
ಬೇಸರ ವ್ಯಕ್ತಪಡಿಸಿದ ಸುನಿಲ್ ಗವಾಸ್ಕರ್
ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ವಿರಾಟ್ ಕೊಹ್ಲಿಯ ನೂರನೇ ಟೆಸ್ಟ್ ಪಂದ್ಯ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಗವಾಸ್ಕರ್ ಬಿಸಿಸಿಐ ನಿರ್ಧಾರಕ್ಕೆ ಬೇಸರವನ್ನು ವ್ಯಕ್ತಪಡಿಸುತ್ತಲೇ ಈ ರೀತಿಯ ನಿರ್ಧಾರ ಅಗತ್ಯವಾಗಿತ್ತು ಎಂಬ ಮಾತನ್ನು ಕೂಡ ಹೇಳಿಕೊಂಡಿದ್ದಾರೆ. ಈ ನಿರ್ಧಾರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅಗತ್ಯದ ನಿರ್ಧಾರವೂ ಆಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ. ಸ್ಪೋರ್ಟ್ಸ್ ಟುಡೇಗೆ ನೀಡಿದ ಪ್ರತಿಕ್ರಿಯೆ ಸಂದರ್ಭದಲ್ಲಿ ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇದು ಅತ್ಯಂತ ವಿಶೇಷ ಸಂದರ್ಭ
"100ನೇ ಟೆಸ್ಟ್ ಪಂದ್ಯ ನಿಜಕ್ಕೂ ಅತ್ಯಂತ ವಿಶೇಷವಾದ ಸಂದರ್ಭ. ಬೇಸರದ ಸಂಗತಿಯೆಂದರೆ ಈ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶವಿಲ್ಲ. ಆದರೆ ಈ ನಿರ್ಧಾರವನ್ನು ಉತ್ತಮ ಕಾರಣಕ್ಕಾಗಿ ತೆಗೆದುಕೊಳ್ಳಲಾಗಿದೆ. ಈ ಪಂದ್ಯ ನಡೆಯುತ್ತಿರುವ ಮೊಹಾಲಿ ಸುತ್ತಮುತ್ತ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ" ಎಂದು ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.

ಆಟಗಾರರ ನೈತಿಕ ಸ್ಥೈರ್ಯ ಹೆಚ್ಚಿಸುತ್ತದೆ ಪ್ರೇಕ್ಷಕರ ಉಪಸ್ಥಿತಿ
ಇನ್ನು ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕ್ರಿಕೆಟಿಗರು ನಟರು ಸೇರಿದಂತೆ ಪ್ರತಿಯೊಬ್ಬರಿಗೂ ಪ್ರೇಕ್ಷಕರ ಉಪಸ್ಥಿತಿ ಎಷ್ಟು ಪ್ರಮುಖವಾಗುತ್ತದೆ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ. "ಪ್ರೇಕ್ಷಕರ ಉಪಸ್ಥಿತಿ ಅದರಲ್ಲೂ ವಿಶೇಷವಾಗಿ ತವರು ಅಂಗಳದ ಅಭಿಮಾನಿಗಳ ಬೆಂಬಲ ಪಂದ್ಯದ ಸಂದರ್ಭದಲ್ಲಿ ಆಟಗಾರರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ವಿರಾಟ್ ಕೊಹ್ಲಿ ಯಾವಾಗಲೂ ಅಭಿಮಾನಿಗಳ ಉಪಸ್ಥಿತಿಯನ್ನು ಬಹಳ ಇಷ್ಟಪಡುತ್ತಾರೆ. ದುರದೃಷ್ಟವಶಾತ್ ಅವರ ಒಂದು ಮಹತ್ವದ ಮೈಲಿಗಲ್ಲಿನ ಪಂದ್ಯ ಪ್ರೇಕ್ಷಕರಿಲ್ಲದೆ ನಡೆಯುತ್ತಿದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಯಾವಾಗ ನಡೆಯಲಿದೆ ಕೊಹ್ಲಿಯ 100ನೇ ಪಂದ್ಯ
ಭಾರತ ಹಾಗೂ ಶ್ರೀಲಂಕಾ ತಮಡಗಳು ಟಿ20 ಸರಣಿಯಲ್ಲಿ ಮುಖಾಮುಖಿಯಾಗಿದ್ದು ಕಳೆದ ಭಾನುವಾರ ಈ ಸರಣಿಯ ಅಂತಿಮ ಪಂದ್ಯ ಮುಕ್ತಾಯವಾಗಿದೆ. ಈ ಟಿ20 ಸರಣಿಯನ್ನು ಭಾರತ 3-0 ಅಂತರದಿಂದ ವಶಕ್ಕೆ ಪಡೆದಿದೆ. ಇದೀಗ ಎರಡೂ ತಮಡಗಳು ಕೂಡ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದ್ದು ಈ ಪಂದ್ಯ ಮುಂದಿನ ಶುಕ್ರವಾರ ಮಾರ್ಚ್ 4ರಂದು ಆರಂಭವಾಗಲಿದೆ. ಟೆಸ್ಟ್ ಸರಣಿಯಲ್ಲಿ ಕೂಡ ಭಾರತ ತಂಡ ಫೇವರೀಟ್ ತಂಡವಾಗಿ ಕಣಕ್ಕಿಳಿಯುತ್ತಿದ್ದು ಆತಿಥೇಯ ತಂಡಕ್ಕೆ ಪ್ರವಾಸಿ ಲಂಕಾ ಯಾವ ರೀತಿಯ ಪ್ರತಿರೋಧವನ್ನು ಒಡ್ಡಲಿದೆ ಎಂಬುದು ಕುತೂಹಲ ಮೂಡಿಸಿದೆ.


Click it and Unblock the Notifications
