
ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ನಡೆಯುತ್ತಿದ್ದು ಭಾರತ ಅದ್ಭುತ ಪ್ರದರ್ಶನ ನೀಡುವ ಮೂಲಕ ಉತ್ತಮ ಸ್ಥಾನದಲ್ಲಿದೆ. ರವೀಂದ್ರ ಜಡೇಜಾ ಅವರ ಅಜೇಯ 175 ರನ್ ಹಾಗೂ ರಿಷಬ್ ಪಂತ್ ಸಿಡಿಸಿದ 96 ರನ್‌ಗಳ ಕೊಡಯಗೆಯ ಕಾರಣದಿಂದಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 574 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಶ್ರೀಲಮಕಾ ಮುಂದೆ ಕಠಿಣ ಸವಾಲನ್ನು ರೋಹಿತ್ ಪಡೆ ಮುಂದಿಟ್ಟಿದೆ. ಇನ್ನು ಭಾರತದ ಇನ್ನಿಂಗ್ಸ್ ಮುಗಿಸಿ ಟೀಮ್ ಇಂಡಿಯಾ ಆಟಗಾರರು ಫೀಲ್ಡಿಂಗ್‌ಗೆ ಇಳಿಯುವ ವೇಳೆ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಫೀಲ್ಡಿಂಗ್‌ಗೆ ಇಳಿಯುವ ಸಂದರ್ಭದಲ್ಲಿ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಸೇರಿ ವಿರಾಟ್ ಕೊಹ್ಲಿಗೆ ಗಾರ್ಡ್ ಆಫ್ ಹಾನರ್ ಗೌರವ ಸಲ್ಲಿಸಿದ್ದಾರೆ. ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿಯುವ ಸಂದರ್ಭದಲ್ಲಿ ಎರಡೂ ಬದಿಯಲ್ಲಿ ನಿಂತು ಕೊಹ್ಲಿಯನ್ನು ಮೈದಾನಕ್ಕೆ ಬರಮಾಡಿಕೊಳ್ಳುವ ಮೂಲಕ ದಿಗ್ಗಜ ಕ್ರಿಕೆಟಿಗನಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನಗುತ್ತಲೇ ಕೈ ಬೀಸುವ ಮೂಲಕ ಸಹ ಆಟಗಾರರ ಗೌರವಕ್ಕೆ ಕೊಹ್ಲಿ ಧನ್ಯವಾದ ಸಲ್ಲಿಸದ್ದಾರೆ.
ಇನ್ನು 100ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಲಯವನ್ನು ಪ್ರದರ್ಶಿಸಿದರು. ಉತ್ತಮ ಮೊತ್ತಗಳಿಸುವ ಸೂಚನೆ ನೀಡಿದ್ದ ಕೊಹ್ಲಿ 45 ರನ್‌ಗಳಾಗುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ದೇನಿಯಾ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಇನ್ನಿಂಗ್ಸ್ ಅಂತ್ಯಗೊಳಿಸಿದರು ಕೊಹ್ಲಿ.
ಇನ್ನು ಈ ಪಂದ್ಯದ ಆರಂಭದಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸಿದೆ. ತಂಡದ ಕೋಚ್ ರಾಹುಲ್ ದ್ರಾವಿಡ್ ತಂಡದ ವಿಶೇಷ ಕ್ಯಾಪ್ ನೀಡುವ ಮೂಲಕ ಕೊಹ್ಲಿಯನ್ನು ಅಭಿನಂದಿಸಿದರು ಹಾಗೂ ಕೊಹ್ಲಿ ನಡೆದು ಬಂದ ಹಾದಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಮೈದಾನದಲ್ಲಿ ಹಾಜರಿದ್ದರು.
ಇನ್ನು ವಿರಾಟ್ ಕೊಹ್ಲಿ 2019ರ ನವೆಂಬರ್ ತಿಂಗಳ ಬಳಿಕ ಶತಕ ಗಳಿಸಲು ಸಾಧ್ಯವಾಗಿಲ್ಲ. ಪ್ರತಿಬಾಋಇ ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದಾಗಲೂ ಕೊಹ್ಲಿ ಶತಕಗಳಿಸುವ ವಿಶ್ವಾಸ ಮೂಡಿಸುತ್ತಲೇ ಇದ್ದಾರೆ. 2020ರ ಆರಂಭದಿಂದ ಈವರೆಗೆ ವಿರಾಟ್ ಕೊಹ್ಲಿ 805 ರನ್‌ಗಳಿಸಿದ್ದಾರೆ. ಇದರಲ್ಲಿ 6 ಅರ್ಧ ಶತಕಗಳು ಸೇರಿದೆ. ಆದರೆ ಶತಕಗಳಿಸಲು ಕೊಹ್ಲಿಗೆ ಸಾಧ್ಯವಾಗಿಲ್ಲ. ಇನ್ನು ಈ ಅವಧಿಯಲ್ಲಿ ವಿರಾಟ್ ಕೊಹ್ಲಿಯ ಸರಾಸರಿ 28.75ಕ್ಕೆ ಇಳಿದಿದ್ದು ಇದು ಕೊಹ್ಲಿಯ ಒಟ್ಟಾರೆ ಸರಾಸರಿಗಿಂತ ಭಾರೀ ಕಡಿಮೆಯಾಗಿದೆ. ಕೊಹ್ಲಿಯ ಒಟ್ಟಾರೆ ಸರಾಸರಿ ಈಗಲೂ 50 ದಾಟಿದೆ.
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಬೆಂಚ್: ಮೊಹಮ್ಮದ್ ಸಿರಾಜ್, ಶುಬ್ಮನ್ ಗಿಲ್, ಉಮೇಶ್ ಯಾದವ್, ಕುಲದೀಪ್ ಯಾದವ್, ಪ್ರಿಯಾಂಕ್ ಪಾಂಚಾಲ್, ಶ್ರೀಕರ್ ಭರತ್, ಸೌರಭ್ ಕುಮಾರ್
ಶ್ರೀಲಂಕಾ ಪ್ಲೇಯಿಂಗ್ XI: ದಿಮುತ್ ಕರುಣರತ್ನೆ(ನಾಯಕ), ಲಹಿರು ತಿರಿಮನ್ನೆ, ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ಸುರಂಗ ಲಕ್ಮಲ್, ವಿಶ್ವ ಫೆರ್ನಾಂಡೊ, ಲಸಿತ್ ಎಂಬುಲ್ಡೆನಿಯಾ, ಲಹಿರು ಕುಮಾರ
ಬೆಂಚ್: ಪ್ರವೀಣ್ ಜಯವಿಕ್ರಮ, ದಿನೇಶ್ ಚಂಡಿಮಲ್, ಚಾಮಿಕಾ ಕರುಣಾರತ್ನೆ, ಜೆಫ್ರಿ ವಾಂಡರ್ಸೆ, ದುಷ್ಮಂತ ಚಮೀರಾ