100ನೇ ಟೆಸ್ಟ್ ಆಡುತ್ತಿರುವ ವಿರಾಟ್ ಕೊಹ್ಲಿ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ಸೌರವ್ ಗಂಗೂಲಿ!

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಸಕಲ ರೀತಿಯಲ್ಲೂ ಸಜ್ಜಾಗಿದೆ. ಮೊಹಾಲಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯ ಎಂಬ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇತ್ತೀಚೆಗೆ ಬ್ಯಾಟಿಂಗ್‌ನಲ್ಲಿ ಕಳೆಗುಂದಿದಂತೆ ಕಂಡುಬರುತ್ತಿರುವ ವಿರಾಟ್ ಕೊಹ್ಲಿ ಈ ಪಂದ್ಯದ ಮೂಲಕ ಮತ್ತೊಮ್ಮೆ ತಮ್ಮ ಹಿಂದಿನ ವೈಭವಕ್ಕೆ ಮರಳಲಿ ಎಂಬುದು ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯಾಗಿದೆ. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ವಿರಾಟ್ ಕೊಹ್ಲಿ ಬಗ್ಗೆ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದು ಇತ್ತೀಚೆಗೆ ನಡೆದ ಕೆಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಂಗೂಲಿ ಆಡಿರುವ ಮಾತುಗಳು ಸಾಕಷ್ಟು ಕುತೂಹಲ ಮೂಡಿಸಿದೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ನೂರನೇ ಟೆಸ್ಟ್ ಪಂದ್ಯವನ್ನು ಪೂರೈಸಲಿದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರಾಟ್ ಕೊಹ್ಲಿಗೆ ಮನದುಂಬಿ ಹಾರೈಸಿದ್ದಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆಯೂ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು 100ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ದೊಡ್ಡ ಭವಿಷ್ಯವನ್ನು ಕೂಡ ನುಡಿದಿದ್ದಾರೆ.

ನಾಯಕತ್ವದ ವಿಚಾರವಾಗಿ ವಿವಾದ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಮಧ್ಯೆ ಇತ್ತೀಚೆಗೆ ನಡೆದ ಬೆಳವಣಿಗೆ ಸಾಕಷ್ಟು ವಿವಾದವಾಗಿತ್ತು. ನಾಯಕತ್ವದಿಂದ ಕೆಳಗಿಳಿಸುವ ವಿಚಾರವಾಗಿ ಸೂಕ್ತ ಸಂವಹನವನ್ನು ನಡೆಸಲಿಲ್ಲ ಎಂದು ವಿರಾಟ್ ಕೊಹ್ಲಿ ಆಯ್ಕೆ ಸಮಿತಿಯ ಬಗ್ಗೆ ಅಸಮಾದಾನ ವ್ಯಕ್ತಪಡಿಸುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಡಿದ ಮಾತುಗಳನ್ನು ಉಲ್ಲೇಖಿಸಿ ತನ್ನೊಂದಿಗೆ ಆ ರೀತಿಯ ಸಂವಹನಗಳು ನಡೆದಿಲ್ಲ ಎಂದಿದ್ದರು. ವಿರಾಟ್ ಕೊಹ್ಲಿಯನ್ನು ಟಿ20 ನಾಯಕತ್ವದಲ್ಲಿ ಮುಂದುವರಿಸಲು ಸಾಕಷ್ಟು ಒತ್ತಾಯವನ್ನು ಮಾಡಲಾಗುತ್ತು ಎಂಬ ಸೌರವ್ ಗಂಗೂಲಿ ಮಾತನ್ನು ಸಾರಾಸಾಗಾಟಾಗಿ ತಳ್ಳಿ ಹಾಕಿದ್ದ ವಿರಾಟ್ ಕೊಹ್ಲಿ ಆ ದಿನ ಎಲ್ಲವೂ ಸುಗಮವಾಗಿ ನಡೆದಿತ್ತು. ಯಾರೂ ಕೂಡ ಟಿ20 ನಾಯಕತ್ವದಲ್ಲಿ ಮುಂದುವರಿಸಲು ನನ್ನಲ್ಲಿ ಒತ್ತಾಯವನ್ನು ಮಾಡಿರಲಿಲ್ಲ ಎಂದು ಕೊಹ್ಲಿ ಮಾಧ್ಯಮಗಳ ಮುಂದೆ ನೇರವಾಗಿಯೇ ಹೇಳಿಕೆ ನೀಡಿದ್ದರು. ಕೊಹ್ಲಿ ಆಡಿದ ಈ ಮಾತುಗಳು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು.

ಮುನಿಸು ಮರೆತರಾ ಗಂಗೂಲಿ
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಆಡಿದ ಮಾತು ಸಾಕಷ್ಟು ವಿವಾದವಾಗಿತ್ತು. ಆದರೆ ಈ ವಿಚಾರವಾಗಿ ಸೌರವ್ ಗಂಗೂಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಆದರೆ ಈ ವಿಚಾರವಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೊಹ್ಲಿ ವಿರುದ್ಧ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ ಆಡಿದ ಮಾತುಗಳು ಈ ಎಲ್ಲಾ ವಿವಾದಗಳನ್ನು ತಣ್ಣಗೆ ಮಾಡುವಂತಿದೆ. ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಭಾರೀ ನಿರೀಕ್ಷೆ ವ್ಯಕ್ತಪಡಿಸಿರುವ ಸೌರವ್ ಗಂಗೂಲಿ ಮುನಿಸಿನ ವಿಚಾರವಾಗಿದ್ದ ಎಲ್ಲಾ ಚರ್ಚೆಗಳನ್ನು ಬದಿಗೆ ಸರಿಸಿದ್ದಾರೆ.

ಸೌರವ್ ಗಂಗೂಲಿ ಹೇಳಿದ್ದೇನು?
"100ನೇ ಟೆಸ್ಟ್ ಪಂದ್ಯವನ್ನಾಡಲು ನೀವು ಅತ್ಯುತ್ತಮ ಆಟಗಾರನಾಗಿರಲೇಬೇಕಾಗುತ್ತದೆ. ಭಾರತದ ಕೆಲವೇ ಆಟಗಾರರು 100ನೇ ಟೆಸ್ಟ್ ಪಂದ್ಯವನ್ನಾಡಿದ ಸಾಧನೆ ಮಾಡಿದ್ದಾರೆ. ಅದೊಂದು ಅಮೋಘ ಮೈಲಿಗಲ್ಲು. ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರನಾಗಿದ್ದು ಈ ಸಾಧನೆಗೆ ಅವರು ಅತ್ಯಂತ ಅರ್ಹರು" ಎಂಬ ಮಾತನ್ನು ಸೌರವ್ ಗಂಗೂಲಿ ಆಡಿದ್ದಾರೆ. ಇದೇ ಸಂದರ್ಭದಲ್ಲಿ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಶತಕದೊಂದಿಗೆ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂಬ ಭವಿಷ್ಯ ನುಡಿದಿದ್ದಾರೆ.

ಶತಕಗಳಿಸುವುದು ಹೇಗೆಂದು ಕೊಹ್ಲಿಗೆ ಗೊತ್ತಿದೆ
"ವಿರಾಟ್ ಕೊಹ್ಲಿ ಶತಕದೊಂದಿಗೆ ಕಮ್‌ಬ್ಯಾಕ್ ಮಾಡಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಶತಕಗಳಿಸಿಲ್ಲ ಎಂಬ ಕಾರಣಕ್ಕೆ ಯಾವೆಲ್ಲಾ ರೀತಿಯ ಮಾತುಗಳು ಕೇಳಿ ಬರುತ್ತಿದೆ ಎಂಬುದು ನನಗೆ ಗೊತ್ತಿದೆ. ಆತನೋರ್ವ ಅತ್ಯುತ್ತಮ ಆಟಗಾರನಾಗಿದ್ದು ಈ ಹಂತವನ್ನು ಯಶಸ್ವಿಯಾಗಿ ದಾಟಲಿದ್ದಾರೆ. ಆತನಿಗೆ ಶತಕಗಳಿಸುವುದು ಹೇಗೆ ಎಂಬುದು ತಿಳಿಸಿದೆ. ಇಲ್ಲದಿದ್ದರೆ 70 ಶತಕಗಳು ಆತನಿಂದ ಬರುತ್ತಿರಲಿಲ್ಲ. ಮಾಜಿ ಆಟಗಾರನಾಗಿ ಆತ ಮತ್ತೊಮ್ಮೆ ರನ್ ಗಳಿಸಲಿದ್ದಾರೆ ಎಂಬುದು ನನಗೆ ಅರಿವಿದೆ. ಆತನಲ್ಲಿ ಅತ್ಯದ್ಭುತ ಶಕ್ತಿಯಿದೆ. ಇದು ಕೇವಲ ಸಮಯದ ವಿಚಾರವಷ್ಟೇ" ಎಂದು ಸೌರವ್ ಗಂಗೂಲಿ ವಿರಾಟ್ ಕೊಒಹ್ಲಿ ಫಾರ್ಮ್ ಬಗ್ಗೆ ಬೆಂಬಲವಾಗಿ ಮಾತನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications