಅತ್ತ ಶ್ರೀಲಂಕಾ ಈ ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ತವಕದಲ್ಲಿದೆ. ಹೀಗೆ ಶ್ರೀಲಂಕಾ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿರುವ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ವಿವಿಧ ಮೈಲಿಗಲ್ಲುಗಳು ಸೃಷ್ಟಿಯಾಗುವ ಸಾಧ್ಯತೆಗಳಿದ್ದು, ಅವುಗಳ ವಿವರ ಈ ಕೆಳಕಂಡಂತಿದೆ.

6 ಮೈಲಿಗಲ್ಲುಗಳ ಸೃಷ್ಟಿಸುವತ್ತ ರೋಹಿತ್ ಶರ್ಮಾ ಚಿತ್ತ
ಭಾರತ ಟಿ ಟ್ವೆಂಟಿ, ಟೆಸ್ಟ್ ಹಾಗೂ ಏಕದಿನ ತಂಡಗಳ ಪೂರ್ಣಾವಧಿ ನಾಯಕನಾಗಿ ನೇಮಕಗೊಂಡಿರುವ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯದ ಮೂಲಕ ನಿರ್ಮಿಸಬಹುದಾದ 6 ಮೈಲಿಗಲ್ಲುಗಳ ವಿವರ ಈ ಕೆಳಕಂಡಂತಿದೆ
1. ರೋಹಿತ್ ಶರ್ಮಾ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 292 ಬೌಂಡರಿಗಳನ್ನು ಬಾರಿಸಿದ್ದು, 300 ಟಿ ಟ್ವೆಂಟಿ ಬೌಂಡರಿಗಳನ್ನು ಪೂರೈಸಲು ಈ ಪಂದ್ಯದಲ್ಲಿ 8 ಬೌಂಡರಿ ಬಾರಿಸಬೇಕಾದ ಅಗತ್ಯತೆ ಇದೆ.
2. ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಇದುವರೆಗೂ 49 ಕ್ಯಾಚ್‌ಗಳನ್ನು ಹಿಡಿದಿದ್ದು, ಈ ಪಂದ್ಯದಲ್ಲಿ 1 ಕ್ಯಾಚ್ ಹಿಡಿದರೆ 50 ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ಯಾಚ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
3. ರೋಹಿತ್ ಶರ್ಮಾ 123 ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದು, ಶ್ರೀಲಂಕಾ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯದ ಮೂಲಕ 124 ಪಂದ್ಯಗಳನ್ನು ಪೂರೈಸಲಿದ್ದಾರೆ. ಈ ಮೂಲಕ ಅತಿ ಹೆಚ್ಚು ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಶೋಯೆಬ್ ಮಲಿಕ್ ಜೊತೆ ರೋಹಿತ್ ಶರ್ಮಾ ಅಗ್ರಸ್ಥಾನವನ್ನು ಹಂಚಿಕೊಳ್ಳಲಿದ್ದಾರೆ.
4. ತವರಿನಲ್ಲಿ ನಾಯಕನಾಗಿ ಒಟ್ಟು 15 ಅಂತರರಾಷ್ಟ್ರೀಯ ಟಿ ಟ್ವೆಂಟಿಗಳನ್ನು ಗೆದ್ದು ಇಯಾನ್ ಮಾರ್ಗನ್ ಮತ್ತು ಕೇನ್ ವಿಲಿಯಮ್ಸನ್ ಜತೆ ಅಗ್ರಸ್ಥಾನವನ್ನು ಹಂಚಿಕೊಂಡಿರುವ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಈ ಟಿ ಟ್ವೆಂಟಿ ಪಂದ್ಯವನ್ನು ಗೆದ್ದರೆ ನಾಯಕನಾಗಿ ಅತಿ ಹೆಚ್ಚು ಟಿ ಟ್ವೆಂಟಿ ಪಂದ್ಯಗಳನ್ನು ಗೆದ್ದ ಮೊದಲಿಗ ಎನಿಸಿಕೊಳ್ಳಲಿದ್ದಾರೆ.
5. ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 292 ಬೌಂಡರಿಗಳನ್ನು ಬಾರಿಸಿರುವ ರೋಹಿತ್ ಶರ್ಮಾ ಈ ಪಂದ್ಯದಲ್ಲಿ 7 ಬೌಂಡರಿಗಳನ್ನು ಬಾರಿಸಿದರೆ 298 ಬೌಂಡರಿಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಭಾರತೀಯ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.
6. ನಾಯಕನಾಗಿ ಒಟ್ಟು 981 ಟಿ ಟ್ವೆಂಟಿ ರನ್ ಗಳಿಸಿರುವ ರೋಹಿತ್ ಶರ್ಮಾ 1000 ಅಂತರರಾಷ್ಟ್ರೀಯ ಟಿ ಟ್ವೆಂಟಿ ರನ್ ಪೂರೈಸಲು 19 ರನ್ ಬಾರಿಸಬೇಕಾದ ಅಗತ್ಯವಿದೆ.

ಇತರೆ ಆಟಗಾರರ ಮೈಲಿಗಲ್ಲುಗಳು
ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಇತರೆ ಆಟಗಾರರು ನಿರ್ಮಿಸಬಹುದಾದ ಮೈಲಿಗಲ್ಲುಗಳ ವಿವರ ಈ ಕೆಳಕಂಡಂತಿದೆ.
* 45 ಟಿ ಟ್ವೆಂಟಿ ವಿಕೆಟ್ ಪಡೆದಿರುವ ಶ್ರೀಲಂಕಾದ ದುಷ್ಮಂತ ಚಮೀರ ಈ ಪಂದ್ಯದಲ್ಲಿ 5 ವಿಕೆಟ್ ಪಡೆದರೆ 50 ವಿಕೆಟ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* 57 ಅಂತರರಾಷ್ಟ್ರೀಯ ಟಿ ಟ್ವೆಂಟಿ ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ಈ ಪಂದ್ಯದಲ್ಲಿ 5 ವಿಕೆಟ್ ಪಡೆದರೆ 61 ಅಂತರರಾಷ್ಟ್ರೀಯ ಟಿ ಟ್ವೆಂಟಿ ವಿಕೆಟ್ ಪಡೆದಿರುವ ರವಿಚಂದ್ರನ್ ಅಶ್ವಿನ್ ಅವರನ್ನು ಹಿಂದಿಕ್ಕಿ ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲಿದ್ದಾರೆ.
* 47 ಟಿ ಟ್ವೆಂಟಿ ವಿಕೆಟ್ ಪಡೆದಿರುವ ರವೀಂದ್ರ ಜಡೇಜಾ 3 ವಿಕೆಟ್ ಪಡೆದರೆ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 50 ವಿಕೆಟ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಅಫ್ಘಾನಿಸ್ತಾನದ ಬೃಹತ್ ದಾಖಲೆ ಸರಿದೂಗಿಸುತ್ತಾ ಭಾರತ?
ಈಗಾಗಲೇ ಸತತವಾಗಿ 10 ಟಿ ಟ್ವೆಂಟಿ ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಈ ಟಿ ಟ್ವೆಂಟಿ ಪಂದ್ಯದಲ್ಲಿ ಜಯ ಸಾಧಿಸಿದರೆ ಸತತವಾಗಿ 11 ಟಿ ಟ್ವೆಂಟಿ ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿ ಅಫ್ಘಾನಿಸ್ತಾನದ ಜೊತೆ ಈ ದಾಖಲೆಯನ್ನು ಹಂಚಿಕೊಳ್ಳಲಿದೆ. ಹೌದು, ಅಫ್ಘಾನಿಸ್ತಾನ ಸತತವಾಗಿ 11 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನು ಜಯ ಗಳಿಸಿದ ದಾಖಲೆಯನ್ನು ಹೊಂದಿದೆ. ಹಾಗೂ ಅಫ್ಘಾನಿಸ್ತಾನ ಮಾಡಿರುವ ಈ ದಾಖಲೆ ಟಿ ಟ್ವೆಂಟಿ ಇತಿಹಾಸದಲ್ಲಿ ಅತಿ ಹೆಚ್ಚು ಜಯ ಸಾಧಿಸಿರುವ ತಂಡಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಅಫ್ಘಾನಿಸ್ತಾನ ಹಾಗೂ ರೊಮಾನಿಯಾ ತಂಡಗಳು ಸತತವಾಗಿ 12 ಟಿ ಟ್ವೆಂಟಿ ಪಂದ್ಯಗಳನ್ನು ಜಯಗಳಿಸುವುದರ ಮೂಲಕ ಸತತವಾಗಿ ಅತಿ ಹೆಚ್ಚು ಟಿ ಟ್ವೆಂಟಿ ಪಂದ್ಯ ಗೆದ್ದಿರುವ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications