ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡವು ಹೊಸ ಯುಗವನ್ನು ಎದುರು ನೋಡುತ್ತಿದ್ದಂತೆಯೇ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅಲಭ್ಯತೆಯ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಟೀಮ್ ಇಂಡಿಯಾದ ಕ್ಯಾಲೆಂಡರ್‌ನಲ್ಲಿ ಹೆಚ್ಚಿನ ಏಕದಿನ ಪಂದ್ಯಗಳನ್ನು ನಿಗದಿಪಡಿಸದ ಕಾರಣ, ಈ ಮೂವರು ಏಕದಿನ ಸರಣಿಗೆ ಲಭ್ಯವಾಗಬೇಕೆಂದು ಗೌತಮ್ ಗಂಭೀರ್ ಬಯಸಿದ್ದಾರೆ ಎಂದು ವರದಿಯಾಗಿದೆ.

ಭಾರತ ತಂಡದೊಂದಿಗೆ ಗೌತಮ್ ಗಂಭೀರ್ ತನ್ನ ಮೊದಲ ಸಭೆಯನ್ನು ಕರೆದ ನಂತರ, ನಾಯಕ ರೋಹಿತ್ ಶರ್ಮಾ ಮುಂದಿನ ತಿಂಗಳು ಏಕದಿನ ನಿಯೋಜನೆಗಾಗಿ ಶ್ರೀಲಂಕಾದಲ್ಲಿ ತನ್ನ ಸಹ ಆಟಗಾರರನ್ನು ಸೇರಲು ತನ್ನ ವಿಶ್ರಾಂತಿ ರಜೆಯನ್ನು ಮೊಟಕುಗೊಳಿಸಬಹುದು ಎಂದು ವರದಿಯೊಂದು ಹೇಳಿದೆ.
ಕ್ರಿಕ್‌ಬಜ್ ಪ್ರಕಾರ, ಮುಖ್ಯ ಕೋಚ್ ಗೌತಮ್ ಗಂಭೀರ್, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಸಭೆ ನಡೆಸಿದರು. ಈ ವೇಳೆ ಭಾರತದ ಹೊಸ ಮುಖ್ಯ ಕೋಚ್ ಅವರು ತಂಡದ ಬಗ್ಗೆ ತಮ್ಮ ದೃಷ್ಟಿಕೋನ ಮತ್ತು ಅವರು ತಂಡದ ಭಾಗವಾಗಲು ಬಯಸುವ ರೀತಿಯ ಆಟಗಾರರನ್ನು ವಿವರಿಸಿದರು.
ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಭಾರತ ತಂಡವು ಕೇವಲ ಎರಡು ಏಕದಿನ ಸರಣಿ ಒಳಗೊಂಡಿರುವುದರಿಂದ, ಹೆಚ್ಚು ಅಗತ್ಯವಿರುವ ವಿಶ್ರಾಂತಿಗಾಗಿ ಅಮೆರಿಕದಲ್ಲಿರುವ ನಾಯಕ ರೋಹಿತ್ ಶರ್ಮಾ ಏಕದಿನ ಸರಣಿಗಾಗಿ ಶ್ರೀಲಂಕಾಕ್ಕೆ ಹಾರಲು ನಿರ್ಧರಿಸಬಹುದು. ಆದರೆ ರೋಹಿತ್ ಶರ್ಮಾ ಇನ್ನೂ ತಮ್ಮ ಉದ್ದೇಶವನ್ನು ದೃಢಪಡಿಸಿಲ್ಲ.
ರೋಹಿತ್ ಶರ್ಮಾ ದ್ವೀಪ ರಾಷ್ಟ್ರದಲ್ಲಿ ತನ್ನ ಸಹ ಆಟಗಾರರನ್ನು ಸೇರಿಕೊಂಡರೆ, ಅವರು ನಿಸ್ಸಂದೇಹವಾಗಿ ಭಾರತ ಏಕದಿನ ತಂಡದ ನಾಯಕರಾಗುತ್ತಾರೆ. ವಿರಾಟ್ ಕೊಹ್ಲಿ ವಿಶ್ರಾಂತಿಗಾಗಿ ಲಂಡನ್‌ನಲ್ಲಿದ್ದು, ಅವರು ಕೂಡ ತಮ್ಮ ನಿರ್ಧಾರವನ್ನು ಪ್ರಕಟಿಸಿಲ್ಲ.

ಇನ್ನು ರೋಹಿತ್ ಶರ್ಮಾ ಏಕದಿನ ಸರಣಿ ಕಳೆದುಕೊಳ್ಳುವ ಸಂದರ್ಭ ಎದುರಾದರೆ, ಕೆಎಲ್ ರಾಹುಲ್ ಅವರ ಹೆಸರನ್ನು ನಾಯಕನ ಪಾತ್ರಕ್ಕಾಗಿ ರೇಸ್‌ನಲ್ಲಿರುವ ಆಟಗಾರ ಎಂದು ಚರ್ಚಿಸಲಾಗಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಲಭ್ಯತೆಯ ಕುರಿತು, ಈ ಜೋಡಿಯು ಏಕದಿನ ಸರಣಿಗೆ ಅಲಭ್ಯರಾಗುತ್ತಾರೆ ಎಂದು ವರದಿ ಹೇಳಿದೆ, ಮರುಪರಿಶೀಲನೆಯನ್ನು ಸಹ ನಿರೀಕ್ಷಿಸಲಾಗಿಲ್ಲ.
ಭಾರತದ ಸ್ಟಾರ್ ಆಲ್‌ರೌಂಡರ್ ಹಾಗೂ ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಏಕದಿನ ತಂಡದ ನಿಯೋಜನೆಯಲ್ಲಿ ಆಯ್ಕೆಗೆ ಲಭ್ಯವಿರುವುದಿಲ್ಲ ಎಂದು ವರದಿಯಾಗಿದೆ.
ಆದರೆ, ಹಾರ್ದಿಕ್ ಪಾಂಡ್ಯ ಟಿ20 ಸರಣಿಯಲ್ಲಿ ಭಾರತ ತಂಡದೊಂದಿಗೆ ಇರುವ ಸಾಧ್ಯತೆಯಿದೆ. ಆದರೂ ಅವರನ್ನು ತಂಡದ ನಾಯಕ ಎಂದು ಹೆಸರಿಸಲಾಗುತ್ತದೋ ಇಲ್ಲವೋ ಎಂಬುದು ಇನ್ನೂ ದೃಢಪಟ್ಟಿಲ್ಲ.