IND vs SL : ಆಯ್ಕೆದಾರರಿಂದ ಮತ್ತೊಮ್ಮೆ ಪೃಥ್ವಿ ಶಾ ಕಡೆಗಣನೆ, ಭಾವನಾತ್ಮಕ ವಿಡಿಯೋ ಹಂಚಿಕೊಂಡ ಕ್ರಿಕೆಟಿಗ

ಪ್ರತಿ ಬಾರಿ ಯಾವುದಾದರೂ ದ್ವಿಪಕ್ಷೀಯ ಸರಣಿಗೆ ಅಥವಾ ಪ್ರಮುಖ ಟೂರ್ನಿಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದಾಗ ಒಂದಿಲ್ಲೊಂದು ವಿವಾದ ಆಗುತ್ತಿದೆ. ಹಲವು ಪ್ರತಿಭಾವಂತ ಕ್ರಿಕೆಟಿಗರನ್ನು ಕಡೆಗಣಿಸಲಾಗಿದೆಯೆಂದೊ ಅಥವಾ ಫಾರ್ಮ್‌ನಲ್ಲಿ ಇಲ್ಲದ ಆಟಗಾರರಿಗೆ ಮಣೆ ಹಾಕಲಾಗಿದೆಯೆಂದು ಆಯ್ಕೆದಾರರನ್ನು ಟೀಕಿಸಲಾಗುತ್ತದೆ.
ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಟಿ20 ತಂಡಕ್ಕೆ ಹಿರಿಯರಿಗೆ ವಿಶ್ರಾಂತಿ ನೀಡಿ ಯುವ ಕ್ರಿಕೆಟಿಗರಿಗೆ ಅವಕಾಶ ನೀಡಲಾಗಿದೆ. ಏಕದಿನ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ಈ ಬಾರಿಯೂ ಪ್ರತಿಭಾವಂತ ಕ್ರಿಕೆಟಿಗ ಪೃಥ್ವಿ ಶಾ ಮತ್ತೊಮ್ಮೆ ಆಯ್ಕೆದಾರರಿಂದ ಕಡೆಗಣಿಸಲ್ಪಟ್ಟಿದ್ದಾರೆ.
2021ರ ಜುಲೈನಲ್ಲಿ ಪೃಥ್ವಿ ಶಾ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಆಡಿದ್ದರು, ಅಂದಿನಿಂದ ಅವರು ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ. ಈ ಬಾರಿಯೂ ತಾವು ತಂಡಕ್ಕೆ ಆಯ್ಕೆಯಾಗಿಲ್ಲ ಎಂದು ತಿಳಿದ ನಂತರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯ ವೇಳೆಯಲ್ಲಿ ಕೂಡ ತಂಡಕ್ಕೆ ಆಯ್ಕೆಯಾಗದ ಸಂಧರ್ಭದಲ್ಲಿ ಪೃಥ್ವಿ ಶಾ ಸಾಯಿ ಬಾಬಾ ಭಾವಚಿತ್ರವನ್ನು ಪೋಸ್ಟ್ ಮಾಡಿದ್ದರು. ಈ ಬಾರಿ ಅದಕ್ಕಿಂತ ವಿಭಿನ್ನವಾಗಿ ವಿಡಿಯೋವನ್ನು ಹಂಚಿಕೊಂಡಿದ್ದು, ತಮ್ಮ ನೋವು ಹೊರಹಾಕಿದ್ದಾರೆ.

ವಿಡಿಯೋ ಹಂಚಿಕೊಂಡ ಪೃಥ್ವಿ ಶಾ
ಗೌರ್ ಗೋಪಾಲ್ ದಾಸ್ ಪ್ರಭು ಹೇಳಿದ ವೀಡಿಯೊದಲ್ಲಿ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. "ಯಾರಾದರೂ ನಗುತ್ತಿದ್ದರೆ ಅವರು ತಮ್ಮ ಜೀವನದಲ್ಲಿ ಸಂತೋಷವಾಗಿದ್ದಾರೆ ಎಂದು ಅರ್ಥವಲ್ಲ. ಸಂತೋಷವು ಎಂದಿಗೂ ಸ್ವಯಂಚಾಲಿತವಾಗಿರುವುದಿಲ್ಲ, ಸಮಸ್ಯೆಗಳು ಸ್ವಯಂಚಾಲಿತವಾಗಿರುತ್ತವೆ. ಸಕಾರಾತ್ಮಕತೆ, ಪ್ರೀತಿ ಮತ್ತು ಸಂತೋಷವನ್ನು ಆರಿಸಿಕೊಳ್ಳುತ್ತಾರೆ. ಕೋಪ, ದ್ವೇಷ ಮತ್ತು ಋಣಾತ್ಮಕತೆ ಮನುಷ್ಯರೊಳಗೆ ತಾನಾಗಿಯೇ ಬರುತ್ತದೆ." ಎಂದು ಹೇಳುವ ವಿಡಿಯೋ ಹಂಚಿಕೊಂಡಿದ್ದಾರೆ.
ಟಿ20 ಅಥವಾ ಏಕದಿನ ತಂಡದಲ್ಲಿ ಪೃಥ್ವಿ ಶಾ ಅವಕಾಶ ಪಡೆಯುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅವರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಜುಲೈ 2021 ರಲ್ಲಿ, ಅವರು ಶ್ರೀಲಂಕಾ ವಿರುದ್ಧ ತಮ್ಮ ಕೊನೆಯ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದರು.
IND vs SL: ಕೆಎಲ್ ರಾಹುಲ್ ಸ್ಥಾನಕ್ಕೆ ಅಪಾಯ? ಬೇರೆ ಆಟಗಾರನಿಗೆ ಉಪನಾಯಕನ ಸ್ಥಾನ

ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ
ಪೃಥ್ವಿ ಶಾ 2022ರ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಏಳು ಇನ್ನಿಂಗ್ಸ್‌ನಲ್ಲಿ 217 ರನ್ ಗಳಿಸಿದರು. ಎರಡು ಅರ್ಧಶತಕಗಳನ್ನು ಸಿಡಿಸುವ ಮೂಲಕ ಅವರು ಮಿಂಚಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಂಡದ ನಾಯಕತ್ವ ವಹಿಸಿದ್ದ ಪೃಥ್ವಿ ಶಾ 10 ಪಂದ್ಯಗಳಲ್ಲಿ ಒಂದು ಶತಕ ಮತ್ತು ಅರ್ಧಶತಕ ಸೇರಿದಂತೆ 332 ರನ್ ಗಳಿಸಿ ಮಿಂಚಿದರು.
ಪೃಥ್ವಿ ಶಾ ಪ್ರಸ್ತುತ 2022-23ರ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ನಾಲ್ಕು ಇನ್ನಿಂಗ್ಸ್‌ಗಳಲ್ಲಿ 10.50 ಸರಾಸರಿಯಲ್ಲಿ ಕೇವಲ 42 ರನ್ ಗಳಿಸಿರುವ ಅವರು, ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ಇದೇ ಕಾರಣಕ್ಕೆ ಅವಕಾಶ ಸಿಗುತ್ತಿಲ್ಲ
ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದರೂ ಸಹ, ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್‌ಗೆ ಅವಕಾಶ ನೀಡುತ್ತಿರುವುದರಿಂದ ಪೃಥ್ವಿ ಶಾಗೆ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಅದರಲ್ಲೂ ಫಾರ್ಮ್‌ನಲ್ಲಿರುವ ಶುಭಮನ್ ಗಿಲ್ ತಂಡಕ್ಕೆ ಮೊದಲ ಆಯ್ಕೆಯಾಗಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರುತುರಾಜ್ ಗಾಯಕ್ವಾಡ್‌ರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಿರುವುದರಿಂದ ಪೃಥ್ವಿ ಶಾರನ್ನು ಕಡೆಗಣಿಸಲಾಗಿದೆ.
ಭಾರತ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ ಮತ್ತು ಮುಖೇಶ್ ಕುಮಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications