ಪ್ರವಾಸಿ ಭಾರತ ತಂಡದ ವಿರುದ್ಧ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಶ್ರೀಲಂಕಾ ತನ್ನ 16 ಸದಸ್ಯರ ಬಲಿಷ್ಠ ತಂಡವನ್ನು ಮಂಗಳವಾರ, ಜುಲೈ 30ರಂದು ಪ್ರಕಟಿಸಿದೆ.
ಮೂರು ಪಂದ್ಯಗಳ ಏಕದಿನ ಸರಣಿಯು ಶುಕ್ರವಾರ, ಆಗಸ್ಟ್ 2ರಿಂದ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೂರು ಪಂದ್ಯಗಳ ಟಿ20 ಸರಣಿಯನ್ನು 0-3 ಅಂತರದಲ್ಲಿ ಸೋತ ನಂತರ ಏಕದಿನ ಸರಣಿಯಲ್ಲಿ ಶ್ರೀಲಂಕಾ ಪುನರಾಗಮನದ ಗುರಿಯನ್ನು ಹೊಂದಿದೆ.

ಶ್ರೀಲಂಕಾ ತಂಡದ ಪ್ರಕಟದ ನಂತರ ಬಂದ ದೊಡ್ಡ ಚರ್ಚಿತ ವಿಷಯವೆಂದರೆ, ಇತ್ತೀಚಿಗೆ ಟಿ20 ತಂಡದ ಹೊಸ ನಾಯಕನಾಗಿ ನೇಮಕವಾಗಿದ್ದ ಚರಿತ್ ಅಸಲಂಕಾ ಅವರು ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಏಕದಿನ ತಂಡದ ನಾಯಕರಾಗಿ ನೇಮಕಗೊಂಡಿದ್ದ ಕುಸಾಲ್ ಮೆಂಡಿಸ್ ಬದಲಿಗೆ ಚರಿತ್ ಅಸಲಂಕಾ ಆಯ್ಕೆಯಾಗಿದ್ದಾರೆ. ವಿಕೆಟ್‌ಕೀಪರ್-ಬ್ಯಾಟರ್ ಕುಸಾಲ್ ಮೆಂಡಿಸ್ ನಾಯಕತ್ವದಡಿಯಲ್ಲಿ, ಶ್ರೀಲಂಕಾ ತಂಡ ಮಾರ್ಚ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿಯನ್ನು ಸೋತಿತ್ತು.

ಇತ್ತೀಚೆಗಷ್ಟೇ ವನಿಂದು ಹಸರಂಗ ಅವರ ಬದಲಿಗೆ ಟಿ20 ನಾಯಕರಾಗಿ ಬಡ್ತಿ ಪಡೆದಿದ್ದ ಚರಿತ್ ಅಸಲಂಕಾ, ಇದೀಗ ಸಂಪೂರ್ಣ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಶ್ರೀಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ.
ಇನ್ನು ಆರಂಭಿಕ ಬ್ಯಾಟರ್ ನಿಶಾನ್ ಮದುಷ್ಕಾ ಅವರು ಟೆಸ್ಟ್ ಪಂದ್ಯಗಳಲ್ಲಿನ ಪ್ರಭಾವಶಾಲಿ ಪ್ರದರ್ಶನದ ನಂತರ, ತಮ್ಮ ಚೊಚ್ಚಲ ಏಕದಿನ ಕರೆ ಸ್ವೀಕರಿಸಿದ್ದಾರೆ. ಟೆಸ್ಟ್‌ನಲ್ಲಿ ಇಲ್ಲಿಯವರೆಗೆ ಆಡಿದ ಎಂಟು ಪಂದ್ಯಗಳಿಂದ 42ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಆದಾಗ್ಯೂ, ಪಾಥುಮ್ ನಿಸ್ಸಾಂಕ ಮತ್ತು ಕುಸಾಲ್ ಮೆಂಡಿಸ್ ಶ್ರೀಲಂಕಾ ತಂಡದ ಮೊದಲ ಆಯ್ಕೆಯ ಆರಂಭಿಕರಾಗಿ ಉಳಿಯುವ ಸಾಧ್ಯತೆಯಿದ್ದು, 24 ವರ್ಷದ ಆಟಗಾರ ನಿಶಾನ್ ಮದುಷ್ಕಾ ಬ್ಯಾಕ್‌ಅಪ್ ಓಪನರ್ ಆಗಿರಲಿದ್ದಾರೆ.
ಅಲ್ಲದೆ, ಬಾಂಗ್ಲಾದೇಶದ ವಿರುದ್ಧದ ಕೊನೆಯ ಸರಣಿಯನ್ನು ತಪ್ಪಿಸಿಕೊಂಡ ನಂತರ, ಮತೀಶ ಪತಿರಾನ ಅವರು ಏಕದಿನ ತಂಡಕ್ಕೆ ಹಿಂದಿರುಗಿದ್ದಾರೆ. ಭಾರತ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ನುವಾನ್ ತುಷಾರ ಮತ್ತು ದುಷ್ಮಂತ ಚಮೀರಾ ಕೂಡ ಏಕದಿನ ತಂಡ ಸೇರ್ಪಡೆಗೊಂಡಿದ್ದಾರೆ.
ವೇಗಿ ಅಸಿತ ಫರ್ನಾಂಡೋ ಅವರು ತಮ್ಮ ಆಯ್ಕೆಯೊಂದಿಗೆ ಇತ್ತೀಚಿನ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ಪ್ರತಿಫಲ ಪಡೆದಿದ್ದಾರೆ.
ಮತ್ತೊಂದೆಡೆ, ಈ ಏಕದಿನ ಸರಣಿಯು ಭಾರತ ತಂಡಕ್ಕೆ ಪ್ರಾಮುಖ್ಯತೆ ಹೊಂದಿದೆ. ಇದು 2025ರ ಚಾಂಪಿಯನ್ಸ್ ಟ್ರೋಫಿ ಮುಂದಿರುವಾಗ ಆಡಲು ಸಜ್ಜಾಗಿರುವ ಆರು ಏಕದಿನ ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಒಳಗೊಂಡಿರುತ್ತದೆ.
ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು 2023ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೃದಯವಿದ್ರಾವಕ ಸೋಲು ಎದುರಿಸಿದ ನಂತರ, ಮೊದಲ ಬಾರಿಗೆ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಬಿಸಿಸಿಐ ಕೇಂದ್ರ ಒಪ್ಪಂದವನ್ನು ಕಳೆದುಕೊಂಡಿದ್ದ ಶ್ರೇಯಸ್ ಅಯ್ಯರ್ ಭಾರತ ಏಕದಿನ ತಂಡದಲ್ಲಿ ಪುನರಾಗಮನವನ್ನು ಈ ಸರಣಿಯು ಗುರುತಿಸುತ್ತದೆ. ಅಲ್ಲದೆ, ಯುವ ಬ್ಯಾಟರ್ ರಿಯಾನ್ ಪರಾಗ್ ತಮ್ಮ ಚೊಚ್ಚಲ ಏಕದಿನ ಕರೆ ಗಳಿಸಿದ್ದಾರೆ ಮತ್ತು ಶಿವಂ ದುಬೆ ಐದು ವರ್ಷಗಳ ನಂತರ ಏಕದಿನ ಪಂದ್ಯಗಳಿಗೆ ಪುನರಾಗಮನ ಮಾಡಿದ್ದಾರೆ.
ಚರಿತ್ ಅಸಲಂಕಾ (ನಾಯಕ), ಪಾಥುಮ್ ನಿಸ್ಸಾಂಕ, ಅವಿಷ್ಕಾ ಫೆರ್ನಾಂಡೋ, ಕುಸಾಲ್ ಮೆಂಡಿಸ್, ಸದೀರ ಸಮರವಿಕ್ರಮ, ಕಮಿಂದು ಮೆಂಡಿಸ್, ಜನಿತ್ ಲಿಯಾನಗೆ, ನಿಶಾನ್ ಮದುಷ್ಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಚಾಮಿಕ ಕರುಣಾರತ್ನ, ಮಹೀಶ್ ತೀಕ್ಷಣ, ಅಕಿಲ ದನಂಜಯ, ದಿಲ್ಶಾನ್ ಮಧುಶಂಕ, ಮಥೀಶ ಪತಿರಾನ, ಅಸಿತ ಫರ್ನಾಂಡೋ.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಶ್‌ದೀಪ್ ಸಿಂಗ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.