ಭಾರತ vs ಶ್ರೀಲಂಕಾ ದ್ವಿತೀಯ ಟೆಸ್ಟ್: ಪಂದ್ಯದ ಮಾಹಿತಿ, ಸಂಭಾವ್ಯ ಆಡುವ ಬಳಗ ಮತ್ತು ನೇರಪ್ರಸಾರದ ಮಾಹಿತಿ

ಸದ್ಯ ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳಲ್ಲಿ ಭಾಗವಹಿಸಿದ್ದು, ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ಮುಖಭಂಗಕ್ಕೆ ಒಳಗಾಗಿದೆ. ಇನ್ನು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ಆಯೋಜನೆಯಾಗಿದ್ದು, ಇತ್ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ 222 ರನ್‌ಗಳ ಇನ್ನಿಂಗ್ಸ್ ಸಹಿತ ಭರ್ಜರಿ ಜಯವನ್ನು ಟೀಮ್ ಇಂಡಿಯಾ ಸಾಧಿಸಿತು.
ಇನ್ನು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆದ ಪ್ರಥಮ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿ ಆಡಿದ ನೂರನೇ ಟೆಸ್ಟ್ ಪಂದ್ಯವಾಗಿತ್ತು ಹಾಗೂ ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಿ ಆಡಿದ ಮೊದಲನೇ ಟೆಸ್ಟ್ ಪಂದ್ಯ ಕೂಡ ಇದಾಗಿತ್ತು. ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸುವುದರ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಉತ್ತಮ ಉಡುಗೊರೆಯನ್ನೇ ನೀಡಿತು ಎಂದು ಹೇಳಬಹುದು. ಹೀಗೆ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಸುಲಭವಾಗಿ ಜಯವನ್ನು ಸಾಧಿಸಿದ ಟೀಮ್ ಇಂಡಿಯಾ ಇದೀಗ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿಯೂ ಕೂಡ ಗೆದ್ದು ಈ ಸರಣಿಯಲ್ಲಿಯೂ ಕೂಡ ವೈಟ್ ವಾಶ್ ಬಳಿಯುವ ತವಕದಲ್ಲಿದೆ.
ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ನಡೆದಿದ್ದರೆ, ದ್ವಿತೀಯ ಟೆಸ್ಟ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ. ವಿರಾಟ್ ಕೊಹ್ಲಿಯ ಎರಡನೇ ಮನೆ ಎಂದೇ ಕರೆಯಲ್ಪಡುವ ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿಯ 101ನೇ ಟೆಸ್ಟ್ ಪಂದ್ಯ ಆಯೋಜನೆಯಾಗಿರುವುದು ಕೊಹ್ಲಿ ಅಭಿಮಾನಿಗಳ ಪಾಲಿಗೆ ಸಂತಸದ ವಿಷಯವಾಗಿದ್ದು, ಈ ಪಂದ್ಯ ವೀಕ್ಷಿಸಲು ಶೇ. 100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿರುವುದು ಪಂದ್ಯಕ್ಕೆ ಮತ್ತಷ್ಟು ಮೆರುಗು ತಂದಿದೆ.
ಇನ್ನು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಈ ಪಂದ್ಯ ಹಗಲು ಮತ್ತು ರಾತ್ರಿ ನಡೆಯಲಿರುವ ಪಂದ್ಯವಾಗಿದ್ದು, ಪಿಂಕ್ ಬಾಲ್ ಟೆಸ್ಟ್ ಇದಾಗಿರಲಿದೆ.
ಪಿಚ್ ವರದಿ:
ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ನಡೆಯಲಿರುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲಕರವಾಗಿ ಇರಲಿದ್ದು, ಸ್ಪಿನ್ ಬೌಲರ್‌ಗಳಿಗೆ ಚೂರು ಸಹಕರಿಸಲಿದೆ.
ಸಂಭಾವ್ಯ ಆಡುವ ಬಳಗಗಳು
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಬ್ ಪಂತ್ ( ವಿಕೆಟ್ ಕೀಪರ್ ), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ / ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ
ಶ್ರೀಲಂಕಾ ಸಂಭಾವ್ಯ ತಂಡ: ಲಹಿರು ತಿರಿಮನ್ನೆ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಸುರಂಗ ಲಕ್ಮಲ್, ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ
ನೇರಪ್ರಸಾರದ ಮಾಹಿತಿ: ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಪಂದ್ಯ ಮಾರ್ಚ್ 12ರಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು, ಈ ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ನಲ್ಲಿ ಪ್ರಸಾರವಾಗಲಿದ್ದು, ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲೂ ಈ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications