
ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಅಂತ್ಯವಾಗಿದ್ದು ಭಾರತ ಮತ್ತೊಂದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ವಶಕ್ಕೆ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದ್ದು ಅಹರ್ನಿಶಿಯಾಗಿ ಸಾಗಿದ ಪಂದ್ಯದಲ್ಲಿ ಭಾರತ 238 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಇದಕ್ಕೂ ಮುನ್ನ ಮೊಹಾಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಕೂಡ ಭಾರತ ಅಮೋಘ ಗೆಲುವು ಸಾಧಿಸಿತ್ತು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ಕ್ಲೀನ್‌ಸ್ವೀಪ್ ಮಾಡಿ ಸರಣಿಯನ್ನು ವಶಕ್ಕೆ ಪಡೆದುಕೊಂಡ ನಂತರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಪಿಂಕ್ ಬಾಲ್ ಟೆಸ್ಟ್‌ಗೆ ಪ್ರೇಕ್ಷಕರು ಪೂರ್ಣ ಪ್ರಮಾಣದಲ್ಲಿ ಹಾಜರಾಗಿದ್ದು ಗೆಲುವಿನ ಸಂತಸವನ್ನು ಇಮ್ಮಡಿಗೊಳಿಸಿದೆ ಎಂದಿ ಟೀಮ್ ಇಂಡಿಯಾ ನಾಯಕ. ಪಿಂಕ್ ಬಾಲ್ ಟೆಸ್ಟ್ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ ಎಂದಿರುವ ಶರ್ಮಾ ಟೀಮ್ ಇಂಡಿಯಾ ಪರವಾಗಿ ಅದ್ಭುತ ಪ್ರದರ್ಶನ ನೀಡಿರುವ ಶ್ರೇಯಸ್ ಐಯ್ಯರ್, ರಿಷಭ್ ಪಂತ್, ಆರ್ ಅಶ್ವಿನ್ ಹಾಗೂ ರವೀಂದ್ರ ಜಡೃಜಾ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
"ಇದು ಅದ್ಭುತವಾದ ಪಂದ್ಯವಾಗಿತ್ತು. ನಾನು ಈ ಗೆಲುವನ್ನು ವೈಯಕ್ತಿಕವಾಗಿ ಹಾಗೂ ತಂಡವಾಗಿ ಬಹಳಷ್ಟು ಆನಂದಿಸಿದ್ದೇನೆ. ನಾವು ಇಲ್ಲಿ ಸಾಧಿಸಬೇಕು ಎಂದುಕೊಂಡಿದ್ದ ಹಲವು ಅಂಶಗಳಿದ್ದವು. ಈ ಗೆಲುವಿನೊಮದಿಗೆ ಅದನ್ನು ಸಾಧಿಸಿದ್ದೇವೆ ಎಂದು ಭಾವಿಸುತ್ತೇನೆ" ಎಂದಿದ್ದಾರೆ ರೋಹಿತ್ ಶರ್ಮಾ. ಇನ್ನು ರವೀಂದ್ರ ಜಡೇಜಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿನ ಪ್ರಬುದ್ಧತೆಯ ಬಗ್ಗೆ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಬ್ಯಾಟರ್ ಆಗಿ ಜಡೇಜಾ ಅವರ ಬೆಳವಣಿಗೆಯನ್ನು ನಾವು ಗಮನಿಸುತ್ತಿದ್ದೇವೆ. ಅವರು ಪಂದ್ಯದಿಂದ ಪಂದ್ಯಕ್ಕೆ ಉತ್ತಮವಾಗಿ ಬೆಳವಣಿಗೆ ಸಾಧಿಸುತ್ತಿದ್ದಾರೆ. 7ನೇ ಕ್ರಮಾಂಕದಲ್ಲಿ ಅವರು ಬಲಿಷ್ಠ ಬ್ಯಾಟರ್ ಆಗಿ ರೂಪುಗೊಂಡಿದ್ದು ಆತನ ಫೀಲ್ಡಿಂಗ್ ಹಾಗೂ ಬೌಲಿಂಗ್ ಕೂಡ ತಮಡಕ್ಕೆ ಹೆಚ್ಚಿನ ಬಲವನ್ನು ನೀಡುತ್ತದೆ. ಹೀಗಾಗಿ ಆತನೋರ್ವ ಸಂಪೂರ್ಣ ಪ್ಯಾಕೇಜ್ ಇದ್ದಂತೆ ಎಂದು ರೋಹಿತ್ ಶರ್ಮಾ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಇನ್ನು ಸರಣಿಯಲ್ಲಿ ಸಾಧಿಸಿದ ಸಕಾರಾತ್ಮಕ ಸಂಗತಿಗಳ ಬಗ್ಗೆ ರೋಹಿತ್ ಶರ್ಮಾ ಬೆಳಕು ಚೆಲ್ಲಿದರು. "ಟಿ20 ಸರಣಿಯಲ್ಲಿ ಕಂಡುಕೊಂಡಿದ್ದ ಅದ್ಭುತ ಫಾರ್ಮ್‌ಅನ್ನು ಶ್ರೇಯಸ್ ಐಯ್ಯರ್ ಟೆಸ್ಟ್ ಸರಣಿಯಲ್ಲಿಯೂ ಮುಂದುವರಿಸಿದ್ದಾರೆ. ಅಲ್ಲಿ ಅವರನ್ನು ಒಮದು ಬಾರಿಯೂ ಔಟ್ ಮಾಡಲು ಸಾಧ್ಯವಾಗಿರಲಿಲ್ಲ. ಆ ಫಾರ್ಮ್‌ಅನ್ನು ಟೆಸ್ಟ್ ಸರಣಿಯಲ್ಲಿಯೂ ಮುಂದುವರಿಸಿದರು. ಆತ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆಯಂತಾ ದೊಡ್ಡ ಆಟಗಾರರ ಸ್ಥಾನವನ್ನು ತುಂಬುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿತ್ತು. ಆತನಿಂದ ನಿಜಕ್ಕೂ ಉತ್ತಮವಾದ ಪ್ರದರ್ಶನ ಬಂದಿದೆ" ಎಂದಿದ್ದಾರೆ ರೋಹಿತ್ ಶರ್ಮಾ.
ಬೆಂಗಳೂರಿನಲ್ಲಿ ನಡೆದ ಅಹರ್ನಿಶಿ ಪಂದ್ಯದಲ್ಲಿ ಭಾರತ ಭರ್ಜರಿ 238 ರನ್‌ಗಳ ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೂಡ ಭಾರತ ಭರ್ಜರಿ ಗೆಲುವು ಸಾಧಿಸಿತ್ತು.
ಬೌಲರ್‌ಗಳಿಗೆ ನೆರವು ನೀಡುವ ಪಿಚ್‌ನಲ್ಲಿ ಭಾರತದ ಶ್ರೇಯಸ್ ಐಯ್ಯರ್ ಎರಡೂ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕದ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಇನ್ನು ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬೂಮ್ರಾ ಹಾಗೂ ಆರ್ ಅಶ್ವಿನ್ ಅಮೋಘ ಆಟವನ್ನು ಪ್ರದರ್ಶಿಸಿದ್ದಾರೆ. ಇನ್ನು ಶ್ರೀಲಂಕಾ ಪರವಾಗಿ ನಾಯಕ ದಿಮುತ್ ಕರುಣರತ್ನೆ ಭರ್ಜರಿ ಶತಕ ಸಿಡಿಸಿ ಏಕಾಂಗಿ ಹೋರಾಟವನ್ನು ನಡೆಸಿದರೂ ಶ್ರೀಲಂಕಾವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.