Ind vs SL : ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಬಹುದಾದ ಆಟಗಾರರು

ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದ ಬಳಿಕ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನಾಡಲು ಸಜ್ಜಾಗಿದೆ. ಟಿ20 ಮತ್ತು ಏಕದಿನ ಸರಣಿಗಾಗಿ ಶ್ರೀಲಂಕಾ ಭಾರತ ಪ್ರವಾಸ ಕೈಗೊಂಡಿದೆ. ಟಿ20 ಸರಣಿಯ ಮೊದಲನೇ ಪಂದ್ಯ ಜನವರಿ 3 ರಂದು ನಡೆಯಲಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಹಲವು ಹಿರಿಯ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗಿದೆ. ಇದರಿಂದಾಗಿ ಹೊಸ ಮುಖಗಳಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಸೂರ್ಯಕುಮಾರ್ ಯಾದವ್ ಉಪನಾಯಕನಾಗಿ ಬಡ್ತಿ ಹೊಂದಿದ್ದಾರೆ.
ಶ್ರೀಲಂಕಾ ಏಷ್ಯಾಕಪ್‌ನಲ್ಲಿ ಭಾರತವನ್ನು ಸೋಲಿಸಿದ್ದು ಮಾತ್ರವಲ್ಲದೆ, ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಏಷ್ಯಾಕಪ್ ಟ್ರೋಫಿ ಗೆದ್ದಿತ್ತು.
ಶ್ರೀಲಂಕಾ ವಿರುದ್ಧ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಅನುಭವಿಗಳು ಮತ್ತು ಯುವ ಪ್ರತಿಭೆಗಳ ಸಂಯೋಜನೆ ಇದೆ. ಕೆಲವು ಯುವ ಆಟಗಾರರು ತಮ್ಮ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಲು ಕಾಯುತ್ತಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಆಯ್ಕೆಯಾಗಿರುವ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಪದಾರ್ಪಣಾ ಪಂದ್ಯವನ್ನು ಆಡಲು ಸಿದ್ಧವಾಗಿರುವ ಮೂವರು ಆಟಗಾರರು ಇವರು.

ತ್ರಿಪಾಠಿಗೆ ಅವಕಾಶ ಸಿಗುವ ಸಾಧ್ಯತೆ
ರಾಹುಲ್ ತ್ರಿಪಾಠಿ ಇತ್ತೀಚಿನ ದಿನಗಳಲ್ಲಿ ಭಾರತದ ಟಿ20 ಮತ್ತು ಏಕದಿನ ತಂಡಗಳ ಭಾಗವಾಗಿದ್ದಾರೆ. ಆದರೆ, ಅವರು ಇನ್ನೂ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿಲ್ಲ.
ಐಪಿಎಲ್‌ನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ಗಾಗಿ ಆಡಿದಾಗ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ನಂತರ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ಗಾಗಿ ಆಡಿದ್ದಾರೆ. 2022ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡಿದ್ದರು.
ಐಪಿಎಲ್‌ನಲ್ಲಿ 76 ಪಂದ್ಯಗಳಲ್ಲಿ 28 ಸರಾಸರಿ ಮತ್ತು 140 ಸ್ಟ್ರೈಕ್ ರೇಟ್‌ನೊಂದಿಗೆ 1798 ರನ್ ಗಳಿಸಿದ್ದಾರೆ. ಈಗ ಸನ್‌ರೈಸರ್ಸ್ ಹೈದರಾಬಾದ್‌ನೊಂದಿಗೆ, ಅವರು ಕಳೆದ ಋತುವಿನಲ್ಲಿ 158.24 ರ ದರದಲ್ಲಿ 413 ರನ್ ಗಳಿಸಿದರು. ಇದರಿಂದ ಅವರು ಭಾರತ ತಂಡಕ್ಕೆ ಆಯ್ಕೆಯಾಗಲು ಸಹಾಯವಾಯಿತು. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅವರು ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ವೇಗಿ ಶಿವಂ ಮಾವಿ ಪದಾರ್ಪಣೆ ಸಾಧ್ಯತೆ
2018ರಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಶಿವಂ ಮಾವಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. 140 ಕಿಲೋ ಮೀಟರ್ ಗಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅದೇ ವರ್ಷದ ಐಪಿಎಲ್ ಹರಾಜಿನಲ್ಲಿ ಅವರನ್ನು ಕೆಕೆಆರ್ 3 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು.
ಫಿಟ್ನೆಸ್, ಗಾಯದ ಸಮಸ್ಯೆಯಿಂದ ಮಾವಿ ನಂತರ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. 2023ರ ಮಿನಿ ಹರಾಜಿಗೆ ಮುನ್ನ ಕೆಕೆಆರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತು, 2023ರ ಮಿನಿಹರಾಜಿನಲ್ಲಿ ಗುಜರಾತ್ ಟೈಟಾನ್ಸ್ 6 ಕೋಟಿ ರುಪಾಯಿ ನೀಡಿ ಖರೀದಿ ಮಾಡಿದೆ.
ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ 7 ಪಂದ್ಯಗಳಲ್ಲಿ 14 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದು, ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ವೇಗದ ಬೌಲರ್ ಮುಕೇಶ್ ಕುಮಾರ್
ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಂಗಾಳ ಮೂಲದ ವೇಗಿ ತಂಡಕ್ಕೆ ಸೇರಿದ್ದರು, ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. 20 ಲಕ್ಷ ಮೂಲ ಬೆಲೆ ಹೊಂದಿದ್ದ ಅವರು, 2023ರ ಹರಾಜಿನಲ್ಲಿ 5.5 ಕೋಟಿ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ ಐದು ಪಂದ್ಯಗಳಲ್ಲಿ 20 ವಿಕೆಟ್ ಪಡೆದು ಗಮನ ಸೆಳೆದಿದ್ದರು. ನ್ಯೂಜಿಲೆಂಡ್ ಎ ತಂಡದ ವಿರುದ್ಧ ಆಡಿದ ಭಾರತ ಎ ತಂಡದಲ್ಲಿ ಸ್ಥಾನ ಪಡೆದ ಮುಕೇಶ್ ಕುಮಾರ್ 3 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅವರನ್ನು, ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿದ್ದು, ಅಲ್ಲೂ ಪ್ರಮುಖ ವಿಕೆಟ್ ಟೇಕರ್ ಆಗುವ ವಿಶ್ವಾಸದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications