ವಿಶ್ವಕಪ್ ವರ್ಷದ ಆರಂಭದಲ್ಲೇ 2 ಶತಕ: ಭರ್ಜರಿ ಫಾರ್ಮ್ ಬಗ್ಗೆ ಕೊಹ್ಲಿ ಹೇಳಿದ್ದಿಷ್ಟು!

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿಯೂ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಮೋಘ ಶತಕ ಸಿಡಿಸಿದ್ದಾರೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಎರಡನೇ ಶತಕ ಸಿಡಿಸಿ ಮಿಂಚಿದರು ಕೊಹ್ಲಿ. ಈ ಮೂಲಕ ಹಲವು ದಾಖಲೆ ಬರೆದುಕೊಂಡಿರುವ ವಿರಾಟ್ ಕೊಹ್ಲಿ ಸಂತಸಗೊಂಡಿದ್ದಾರೆ. ಅದರಲ್ಲೂ ಇದು ಏಕದಿನ ವಿಶ್ವಕಪ್ ವರ್ಷವಾಗಿದ್ದು ಈ ವರ್ಷದ ಆರಂಭ ಇಷ್ಟು ಅದ್ಭುತವಾಗಿರುವ ಕಾರಣ ವಿಶ್ವ ಕ್ರಿಕೆಟ್‌ನಲ್ಲಿ ಮತ್ತಷ್ಟು ದಾಖಲೆಗಳು ಧ್ವಂಸವಾಗುವುದು ನಿಶ್ಚಿತ. ಈ ಪ್ರದರ್ಶನದ ಬಳಿಕ ಕೊಹ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಬಹುತೇಕ ಮೂರು ವರ್ಷಗಳ ಕಾಲ ಶತಕ ಸಿಡಿಸದೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ ಕಳೆದ ಏಷ್ಯಾ ಕಪ್‌ನಲ್ಲಿ ಟಿ20 ಮಾದರಿಯಲ್ಲಿ ತಮ್ಮ ಶತಕ ಸಿಡಿಸುವ ಮೂಲಕ ಶತಕದ ಬರ ನೀಗಿಸಿಕೊಂಡರು ಅದಾದ ಬಳಿಕ ತಮ್ಮ ಸಹಜ ಫಾರ್ಮ್‌ಗೆ ಮರಳಿದ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿಯೂ ಅಬ್ಬರದ ಪ್ರದರ್ಶನ ನೀಡಿದ್ದರು. ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಮ್ಮ ಫಾರ್ಮ್ ಮತ್ತಷ್ಟು ಗಟ್ಟಿಗೊಳಿಸಿರುವ ಕೊಹ್ಲಿ ಮೂರು ಪಂದ್ಯಗಳಲ್ಲಿ ಎರಡನೇ ಶತಕ ಸಿಡಿಸಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ ಬರೊಬ್ಬರಿ 283 ರನ್‌ಗಳನ್ನು ಕಲೆ ಹಾಕಿದ್ದಾರೆ.

ಸಂತಸ ಹಂಚಿಕೊಂಡ ವಿರಾಟ್ ಕೊಹ್ಲಿ
ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ 2022ರ ಮೊದಲಾರ್ಧದಲ್ಲಿ ಇಷ್ಟು ಸರಾಗವಾಗಿ ಬ್ಯಾಟಿಂಗ್ ನಡೆಸಲು ಸಾಧ್ಯವಾಗಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಈ ವರ್ಷ ವಿಶ್ವಕಪ್ ವರ್ಷವಾಗಿದ್ದು ಇಂಥಾ ಸಂದರ್ಭದಲ್ಲಿ ಇಷ್ಟು ಉತ್ತಮವಾದ ಆರಂಭ ಪಡೆಯಲು ಸಾಧ್ಯವಾಗಿರುವುದು ಬಹಳ ಖುಷಿ ನೀಡಿದೆ ಎಂದಿದ್ದಾರೆ ವಿರಾಟ್ ಕೊಹ್ಲಿ.

ಉತ್ತಮ ಆರಂಭ ಎಂದ ಕೊಹ್ಲಿ
"ಇದು ನಿಜಕ್ಕೂ ಶ್ರೇಷ್ಠವಾದ ಆರಂಭ. ಈ ವರ್ಷ ಶತಕದೊಂದಿಗೆ ಆರಂಭಿಸಿದ್ದು ಎರಡು ಶತಕ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿರುವುದು ಉತ್ತಮವಾದ ಆರಂಭವಾಗಿದೆ" ಎಂದು ವಿರಾಟ್ ಕೊಹ್ಲಿ ಬಿಸಿಸಿಐ ಟಿವಿಗೆ ಶುಬ್ಮನ್ ಗಿಲ್ ಜೊತೆಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಕೂಡ ಭರ್ಜರಿ ಶತಕ ಸಿಡಿಸಿದ್ದು ವಿರಾಟ್ ಕೊಹ್ಲಿ ಜೊತೆಗೆ ದ್ವಿಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ಆತ್ಮವಿಶ್ವಾಸ ಹೆಚ್ಚಾಗಿದೆ: ಕೊಹ್ಲಿ
"ವಿಶ್ವಕಪ್‌ನ ವರ್ಷವಾಗಿರುವ ಕಾರಣ ಇಷ್ಟು ಉತ್ತಮವಾದ ಆರಂಭವನ್ನು ಪಡೆಯಲು ಸಾಧ್ಯವಾಗಿರುವುದು ಬಹಳ ಖುಷಿ ನೀಡುತ್ತದೆ. ಇದನ್ನು ನಾನು ಸ್ಥಿರವಾಗಿ ಮಾಡಬಹುದು ಎಂಬ ವಿಶ್ವಾಸವಿದೆ. ನಾನು ಇಂಥಾ ಆರಂಭವನ್ನು ಪಡೆದಾಗ ಹಾಗೂ ಇಷ್ಟು ಆತ್ಮವಿಶ್ವಾಸದಿಂದ ಇದ್ದಾಗ ಅಂದುಕೊಂಡಂತೆಯೇ ನಡೆಯುತ್ತದೆ. ತಂಡದ ದೃಷ್ಟಿಯಿಂದ ಇಂಥಾ ಆರಂಭ ಪಡೆದಿರುವ ಕಾರಣ ತಂಡವಾಗಿ ಉತ್ತಮ ಪ್ರದರ್ಶನ ನೀಡಬಹುದು ಎಂದು ಸಂತಸ ನೀಡುತ್ತದೆ" ಎಂದಿದ್ದಾರೆ ವಿರಾಟ್ ಕೊಹ್ಲಿ.

ದಾಖಲೆಯ ಗೆಲುವು ಸಾಧಿಸಿದ ಭಾರತ
ಶ್ರೀಲಂಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಶ್ವದಾಖಲೆಯ ಅಂತರದ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಹಾಗೂ ಶುಬ್ಮನ್ ಗಿಲ್ ಭರ್ಜರಿ ಶತಕದ ನೆರವಿನಿಂದ 390 ರನ್‌ಗಳನ್ನು ಗಳಿಸಿತ್ತು. ಇದನ್ನು ಬೆನ್ನಟ್ಟಲು ಬಂದ ಶ್ರೀಲಂಕಾ ತಂಡಕ್ಕೆ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಆಘಾತ ನೀಡಿದರು. ಇದರ ಪರಿಣಾಮವಾಗಿ ಶ್ರೀಲಂಕಾ ಕೇವಲ 73 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿದೆ. 317 ರನ್‌ಗಳ ಅಂತರದಿಂದ ಟೀಮ್ ಇಂಡಿಯಾ ಗೆಲುವು ಸಾಧಿಸಿದ್ದು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಸಾಧಿಸಿದ ಅತ್ಯಂತ ಬೃಹತ್ ಗೆಲುವು ಎಂಬ ವಿಶ್ವದಾಖಲೆ ತನ್ನದಾಗಿಸಿಕೊಂಡಿದೆ. ಇನ್ನು ವಿರಾಟ್ ಕೊಹ್ಲಿ ತವರಿನಲ್ಲಿ 21ನೇ ಶತಕ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications