ಈತ ರಹಾನೆ ಮತ್ತು ಪೂಜಾರ ಸ್ಥಾನ ತುಂಬಬಲ್ಲ ಆಟಗಾರ ಎಂದು ಕೊಂಡಾಡಿದ ರೋಹಿತ್

ಭಾರತ ಪ್ರವಾಸವನ್ನು ಕೈಗೊಂಡ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳಲ್ಲಿ ಸೆಣಸಾಟ ನಡೆಸಿತು. ಇತ್ತಂಡಗಳ ನಡುವೆ ಮೊದಲಿಗೆ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ಎಲ್ಲಾ ಪಂದ್ಯಗಳಲ್ಲಿಯೂ ಜಯ ಸಾಧಿಸಿತು. ಹೀಗೆ ಮೊದಲಿಗೆ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳಲ್ಲೂ ಸೋತು ವೈಟ್‌ವಾಷ್ ಮುಖಭಂಗಕ್ಕೆ ಒಳಗಾದ ಶ್ರೀಲಂಕಾ ನಂತರ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಹೀನಾಯವಾಗಿ ಸೋತಿದೆ. ಹೌದು, ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಮೊದಲಿಗೆ ಧರ್ಮಶಾಲಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 222 ರನ್‌ಗಳ ಬೃಹತ್ ಅಂತರದ ಇನ್ನಿಂಗ್ಸ್ ಗೆಲುವು ಸಾಧಿಸಿದ ಟೀಮ್ ಇಂಡಿಯಾ ನಂತರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಸಹ 238 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಈ ಟೆಸ್ಟ್ ಸರಣಿಯಲ್ಲೂ ವೈಟ್‌ವಾಷ್ ಸಾಧನೆ ಮಾಡಿದೆ.
ಈ ಮೂಲಕ ರೋಹಿತ್ ಶರ್ಮಾ ತಾವು ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಿ ಮುನ್ನಡೆಸಿದ ಮೊದಲ ಟೆಸ್ಟ್ ಸರಣಿಯಲ್ಲಯೇ ವೈಟ್‌ವಾಷ್ ಸಾಧನೆ ಮಾಡಿದ್ದಾರೆ. ಹೀಗೆ ನಾಯಕನಾದ ನಂತರ ರೋಹಿತ್ ಶರ್ಮಾ ಮುನ್ನಡೆಸಿದ ಎಲ್ಲಾ ಸರಣಿಗಳಲ್ಲೂ ಟೀಮ್ ಇಂಡಿಯಾ ಬೃಹತ್ ಯಶಸ್ಸು ಸಾಧಿಸಿದೆ. ಅತ್ತ ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಹರಿಣಗಳ ವಿರುದ್ಧ ಹೀನಾಯ ಸೋಲು ಕಂಡು ಹಿನ್ನಡೆ ಅನುಭವಿಸಿತ್ತು. ಹಾಗೂ ಈ ಸೋಲಿನ ನಂತರವೇ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆಯನ್ನೂ ಸಹ ಸಲ್ಲಿಸಿದರು. ಇನ್ನು ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯರು ಎನಿಸಿಕೊಂಡಿದ್ದ ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ವೃದ್ಧಿಮಾನ್ ಸಹಾ ಹಾಗೂ ಇಶಾಂತ್ ಶರ್ಮಾರನ್ನು ಶ್ರೀಲಂಕಾ ಸರಣಿಯಿಂದ ಕೈಬಿಡಲಾಗಿತ್ತು. ಹೀಗೆ ಕಳಪೆ ಫಾರ್ಮ್ ಕಾರಣದಿಂದಾಗಿ ಈ ಆಟಗಾರರನ್ನು ಟೀಮ್ ಇಂಡಿಯಾ ಹೊರಗಿಟ್ಟಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಇನ್ನು ಕಳಪೆ ಆಟವಾಡುತ್ತಿದ್ದ ಈ ಆಟಗಾರರನ್ನು ಹೊರಹಾಕಿದ್ದು ಒಳ್ಳೆಯ ನಿರ್ಧಾರ ಎಂಬ ಅಭಿಪ್ರಾಯಗಳು ಹೆಚ್ಚಾಗಿ ಕೇಳಿಬಂದವು. ಆದರೆ, ಈ ಅನುಭವಿ ಆಟಗಾರರ ಸ್ಥಾನ ತುಂಬಬಲ್ಲ ಆಟಗಾರರು ಯಾರು ಎಂಬ ಪ್ರಶ್ನೆಯೂ ಸಹ ಎದ್ದಿತ್ತು.
ಇನ್ನು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ ನಂತರ ಮಾತನಾಡಿರುವ ರೋಹಿತ್ ಶರ್ಮಾ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಸ್ಥಾನ ತುಂಬಬಲ್ಲ ಆಟಗಾರನನ್ನು ಕಂಡು ಸಂತಸ ಹೊರಹಾಕಿದ್ದಾರೆ. ಈ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಈತ ರಹಾನೆ, ಪೂಜಾರ ಸ್ಥಾನ ತುಂಬಬಲ್ಲ ಆಟಗಾರ
ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿ ಮಿಂಚಿದ್ದ ಶ್ರೇಯಸ್ ಐಯ್ಯರ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಮಿಂಚಿದ್ದಾರೆ. ಹೀಗೆ ಈ ಪಂದ್ಯಗಳಲ್ಲಿ ಸಾಲು ಸಾಲು ಉತ್ತಮ ಪ್ರದರ್ಶನಗಳನ್ನು ನೀಡಿರುವ ಶ್ರೇಯಸ್ ಐಯ್ಯರ್ ಕುರಿತು ನಾಯಕ ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಟಿ ಟ್ವೆಂಟಿ ಸರಣಿಯಲ್ಲಿ ತಾನು ನೀಡಿದ ಉತ್ತಮ ಪ್ರದರ್ಶನವನ್ನು ಟೆಸ್ಟ್ ಸರಣಿಯಲ್ಲೂ ಮುಂದುವರೆಸಿರುವ ಶ್ರೇಯಸ್ ಐಯ್ಯರ್ ಉತ್ತಮವಾಗಿ ಬಳಸಿಕೊಂಡಿದ್ದಾರೆ. ಅದರಲ್ಲಿಯೂ ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ್ ಪೂಜಾರ ರೀತಿಯ ಆಟಗಾರರ ಬದಲು ಕಣಕ್ಕಿಳಿದ ಐಯ್ಯರ್ ಉತ್ತಮವಾಗಿ ಬ್ಯಾಟ್ ಬೀಸಿದ್ದು ಉತ್ತಮ ಭವಿಷ್ಯ ಹೊಂದಿದ್ದಾರೆ' ಎಂದು ನಾಯಕ ರೋಹಿತ್ ಶರ್ಮಾ ಶ್ರೇಯಸ್ ಐಯ್ಯರ್ ಅವರನ್ನು ಹೊಗಳಿದರು.

ಪಂದ್ಯಶ್ರೇಷ್ಠ ಪಡೆದ ಐಯ್ಯರ್
ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅಷ್ಟೇನೂ ದೊಡ್ಡ ಮೊತ್ತ ಕಲೆಹಾಕದ ಶ್ರೇಯಸ್ ಐಯ್ಯರ್ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 92 ರನ್ ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ 67 ರನ್ ಕಲೆಹಾಕಿ ತಂಡಕ್ಕೆ ನೆರವಾದರು. ಐಯ್ಯರ್ ನೀಡಿದ ಈ ಉತ್ತಮ ಪ್ರದರ್ಶೆನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ. ಇನ್ನು ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯ ಎಲ್ಲಾ ಪಂದ್ಯಗಳಲ್ಲೂ ಅರ್ಧಶತಕ ದಾಖಲಿಸಿದ್ದ ಶ್ರೇಯಸ್ ಐಯ್ಯರ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಆಡುವ ಬಳಗಗಳು
ದ್ವಿತೀಯ ಟೆಸ್ಟ್ ಪಂದ್ಯದ ಭಾರತ ಪ್ಲೇಯಿಂಗ್ ಇಲೆವೆನ್: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ (ನಾಯಕ), ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ದ್ವಿತೀಯ ಟೆಸ್ಟ್ ಪಂದ್ಯದ ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ದಿಮುತ್ ಕರುಣಾರತ್ನೆ (ನಾಯಕ), ಲಹಿರು ತಿರಿಮನ್ನೆ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಸುರಂಗ ಲಕ್ಮಲ್, ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications